Asianet Suvarna News Asianet Suvarna News

ದೊರೆಗೆ ದೂರಲು ದೂರದೂರಿಂದ ಬಂದ ಜನ: ಸಿಎಂಗೆ ಧಿಕ್ಕಾರವೆಂದವ ಜೈಕಾರ ಕೂಗಿದ!

ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ವಿಧಾನಸೌಧ ಆವರಣದಲ್ಲಿ ನಡೆಸಿದ ಜನಸ್ಪಂದನ ಕಾರ್ಯಕ್ರಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜ್ಯದ ಬಹುತೇಕ ಜಿಲ್ಲೆಗಳಿಂದ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಗಮಿಸಿದ್ದರು.

peoples participate in cm siddaramaiah janaspandana program gvd
Author
First Published Feb 9, 2024, 7:03 AM IST

ಬೆಂಗಳೂರು (ಫೆ.09): ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ವಿಧಾನಸೌಧ ಆವರಣದಲ್ಲಿ ನಡೆಸಿದ ಜನಸ್ಪಂದನ ಕಾರ್ಯಕ್ರಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜ್ಯದ ಬಹುತೇಕ ಜಿಲ್ಲೆಗಳಿಂದ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಗಮಿಸಿದ್ದರು.

ಹಿಂದಿನ ರಾತ್ರಿಯೇ ಬಂದಿದ್ದ ಜನ: ಜನಸ್ಪಂದನ ಕಾರ್ಯಕ್ರಮಕ್ಕಾಗಿ ದೂರದೂರುಗಳಿಂದ ಬುಧವಾರ ರಾತ್ರಿಯೇ ಜನ ಆಗಮಿಸಿದ್ದರು. ಗುರುವಾರ ಬೆಳಿಗ್ಗೆ 8.30 ಗಂಟೆಗೇ ಸಾರ್ವಜನಿಕರಿಂದ ಅರ್ಜಿ ಸ್ವೀಕಾರ, ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಯಿತು. ಕಂದಾಯ ಇಲಾಖೆಯ ಕೌಂಟರಿನಲ್ಲಿ ನಿರೀಕ್ಷೆಗೂ ಮೀರಿ ಜನರು ಸೇರಿದ್ದರಿಂದ ಮತ್ತೊಂದು ಕೌಂಟರ್‌ ತೆರೆದು ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಂದು ಇಲಾಖೆಗೂ ಪ್ರತ್ಯೇಕ ಕೌಂಟರ್‌ ತೆರೆಯಲಾಗಿತ್ತು.

ಸಿಎಂ ಸಿದ್ದರಾಮಯ್ಯ ಬಳಿ ಹಲವು ಸುಳ್ಳಿನ ಅಸ್ತ್ರಗಳಿವೆ: ಸಿ.ಟಿ.ರವಿ ಕಿಡಿ

ಭದ್ರತೆಗೆ 936 ಪೊಲೀಸರು: ಬೆಂಗಳೂರು ಕೇಂದ್ರ ಡಿಸಿಪಿ ಶೇಖರ್‌ ಅವರ ನೇತೃತ್ವದಲ್ಲಿ ವಿಧಾನಸೌಧದ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಒಟ್ಟು 936 ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. 8 ಎಸಿಪಿ, 23 ಇನ್ಸ್‌ಪೆಕ್ಟರ್‌, 58 ಸಬ್‌ ಇನ್ಸ್‌ಪೆಕ್ಟರ್‌, 205 ಪೊಲೀಸ್‌ ಕಾನ್ಸ್‌ಟೇಬಲ್‌, 142 ಮಹಿಳಾ ಪೊಲೀಸ್‌ ಸಿಬ್ಬಂದಿ, 500 ಗೃಹರಕ್ಷಕರನ್ನು ಭದ್ರತಾ ವ್ಯವಸ್ಥೆಗಾಗಿ ನಿಯೋಜಿಸಲಾಗಿತ್ತು.

ಹನಿ ನೀರು ಬರದಿದ್ದರೂ ₹18000 ಬಿಲ್‌!: ಯಲಹಂಕ ನಿವಾಸಿ ಎಸ್‌.ಪಿ. ಶಿವ ಎಂಬವರು ಸಂಪರ್ಕ ಪಡೆದು ನಲ್ಲಿಯಲ್ಲಿ ಇನ್ನೂ ನೀರು ಬರುವ ಮೊದಲೇ 18 ಸಾವಿರ ರು. ನೀರಿನ ಶುಲ್ಕ ಬಂದಿದ್ದು ಮೀಟರ್‌ ಸಮೇತ ಜನಸ್ಪಂದನಕ್ಕೆ ಬಂದು ಅರ್ಜಿ ಸಲ್ಲಿಸಿದ್ದು ವಿಶೇಷ. ಅಹವಾಲು ಸಲ್ಲಿಸಿದ ವ್ಯಕ್ತಿಗೆ ಪರಿಶೀಲಿಸಿ ಸಮಸ್ಯೆ ಇತ್ಯರ್ಥಪಡಿಸುವ ಭರವಸೆಯನ್ನು ಜಲಮಂಡಳಿ ಅಧಿಕಾರಿಗಳು ನೀಡಿದರು.

ಉಚಿತ ಬಸ್‌ ಸೇವೆ: ವಿಧಾನಸೌಧದ ಆವರಣದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಮುಖ್ಯಮಂತ್ರಿಯವರ ಜನಸ್ಪಂದನ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಿದ್ದರು. ಅವರಿಗೆ ಅನುಕೂಲವಾಗುವಂತೆ ಕೆಂಪೇಗೌಡ ಬಸ್‌ ನಿಲ್ದಾಣ ಮತ್ತು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ವಿಧಾನಸೌಧಕ್ಕೆ ಎರಡು ಬಿಎಂಟಿಸಿ ಬಸ್‌ಗಳ ಉಚಿತ ಸೇವೆ ಒದಗಿಸಲಾಗಿತ್ತು.

ಐವರ ಚಿಕಿತ್ಸೆಗೆ ನೆರವು: ಕಿಡ್ನಿ ಕಸಿ ಚಿಕಿತ್ಸೆಗಾಗಿ ರಾಮನಗರದ ವಿಜಯಕುಮಾರ್‌ ಬಿನ್‌ ನರಸಿಂಹಮೂರ್ತಿ ಅವರಿಗೆ 4 ಲಕ್ಷ ರು., ಅಸ್ಥಿಮಜ್ಜೆ (ಬೋನ್‌ ಮ್ಯಾರೋ) ಕಸಿಗಾಗಿ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬಸನಗೌಡ ಬಿರಾದಾರ್‌ ಅವರಿಗೆ 4 ಲಕ್ಷ ರು. ಮತ್ತು ತುಮಕೂರಿನ ಎಂಟು ವರ್ಷದ ಶಾಂಭವಿಯ ಶ್ರವಣ ಸಾಧನಕ್ಕಾಗಿ 50 ಸಾವಿರ ರು.ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಮಂಜೂರು ಮಾಡಿದರು. ಹಾಗೆಯೇ ಅಪಘಾತಕ್ಕೆ ಒಳಗಾದ ಲೋಕೇಶ್ ಪುಟ್ಟನಾಯಕ ಅವರಿಗೆ 50 ಸಾವಿರ ರು.ಗಳ ಪರಿಹಾರವನ್ನು ಘೋಷಿಸಿ ಪರಿಹಾರ ಬಿಡುಗಡೆ ಪತ್ರ ಮುಖ್ಯಮಂತ್ರಿಯವರು ನೀಡಿದರು. ಕೋಲಾರ ಜಿಲ್ಲೆಯ ಕೆಜಿಎಫ್‌ನ ಎಂಟು ವರ್ಷದ ಎನ್.ಕೃಷ್ಣ ಅವರಿಗೆ 1 ಲಕ್ಷ ರು.ಗಳ ಪರಿಹಾರವನ್ನು ಘೋಷಿಸಿದರು.

ವೈದ್ಯಕೀಯ ಶಿಕ್ಷಣಕ್ಕೆ 10 ಲಕ್ಷ ರು.: ಬೆಂಗಳೂರಿನ ನೂರ್ ಫಾತಿಮಾ ಬಿನ್ ಇಬ್ರಾಹಿಂ ಅವರಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವಿದ್ಯಾಭ್ಯಾಸ ಸಾಲ ಯೋಜನೆಯಡಿ ಕಜಕಿಸ್ತಾನದಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸಕ್ಕಾಗಿ 10 ಲಕ್ಷ ರು.ಗಳ ಮಂಜೂರಾತಿ ಪತ್ರವನ್ನು ಮುಖ್ಯಮಂತ್ರಿಗಳು ವಿದ್ಯಾರ್ಥಿನಿಯ ತಂದೆಗೆ ಹಸ್ತಾಂತರ ಮಾಡಿದರು.

ಅಂಗವಿಕಲೆಗೆ ಉದ್ಯೋಗದ ಭರವಸೆ: ಡಬಲ್ ಡಿಗ್ರಿ ಮುಗಿಸಿರುವ ಬೆಂಗಳೂರಿನ ವಿಶೇಷ ಚೇತನ ಯುವತಿ ನವ್ಯಶ್ರೀ ಅವರು ತಾಯಿ ರಮಾಮಣಿ ಅವರೊಂದಿಗೆ ಬಂದು ಉದ್ಯೋಗಕ್ಕಾಗಿ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದರು. ಉದ್ಯೋಗ ಮೇಳದ ವೇಳೆ ಈ ಅರ್ಜಿಯನ್ನು ಪರಿಗಣಿಸುವಂತೆ ಮುಖ್ಯಮಂತ್ರಿಗಳು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿ, ವಿಶೇಷ ಚೇತನ ಯುವತಿಗೆ ಉದ್ಯೋಗ ಭರವಸೆ ನೀಡಿದರು.

ಏರುಧ್ವನಿಯಲ್ಲಿ ಗದರಿದ ವ್ಯಕ್ತಿ: ಸಿಎಂಗೆ ಸಾಷ್ಟಾಂಗ ನಮಸ್ಕಾರ ಮಾಡಿದ ವ್ಯಕ್ತಿಯೊಬ್ಬರು ಜಮೀನಿಗೆ ನಕಾಶೆಯಲ್ಲಿ ದಾರಿ ಇದ್ದರೂ ಬಿಡುತ್ತಿಲ್ಲ ಎಂದು ಅಹವಾಲು ಸಲ್ಲಿಸಿದರು. ಈ ವೇಳೆ ಆಯ್ತು ಮಾಡೋಣ ಎಂದ ಸಿಎಂಗೆ ‘ಏನು ಆಯ್ತು ಮಾಡೋಣ? ಸುಮ್ಮನೆ ಹಾಗೆ ಅಂದುಬಿಟ್ಟರೆ ಹೇಗೆ’ ಎಂದು ಏಕಾಏಕಿ ಏರುಧ್ವನಿಯಲ್ಲಿ ಮಾತನಾಡಿದ್ದನ್ನು ಕಂಡು ಖುದ್ದು ಸಿಎಂ ಗದರಿದರು. ಆ ನಂತರ ಸಮಾಧಾನದಿಂದ ಮಾತನಾಡಪ್ಪ ಮಾಡಿಕೊಡ್ತೀನಿ ಎಂದು ಸಮಾಧಾನಪಡಿಸಿ ಐಎಎಸ್‌ ಅಧಿಕಾರಿ ರಾಜೇಂದ್ರ ಕುಮಾರ್‌ ಕಟಾರಿಯಾ ಬಳಿಗೆ ಕಳುಹಿಸಿಕೊಟ್ಟರು.

ಪಹಣಿ, ಜಮೀನಿಗೆ ದಾರಿಯದ್ದೇ ಸಮಸ್ಯೆ: ಕಂದಾಯ ಇಲಾಖೆ ಕೌಂಟರ್‌ನಲ್ಲಿ ಅಹವಾಲು ಸಲ್ಲಿಸುವವರ ಸಂಖ್ಯೆ ಮಿತಿಮೀರಿದ್ದರಿಂದ ಹೆಚ್ಚುವರಿಯಾಗಿ ಇನ್ನೆರಡು ಕೌಂಟರ್‌ ತೆರೆಯಲಾಗಿತ್ತು. ಹೆಚ್ಚಾಗಿ ಪಹಣಿ, ಖಾತೆ, ಜಮೀನಿಗೆ ದಾರಿಗೆ ಸಂಬಂಧಿಸಿದಂತಹ ಸಮಸ್ಯೆಗಳೇ ಹೆಚ್ಚಾಗಿ ಕಂಡುಬಂದಿದ್ದು, ಮುಂದಿನ ಒಂದು ತಿಂಗಳಲ್ಲಿ ಕಾನೂನುಬದ್ಧ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದರು.

ಧಿಕ್ಕಾರವೆಂದವ ಜೈಕಾರ ಕೂಗಿದ!: ಬೆಳಗ್ಗಿನಿಂದ ಸಿಎಂ ಆಗಮನಕ್ಕಾಗಿ ಕಾಯುತ್ತಿದ್ದ ವ್ಯಕ್ತಿಯೊಬ್ಬ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಅಹವಾಲೊಂದನ್ನು ತಂದಿದ್ದರು. ಮಧ್ಯಾಹ್ನವಾದರೂ ಸಮಸ್ಯೆ ಇತ್ಯರ್ಥವಾಗದ ಕಾರಣ, ಸಿಎಂ ಸಿದ್ದರಾಮಯ್ಯ ಅವರಿಗೆ ಧಿಕ್ಕಾರ ಎಂದು ಕೂಗುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಗಾಬರಿಗೊಂಡು ಆತನಿದ್ದ ಕಡೆಗೆ ಓಡಿ ಹಿಡಿದುಕೊಂಡರು. ಬೆಳಗ್ಗಿನಿಂದ ಕಾಯುತ್ತಿದ್ದರೂ ಯಾರೂ ನಮ್ಮ ಸಮಸ್ಯೆ ಕೇಳುತ್ತಿಲ್ಲ. ಸರ್ವರ್‌ ಸಮಸ್ಯೆ ಅಂತ ಸತಾಯಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಕೂಡಲೇ ಆತನ ಅಹವಾಲು ಸ್ವೀಕರಿಸಿ ಪರಿಹರಿಸುತ್ತಿದ್ದಂತೆ ಸಿದ್ದರಾಮಯ್ಯಗೆ ಜೈಕಾರ ಹಾಕಿ ವ್ಯಕ್ತಿ ಸಂತಸ ವ್ಯಕ್ತಪಡಿಸಿದ್ದು ವಿಶೇಷ.

ದೇಶದಲ್ಲಿ ಗಾಂಧಿ ಬಿಟ್ಟರೆ ಬರೀ ಸತ್ಯ ಹೇಳೋದು ಎಚ್‌ಡಿಕೆ ಒಬ್ಬರೇ: ಸಚಿವ ಸಚಿವ ಚಲುವರಾಯಸ್ವಾಮಿ

ಕುಳಿತಲ್ಲಿಗೆ ಊಟ!: ಅಂಗವಿಕಲರು, ಹಿರಿಯ ನಾಗರಿಕರಿಗೆ ಅವರಿರುವ ಜಾಗದಲ್ಲೇ ಊಟ ಸರಬರಾಜು ಮಾಡಲಾಯಿತು. ಅವರು ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ವ್ಹೀಲ್‌ಚೇರ್‌ ವ್ಯವಸ್ಥೆ ಮಾಡಿದ್ದ ಸರ್ಕಾರ, ಊಟದ ಸಮಯದಲ್ಲಿ ಅವರಿಗೆ ತೊಂದರೆಯಾಗದಂತೆ ಅವರು ಇರುವಲ್ಲಿಗೇ ಊಟ ಒದಗಿಸುವ ಕೆಲಸ ಮಾಡಿದ್ದು ಪ್ರಶಂಸೆಗೆ ಪಾತ್ರವಾಯಿತು. ಪಲಾವ್, ಪಕೋಡಾ, ಪೇಡ ಮತ್ತು ಮೊಸರನ್ನ ಇದ್ದ ಊಟವು ಜನರಿಗೆ ಇಷ್ಟವಾಯಿತು. ಎಲ್ಲೆಡೆ ಕುಡಿಯಲು ನೀರಿನ ವ್ಯವಸ್ಥೆ ಮತ್ತು ಮೊಬೈಲ್‌ ಶೌಚಾಲಯದ ವ್ಯವಸ್ಥೆಯನ್ನೂ ಸಹ ಮಾಡಲಾಗಿತ್ತು.

Follow Us:
Download App:
  • android
  • ios