ಮೈಸೂರು[ನ.30]: ಶಾಲೆಯಿಂದ ಮರಳಿ ಮನೆಗೆ ಹೋಗುತ್ತಿದ್ದ ಬಾಲಕಿಯನ್ನು ಅಡ್ಡಗಟ್ಟಿದ ಯುವಕನೋರ್ವ ಅರಿಶಿನದ ಕೊಂಬಿರುವ ದಾರವನ್ನು ಕಟ್ಟಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ನಡೆದಿದೆ.

ಗೆಳತಿಯೊಂದಿಗೆ ಮನೆಗೆ ಹೋಗುತ್ತಿದ್ದ ಬಾಲಕಿಯನ್ನು ಯುವರಿಬ್ಬರು ಅಡ್ಡಗಟ್ಟಿದ್ದಾರೆ. ಈ ವೇಳೆ ಒಬ್ಬ ಹಿಡಿದುಕೊಂಡು, ಮತ್ತೊಬ್ಬ ಅರಿಸಿನದ ದಾರವನ್ನು ಕಟ್ಟಿ, ನಾನು ನಿನ್ನನ್ನು ಮದುವೆಯಾಗಿದ್ದೇನೆ. ಈ ವಿಷಯವನ್ನು ಮನೆಯಲ್ಲಿ ತಿಳಿಸಿದರೆ ಕೊಂದು ಹಾಕುತ್ತೇನೆ ಎಂದು ಇಬ್ಬರು ಬಾಲಕಿಯರಿಗೂ ಕೊಲೆ ಬೆದರಿಕೆ ಹಾಕಿದ್ದಾನೆ.

ಮನೆಗೆ ಬಂದ ಬಾಲಕಿ ಕಣ್ಣೀರು ಹಾಕುತ್ತಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದು, ಬಾಲಕಿಯ ತಂದೆ ಬೆಟ್ಟದಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವಕರಿಬ್ಬರು ಪರಾರಿಯಾಗಿದ್ದು, ಬೆಟ್ಟದಪುರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.