ಬೆಂಗಳೂರು(ಜು.18): ರಾಜ್ಯದಲ್ಲಿ ಇದುವರೆಗೂ ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್‌ ವರದಿ ಬಂದವರಿಗೆ ಮಾತ್ರ ದೂರವಾಣಿ ಕರೆ ಅಥವಾ ಸಂದೇಶದ ಮೂಲಕ ಮಾಹಿತಿ ನೀಡಲಾಗುತ್ತಿದೆ. ಆದರೆ, ನೆಗೆಟಿವ್‌ ಬಂದವರಿಗೆ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಪರೀಕ್ಷೆಗೆ ಒಳಪಡುವವರು ತೀವ್ರ ಗೊಂದಲಕ್ಕೆ ಒಳಗಾಗುವಂತಹ ಪರಿಸ್ಥಿತಿ ನಿರ್ಮಿಸಲಾಗಿದೆ.

ಪರೀಕ್ಷೆಗೆ ಒಳಗಾದ ಶಂಕಿತರ ಸೋಂಕಿತರು ತಮ್ಮ ವರದಿ ಏನಾಯಿತೆಂದು ತಿಳಿಯಲು ಖುದ್ದು ಆಸ್ಪತ್ರೆ ಬಾಗಿಲಿಗೇ ಹೋಗಬೇಕು. ಅಲ್ಲದೆ, ಪರೀಕ್ಷೆಗೆ ಸ್ವಾಬ್‌ ನೀಡಿ ಬಂದು ಮನೆಯಲ್ಲಿ ಕ್ವಾರಂಟೈನ್‌ನಲ್ಲಿರುವವರು ಕೆಲವು ಬಾರಿ ಮೂರು ದಿನ, ಐದು ದಿನಗಳು ಕಳೆದರೂ ವರದಿ ಸಿಗುತ್ತಿಲ್ಲ. ಇದರಿಂದಾಗಿ ಅವರು ಎರಡು ಮೂರು ಬಾರಿ ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ.

'ರಾಜ್ಯದಲ್ಲಿ ಅತಿ ಹೆಚ್ಚು ಟೆಸ್ಟ್‌: WHO ಮಿತಿಗಿಂತ ಹೆಚ್ಚು ಪರೀಕ್ಷೆ!'

ಇನ್ನು, ‘ಆಸ್ಪತ್ರೆಗಳಿಂದ ನಿಮಗೆ ಮೂರು ನಾಲ್ಕು ದಿನವಾದರೂ ಪಾಸಿಟಿವ್‌ ವರದಿ ಬಂದಿಲ್ಲ ಎಂದರೆ ನೆಗೆಟಿವ್‌ ಎಂದು ಸಾಮಾನ್ಯವಾಗಿ ತಿಳಿದುಕೊಳ್ಳಿ’ ಎನ್ನುವ ಉತ್ತರವೂ ಬರುತ್ತಿದೆ. ಒಂದೆಡೆ ಸರ್ಕಾರ ಕೊರೋನಾ ಪರೀಕ್ಷೆಗೆ ಒಳಗಾದವರು ವರದಿ ಬರುವವರೆಗೂ ಮನೆಯಲ್ಲೇ ಇರಬೇಕು. ಹೊರಗೆ ಬರಬಾರದು ಎಂದು ಕಟ್ಟು ನಿಟ್ಟಾಗಿ ಸೂಚಿಸುತ್ತಿದೆ.

ಅಲ್ಲದೆ, ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಲಾಗುತ್ತಿದೆ. ಆದರೆ, ನೆಗೆಟಿವ್‌ ವರದಿ ಬಂದವರ ಮೊಬೈಲ್‌ಗೆ ಕರೆಯಾಗಲಿ, ಸಂದೇಶವಾಗಲಿ ಬರದಿರುವುದರಿಂದ ಕ್ವಾರಂಟೈನ್‌ನಲ್ಲಿರುವವರು ತಾವೇನು ಮಾಡಬೇಕು ಎಂಬ ಗೊಂದಲಕ್ಕೆ ಸಿಲುಕುತ್ತಿದ್ದಾರೆ.

ಪರೀಕ್ಷೆಗೆ ಒಳಗಾದವರ ಅಳಲು:

‘ನಾನು ಕೋವಿಡ್‌ ಪರೀಕ್ಷೆಗೆ ಒಳಗಾಗಿ ಐದು ದಿನ ಕ್ವಾರಂಟೈನ್‌ನಲ್ಲೇ ಇದ್ದೆ. ಮೊಬೈಲ್‌ಗೆ ಸಂದೇಶ ಇಲ್ಲವೇ ಕರೆ ಬರುತ್ತದೆ ಎಂದು ಆಸ್ಪತ್ರೆಯವರು ಹೇಳಿದ್ದರು. ಆದರೆ, ಐದು ದಿನವಾದರೂ ಯಾವುದೇ ಮಾಹಿತಿ ಬರದಿದ್ದಾಗ ಭಯದಿಂದಲೇ ಆಸ್ಪತ್ರೆಗೆ ಹೋಗಿ ವಿಚಾರಿಸಿದೆ. ಅದಕ್ಕೆ ಆಸ್ಪತ್ರೆ ಸಿಬ್ಬಂದಿ ನಿಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದಾದರೆ ಅದು ನೆಗೆಟಿವ್‌ ಎಂದುಕೊಳ್ಳಿ ಎಂದರು. ಆದರೆ, ಯಾವುದೇ ದೃಢೀಕರಣ ನೀಡಿಲ್ಲ. ಇದರಿಂದ ಒಂದೆಡೆ ಸಮಾಧಾನ, ಇನ್ನೊಂದೆಡೆ ತಡವಾಗಿ ವರದಿ ಬಂದು ಪಾಸಿಟಿವ್‌ ಎಂದರೆ ಏನು ಮಾಡಬೇಕೆಂಬ ಆತಂಕ ಎರಡೂ ಇದೆ’ ಎನ್ನುತ್ತಾರೆ ಶಂಕರ ಮಠ ಪ್ರದೇಶದ ನಿವಾಸಿ ರಂಗನಾಥ (ಹೆಸರು ಬದಲಿಸಲಾಗಿದೆ).

‘ಇತ್ತೀಚಿನ ದಿನಗಳಲ್ಲಿ ಕೆಲಸ ಮಾಡುವ ಸಂಸ್ಥೆಗಳು, ಯಾವುದೇ ಆಸ್ಪತ್ರೆಗೆ ಸಣ್ಣ ಪುಟ್ಟಚಿಕಿತ್ಸೆಗೆ ಹೋದರೂ ಮೊದಲು ಕೊರೋನಾ ನೆಗೆಟಿವ್‌ ವರದಿ ತರುವಂತೆ ಕೇಳುತ್ತಿವೆ. ಇಂತಹ ಸಂದರ್ಭದಲ್ಲಿ ನೆಗೆಟಿವ್‌ ಎಂಬ ದೃಢೀಕರಣ ನೀಡದಿರುವುದು ಸರಿಯೇ’ ಎಂದು ಅವರು ಪ್ರಶ್ನಿಸುತ್ತಾರೆ.

ರಾಜ್ಯದಲ್ಲಿ ಶೇ.68 ಸೋಂಕಿತರ ಸೋಂಕಿನ ಮೂಲವೇ ಗೊತ್ತಿಲ್ಲ!

‘ಕೆಲ ಹಣವಂತರು ಒಂದೆರಡು ದಿನ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ವರದಿ ಪಡೆಯುತ್ತಿದ್ದಾರೆ. ಆದರೆ, ಬಡವರು ಸಮೀಪದ ಕೋವಿಡ್‌ ಆಸ್ಪತ್ರೆ, ಫೀವರ್‌ ಕ್ಲಿನಿಕ್‌ಗಳಲ್ಲಿ ಸ್ವಾಬ್‌ ನೀಡಿ ಬಂದು ಮೂರು ನಾಲ್ಕು ದಿನಗಳಾದರೂ ವರದಿ ಸಿಗುತ್ತಿಲ್ಲ. ಇಂತಹವರಿಗೆ ತಡವಾಗಿ ಪಾಸಿಟಿವ್‌ ವರದಿ ಬಂದರೆ ಆ ವ್ಯಕ್ತಿ ಇನ್ನಷ್ಟು ಜನರಿಗೆ ಸೋಂಕು ಹಬ್ಬಿಸಿದಂತಾಗುವುದಿಲ್ಲವೇ ಎಂದು ಅವರು ಪ್ರಶ್ನಿಸುತ್ತಾರೆ. ಅಲ್ಲದೆ, ಪಾಸಿಟಿವ್‌ ವರದಿ ಬಂದವರಿಗೆ ನೀಡುವಂತೆ ನೆಗೆಟಿವ್‌ ವರದಿ ಬಂದವರಿಗೂ ಮೊಬೈಲ್‌ಗೆ ಸಂದೇಶ ಕಳುಹಿಸಬೇಕು’ ಎಂದು ಆಗ್ರಹಿಸುತ್ತಾರೆ.