Asianet Suvarna News Asianet Suvarna News

ರಾಜ್ಯದಲ್ಲಿ ಶೇ.68 ಸೋಂಕಿತರ ಸೋಂಕಿನ ಮೂಲವೇ ಗೊತ್ತಿಲ್ಲ!

ಶೇ.68 ಸೋಂಕಿತರ ಸೋಂಕಿನ ಮೂಲವೇ ಗೊತ್ತಿಲ್ಲ!| 51,422 ಕೊರೋನಾ ಪ್ರಕರಣ ಅವಲೋಕಿಸಿದಾಗ ತಿಳಿಯದ ಮೂಲ| ಸಮುದಾಯಕ್ಕೆ ಹರಡಿರುವ ಸಂದೇಹಕ್ಕೆ ಬಲ

Origin Of Infection Is Not Found Nearly 68 Percent Covid Infected People in Karnataka
Author
Bangalore, First Published Jul 18, 2020, 7:27 AM IST

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ಜು.18): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿನ ವೇಗ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ಗುರುವಾರದವರೆಗೆ ವರದಿಯಾಗಿರುವ 51,422 ಪ್ರಕರಣಗಳ ಪೈಕಿ ಶೇ.67.82 ಮಂದಿಗೆ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ಇದು ರಾಜ್ಯದಲ್ಲಿ ಕೊರೋನಾ ಸಮುದಾಯದ ಮಟ್ಟಕ್ಕೆ ಮುಟ್ಟಿದೆಯೇ ಎಂಬ ಅಪಾಯಕಾರಿ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಏಕೆಂದರೆ, ‘ರಾಜ್ಯದಲ್ಲಿ ಸೋಂಕು ಹಬ್ಬುತ್ತಿರುವ ಪ್ರಮಾಣದಿಂದಾಗಿ ಸೋಂಕಿನ ಮೂಲ ಹಾಗೂ ಸಂಪರ್ಕಗಳ ಪತ್ತೆಯೇ ಸಾಧ್ಯವಾಗುತ್ತಿಲ್ಲ’ ಎಂದು ಸ್ವತಃ ಆರೋಗ್ಯ ಇಲಾಖೆ ಅಧಿಕಾರಿಗಳೇ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಹೀಗಿದ್ದರೂ ರಾಜ್ಯ ಸರ್ಕಾರ ಮಾತ್ರ ಸೋಂಕು ಸಮುದಾಯಕ್ಕೆ ಹರಡಿದೆ ಎಂಬುದನ್ನು ಒಪ್ಪುತ್ತಿಲ್ಲ.

ಆರೋಗ್ಯ ಇಲಾಖೆ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಪ್ರತಿ 1 ನಿಮಿಷಕ್ಕೆ ಇಬ್ಬರಿಗೆ ಸೋಂಕು ದೃಢಪಡುತ್ತಿದೆ. ಬೆಂಗಳೂರು ನಗರದಲ್ಲೇ ಪ್ರತಿ 1 ನಿಮಿಷಕ್ಕೆ ಒಬ್ಬರಿಗೆ ಸೋಂಕು ದೃಢಪಡುತ್ತಿದೆ. ಜತೆಗೆ ಬಹುತೇಕರ ಸೋಂಕಿನ ಮೂಲ ಪತ್ತೆಯಾಗಿಲ್ಲ. ಜು.16ರವರೆಗಿನ 51422 ಪ್ರಕರಣಗಳಲ್ಲಿ 34,875 ಮಂದಿಗೆ ಸೋಂಕು ಯಾರಿಂದ? ಹೇಗೆ ಬಂತು ಎಂಬುದು ತಿಳಿದುಬಂದಿಲ್ಲ. ಈ ಪೈಕಿ 26,302 ಪ್ರಕರಣಗಳ ಬಗ್ಗೆ ಕನಿಷ್ಠ ಮಾಹಿತಿಯೂ ಲಭ್ಯವಾಗಿಲ್ಲ.

ಚಾಲಕನ ಬದುಕಿಸಲು ಉಸಿರು ಕೊಟ್ಟ 10 ಮಂದಿಗೆ ಕೊರೋನಾ!

ಇದಲ್ಲದೆ ಐಎಲ್‌ಐ (ವಿಷಮಶೀತ ಜ್ವರ) ಲಕ್ಷಣ ಹಿನ್ನೆಲೆಯ 7186 ಮಂದಿ ಹಾಗೂ ಸಾರಿ (ತೀವ್ರ ಉಸಿರಾಟ ತೊಂದರೆ) ಹಿನ್ನೆಲೆಯ 1387 ಮಂದಿಗೆ ಸೋಂಕು ದೃಢಪಟ್ಟಿದೆ. ಆದರೆ, ಇವರಿಗೆ ಯಾರಿಂದ ಸೋಂಕು ತಗುಲಿದೆ ಎಂಬುದೂ ಸಹ ಈವರೆಗೂ ಪತ್ತೆಯಾಗಿಲ್ಲ. ಉಳಿದಂತೆ 8487 ಮಂದಿಗೆ ಮಾತ್ರ ಸಂಪರ್ಕಿತರಿಂದ ಸೋಂಕು ತಗುಲಿದೆ. 7442 ಮಂದಿಗೆ ಅಂತರ್‌ರಾಜ್ಯ ಹಾಗೂ ಅಂತರ್‌ ಜಿಲ್ಲಾ ಪ್ರಯಾಣದಿಂದ ಸೋಂಕು ತಗುಲಿದೆ. 616 ಮಂದಿ ವಿದೇಶಿ ಪ್ರಯಾಣಿಕರಿಗೆ ಸೋಂಕು ತಗುಲಿದೆ.

ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಆರೋಗ್ಯ ಇಲಾಖೆಯಲ್ಲಿ ಸಂಪರ್ಕ ಪತ್ತೆಗೆ ಇರುವ ಸಿಬ್ಬಂದಿಗೂ ಹಾಗೂ ವರದಿಯಾಗುತ್ತಿರುವ ಪ್ರಕರಣಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಇರುವ ಸಿಬ್ಬಂದಿಯನ್ನು ಬಳಸಿಕೊಂಡು ಸೋಂಕು ಮೂಲ ಪತ್ತೆಗೆ ಹೋಗಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಇದೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಪ್ರಾಥಮಿಕ ಸಂಪರ್ಕಿತರ ಪತ್ತೆಯೇ ಇಲ್ಲ!: ಕಳೆದ 30 ದಿನದಿಂದಲೂ ಪ್ರಾಥಮಿಕ ಸಂಪರ್ಕಿತರ ಪತ್ತೆಗೂ ಹೆಣಗಾಡುವಂತಾಗಿದೆ. ಆರಂಭದಲ್ಲಿ ಪ್ರತಿಯೊಬ್ಬ ಸೋಂಕಿತನಿಗೆ ಸರಾಸರಿ 45 ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡುವ ಮೂಲಕ ಕೇಂದ್ರ ಸರ್ಕಾರದಿಂದ ಶಹಬ್ಬಾಸ್‌ಗಿರಿ ಪಡೆದಿದ್ದ ರಾಜ್ಯವು ಇದೀಗ ಒಬ್ಬ ಸೋಂಕಿತನ ಸರಾಸರಿ 3-4 ಮಂದಿ ಪ್ರಾಥಮಿಕ ಸಂಪರ್ಕಿತರನ್ನಷ್ಟೇ ಪತ್ತೆ ಮಾಡುತ್ತಿದೆ. ಕೇವಲ ಕುಟುಂಬ ಸದಸ್ಯರನ್ನುಪ್ರಾಥಮಿಕ ಸದಸ್ಯರೆಂದು ತೋರಿಸಿ ಕೈ ತೊಳೆದುಕೊಳ್ಳುತ್ತಿದೆ. ಹೀಗಾಗಿಯೇ ಕರೋನಾ ಪಸರಿಸುವಿಕೆಯನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸಲು ಆಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

'ರಾಜ್ಯದಲ್ಲಿ ಅತಿ ಹೆಚ್ಚು ಟೆಸ್ಟ್‌: WHO ಮಿತಿಗಿಂತ ಹೆಚ್ಚು ಪರೀಕ್ಷೆ!'

ಪ್ರತಿ 1 ನಿಮಿಷಕ್ಕೆ ಇಬ್ಬರಿಗೆ ಸೋಂಕು!

ರಾಜ್ಯದಲ್ಲಿ ಕಳೆದ ಏಳು ದಿನಗಳಿಂದ ಜು.11 ರಿಂದ ಜು.17ರವರೆಗೆ ಪ್ರತಿ ಒಂದು ನಿಮಿಷಕ್ಕೆ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರು ನಗರದಲ್ಲಿ 7 ದಿನದಲ್ಲಿ 10,634 ಮಂದಿಗೆ ಸೋಂಕು ದೃಢಪಟ್ಟಿದ್ದು ಪ್ರತಿ ಒಂದು ನಿಮಿಷಕ್ಕೆ ಒಂದು ಸೋಂಕು ದೃಢಪಡುತ್ತಿದೆ. ಇನ್ನು ರಾಜ್ಯದಲ್ಲಿ ಕಳೆದ ಏಳು ದಿನಗಳಲ್ಲಿ ಪ್ರತಿ ಒಂದು ಗಂಟೆಗೆ ಮೂರು ಮಂದಿ ಸೋಂಕಿತರು (3.17) ಬಲಿಯಾಗಿದ್ದರೆ, ಬೆಂಗಳೂರಿನಲ್ಲಿ ಪ್ರತಿ ಗಂಟೆಗೆ ಇಬ್ಬರು ಬಲಿಯಾಗಿದ್ದಾರೆ.

100 ಪರೀಕ್ಷೆಯಲ್ಲಿ ಶೇ.26 ಮಂದಿಗೆ ಸೋಂಕು

ಕಳೆದ ಏಳು ದಿನಗಳಲ್ಲಿ ಬೆಂಗಳೂರಿನಲ್ಲಿ ಪ್ರತಿ 100 ಪರೀಕ್ಷೆಯಲ್ಲಿ ಶೇ.26.5 ಮಂದಿಗೆ ಸೋಂಕು ದೃಢಪಡುತ್ತಿದೆ. ಧಾರವಾಡದಲ್ಲಿ ಪರೀಕ್ಷೆ ನಡೆಸಿದ ಪ್ರತಿ 100 ಮಂದಿಗೆ ಶೇ 35.3 ಮಂದಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಪ್ರತಿ 100 ಪರೀಕ್ಷೆಗಳಲ್ಲಿ ಸರಾಸರಿ 15.5 ಮಂದಿಗೆ ಸೋಂಕು ದೃಢವಾಗುತ್ತಿದೆ. ಇದಕ್ಕಿಂತ ಆತಂಕಕಾರಿ ಎಂದರೆ, ಬೆಂಗಳೂರಿನಲ್ಲಿ ಪ್ರತಿ 10 ಲಕ್ಷ ಮಂದಿಗೆ ಬರೋಬ್ಬರಿ 52 ಮಂದಿ ಈಗಾಗಲೇ ಬಲಿಯಾಗಿದ್ದಾರೆ. ರಾಜ್ಯದ ಜನಸಂಖ್ಯೆಗೆ ಪ್ರತಿ 10 ಲಕ್ಷ ಮಂದಿಗೆ 16.8 ಮಂದಿ ಸಾವು ಉಂಟಾಗಿದೆ.

Follow Us:
Download App:
  • android
  • ios