ಹಾಸನ[ಫೆ.06]: ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಕೇವಲ 60 ರು. ಪಾವತಿಸಿ ಆನ್‌ಲೈನ್‌ ಅರ್ಜಿ ಸಲ್ಲಿಸಿದರೆ ಉಚಿತ ನಿವೇಶನ ಸಿಗುತ್ತದೆ ಎಂಬ ವದಂತಿ ಹಬ್ಬಿದ ಪರಿಣಾಮ ಜನರು ಇಂಟರ್‌ನೆಟ್‌ ಸೆಂಟರ್‌ ಒಂದರ ಮುಂದೆ ಜಮಾಯಿಸಿ ಅರ್ಜಿ ಸಲ್ಲಿಸಿದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ. ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿದ ನಗರ ಠಾಣೆ ಪೊಲೀಸರು ಅಂಗಡಿ ಬಂದ್‌ ಮಾಡಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದು ಗುಡಿಸಲು ಮುಕ್ತ ಯೋಜನೆಯಾಗಿದ್ದು, ಹೊಸದಾಗಿ ಮನೆಕಟ್ಟಿಕೊಳ್ಳುವವರು pಞayಞಜಿs.ಜಟv.ಜ್ಞಿ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು ಉಚಿತ ನಿವೇಶನ ಸಿಗಲಿದೆ ಎಂದು ಯಾರೋ ಹಬ್ಬಿಸಿದ ಸುಳ್ಳು ಮಾಹಿತಿಯನ್ನು ನಂಬಿದ ಜನರು ಹಾಸನದ ಕಾರ್ಮಿಕ ಇಲಾಖೆ ಪಕ್ಕದಲ್ಲಿ ಇರುವ ಇಂಟರ್‌ನೆಟ್‌ ಪಾರ್ಲರ್‌ ಮುಂದೆ ಸರತಿ ಸಾಲಿನಿಲ್ಲಿ ನಿಂತು ಅರ್ಜಿ ಸಲ್ಲಿಸಿದರು.

ನಗರದ ನಿವಾಸಿಗಳು ಮಾತ್ರವಲ್ಲಗೆ ಜಿಲ್ಲೆಯ ಗ್ರಾಮೀಣ ಭಾಗಗಳಿಂದಲೂ ತಂಡೋಪ ತಂಡವಾಗಿ ಜನ ಬರುತ್ತಿದ್ದರು. ಸುದ್ದಿ ತಿಳಿದ ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಇದೊಂದು ವದಂತಿಯಾಗಿದ್ದು, ಉಚಿತವಾಗಿ ನಿವೇಶನ ನೀಡುವ ಯೋಜನೆ ಇಲ್ಲ ಎಂದು ಸಾರ್ವಜನಿಕರನ್ನು ಸಾಗಹಾಕಿದರು.