ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ಜೂ.11): ರಾಜ್ಯದಲ್ಲಿ ಕೊರೋನಾ ಲಸಿಕೆ ಅಭಿಯಾನ ಪ್ರಾರಂಭವಾಗಿ ನಾಲ್ಕೂವರೆ ತಿಂಗಳು ಕಳೆದಿದ್ದು ಈಗಾಗಲೇ 1.36 ಕೋಟಿ ಡೋಸ್‌ ಲಸಿಕೆ ವಿತರಣೆಯಾಗಿದೆ. ಆದರೂ, ಬಹುತೇಕರಲ್ಲಿ ಲಸಿಕೆ ಬಗ್ಗೆ ಇನ್ನೂ ಹಲವಾರು ಗೊಂದಲಗಳು ಮನೆ ಮಾಡಿವೆ.

ಲಭ್ಯವಿರುವ ಎರಡು ಲಸಿಕೆಗಳಲ್ಲಿ ಯಾವುದು ಸೂಕ್ತ? ತಾವು ಯಾವ ಲಸಿಕೆ ಪಡೆದರೆ ಉಪಯುಕ್ತ? ಮಾರುಕಟ್ಟೆಗೆ ಬರಲಿರುವ ಲಸಿಕೆಗೆ ಕಾಯಬೇಕೆ? ಈಗಲೇ ಪಡೆಯಬೇಕೆ ಎಂಬಿತ್ಯಾದಿ ಅನಗತ್ಯ ಗೊಂದಲ ಸೃಷ್ಟಿಯಾಗಿವೆ. ಇವುಗಳಿಗೆ ತಜ್ಞರ ಅಭಿಪ್ರಾಯ ಆಧರಿಸಿದ ಉತ್ತರ ಇಲ್ಲಿದೆ.

ಯಾವ ಲಸಿಕೆ ಸೂಕ್ತ?

ಪ್ರಸ್ತುತ ನಮ್ಮ ದೇಶದಲ್ಲಿ ಕೊವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆ ಮಾತ್ರ ಲಭ್ಯವಿದೆ. ಶೀಘ್ರ ಸ್ಪುಟ್ನಿಕ್‌ -ವಿ ಲಸಿಕೆಯೂ ಲಭ್ಯವಾಗಲಿದೆ. ಮೂರೂ ಲಸಿಕೆಗಳೂ ಉತ್ತಮವಾಗಿದ್ದು ತಮಗೆ ತ್ವರಿತವಾಗಿ ಯಾವ ಲಸಿಕೆ ಸಿಗುತ್ತದೆಯೋ ಅಥವಾ ಯಾವುದು ತೆಗೆದುಕೊಳ್ಳಬೇಕು ಎಂದು ಅನಿಸುತ್ತದೆಯೋ ಅದನ್ನು ಪಡೆಯಬಹುದು. ಮೂರೂ ಲಸಿಕೆಗಳಲ್ಲಿ ಕನಿಷ್ಠ ವ್ಯತ್ಯಾಸಗಳಿದ್ದು ಫಲಿತಾಂಶ ಬಹುತೇಕ ಒಂದೇ ಆಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಕೋವ್ಯಾಕ್ಸಿನ್‌ಗಿಂತ ಕೋವಿಶೀಲ್ಡ್‌ ಲಸಿಕೆಗೆ ಹೆಚ್ಚು ರೋಗನಿಗ್ರಹ ಶಕ್ತಿ!

ಕೋವ್ಯಾಕ್ಸಿನ್‌ ಯಾರಿಗೆ ಉತ್ತಮ?:

ತಜ್ಞ ವೈದ್ಯರ ಪ್ರಕಾರ ಕೆಲವು ವಯೋಮಾನದ ಹಾಗೂ ದೀರ್ಘಕಾಲೀನ ಅನಾರೋಗ್ಯ ಸಮಸ್ಯೆಯುಳ್ಳವರು ತಮಗೆ ಎರಡೂ ವ್ಯಾಕ್ಸಿನ್‌ ಲಭ್ಯವಿರುವುದಾದರೆ ನಿರ್ದಿಷ್ಟ ವ್ಯಾಕ್ಸಿನ್‌ ಆಯ್ದು ಪಡೆಯುವುದು ಉತ್ತಮ. ಉತ್ತಮ ಲಸಿಕೆ ಎಂದು ಸಾಬೀತಾಗಿದೆ. ಡಬಲ್‌ ಮ್ಯುಟೆಂಟ್‌ ಮೇಲೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜತೆಗೆ ಈವರೆಗೆ ಪ್ರಯೋಗಕ್ಕೆ ಒಳಗಾಗಿರುವ ಲಸಿಕೆಗಳ ಪೈಕಿ ಅತಿ ಕಡಿಮೆ ಅಡ್ಡ ಪರಿಣಾಮ ಉಂಟು ಮಾಡಿದೆ. ಹೀಗಾಗಿ ನೋವು ಅಥವಾ ಅಡ್ಡ ಪರಿಣಾಮದ ಬಗ್ಗೆ ಎಚ್ಚರ ವಹಿಸುವವರು ಕೋವ್ಯಾಕ್ಸಿನ್‌ ತೆಗೆದುಕೊಳ್ಳಬಹುದು. ಇನ್ನು ಕೋವಿಶೀಲ್ಡ್‌ ನಿಂದಾಗಿ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಕಂಡು ಬಂದಿದೆ. ಹೀಗಾಗಿ ಬ್ಲಡ್‌ ಕ್ಲಾಟಿಂಗ್‌ ಸಮಸ್ಯೆ ಹೊಂದಿರುವವರು ಸಹ ಕೋವ್ಯಾಕ್ಸಿನ್‌ ಲಸಿಕೆ ಪಡೆಯಬಹುದು. ಈಗಾಗಲೇ ಬ್ಲಡ್‌ ತಿನ್ನರ್‌ನಂತಹ ಔಷಧಿ ಪಡೆಯುತ್ತಿರುವವರು ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆದೇ ಲಸಿಕೆ ಪಡೆಯಬೇಕು ಎಂಬುದು ವೈದ್ಯರ ಸಲಹೆ.

ಕೋವಿಶೀಲ್ಡ್‌ ಯಾರಿಗೆ ಉತ್ತಮ?:

ಕೋವಿಶೀಲ್ಡ್‌ ಲಸಿಕೆ ಹೆಚ್ಚು ಆ್ಯಂಟಿಬಾಡಿಸ್‌ ಉತ್ಪಾದನೆ ಮಾಡುತ್ತದೆ. ಮೊದಲ ಡೋಸ್‌ನಿಂದ ಉತ್ಪತ್ತಿಯಾದ ಆ್ಯಂಟಿಬಾಡಿಸ್‌ 12 ವಾರಗಳವರೆಗೆ ಇರುತ್ತವೆ. ಹೀಗಾಗಿ ಸುದೀರ್ಘ ಕಾಲ ಸೋಂಕಿನಿಂದ ರಕ್ಷಣೆಗೆ ಕೋವಿಶೀಲ್ಡ್‌ ಉತ್ತಮ. ಕೆಲ ಸಣ್ಣ ಅಡ್ಡ ಪರಿಣಾಮ ಹೊರತುಪಡಿಸಿ ಸುರಕ್ಷಿತ ಎಂಬುದು ಸಾಬೀತಾಗಿದೆ.

'45 ವರ್ಷ ಮೇಲ್ಪಟ್ಟವರಿಗೆ ವಾರದಲ್ಲಿ ಲಸಿಕೆ ಹಾಕಿ'

ಅಂತಿಮವಾಗಿ ಎರಡೂ ಲಸಿಕೆ ಸಮಾನ ಫಲಿತಾಂಶ ನೀಡುತ್ತವೆ. ಎರಡೂ ಲಸಿಕೆಯೂ ಕೊರೋನಾ ಸೋಂಕಿಗೆ ಒಳಗಾಗುವುದನ್ನು ಸಂಪೂರ್ಣ ತಪ್ಪಿಸುವುದಿಲ್ಲ. ಆದರೆ, ಸೋಂಕಿನ ತೀವ್ರತೆ ಹಾಗೂ ಸಾವಿನ ಪ್ರಮಾಣ ಕಡಿಮೆ ಮಾಡುತ್ತದೆ.

ಲಸಿಕೆ ಹಾಗೂ ಪರಿಣಾಮ: 

ಕೋವಿಶೀಲ್ಡ್‌ :

2020ರ ಡಿಸೆಂಬರ್‌ನಲ್ಲಿ ನಡೆದ 3ನೇ ಹಂತದ ಟ್ರಯಲ್ಸ್‌ ಪ್ರಕಾರ 11,636 ಮಂದಿ ಸ್ವಯಂ ಸೇವಕರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಶೇ.70.4ರಷ್ಟುಮಂದಿಗೆ ಎರಡನೇ ಡೋಸ್‌ ನೀಡುವ ವೇಳೆಗೆ ಶೇ.90 ರಷ್ಟುಮಂದಿಗೆ ಪರಿಣಾಮಕಾರಿ ಎಂದು ಸಾಬೀತಾಗಿದೆ.

ಕೋವ್ಯಾಕ್ಸಿನ್‌:

ಜನವರಿಯಲ್ಲಿ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಐಸಿಎಂಆರ್‌, ರಾಷ್ಟ್ರೀಯ ವೈರಾಣು ಸಂಸ್ಥೆ ಸಹಭಾಗಿತ್ವದಲ್ಲಿ ಭಾರತ್‌ ಬಯೋಟೆಕ್‌ ಲಸಿಕೆ ಉತ್ಪಾದಿಸುತ್ತಿದ್ದು, 3ನೇ ಹಂತದ ಪ್ರಯೋಗದಲ್ಲಿ ಶೇ.81ರಷ್ಟುಪರಿಣಾಮಕಾರಿ. ಅಲ್ಲದೆ ಯುಕೆ ರೂಪಾಂತರಿ ವಿರುದ್ಧವೂ ಕೆಲಸ ಮಾಡುತ್ತದೆ ಎಂದು ಹೇಳಲಾಗಿದೆ.

ಸ್ಪುಟ್ನಿಕ್‌ ವಿ: - ವಿದೇಶಗಳಲ್ಲಿನ ನಡೆದ ಕ್ಲಿನಿಕಲ್‌ ಟ್ರಯಲ್‌ ಪ್ರಕಾರ ಶೇ. 91.6 ಪರಿಣಾಮಕಾರಿ.

ಗೊಂದಲ ಹಾಗೂ ಉತ್ತರ:

ಸೋಂಕಿತರಾಗಿದ್ದಾಗ ಲಸಿಕೆ ಪಡೆಯಬಹುದೇ?

ಇಲ್ಲ. ಸೋಂಕಿನಿಂದ ಗುಣಮುಖರಾದಾಗ ಸ್ವಾಭಾವಿಕವಾಗಿಯೇ ಆ್ಯಂಟಿಬಾಡಿಸ್‌ ಉತ್ಪಾದನೆಯಾಗಿರುತ್ತದೆ. ಹೀಗಾಗಿ ಗುಣಮುಖರಾದ 4 ರಿಂದ 8 ವಾರಗಳ ಅಂತರದಲ್ಲಿ ಲಸಿಕೆ ಪಡೆಯಬೇಕು.

ಲಸಿಕೆ ಮುಖ್ಯ ಪಾತ್ರ ಏನು?

ಲಸಿಕೆಯು ರೋಗದ ತೀವ್ರತೆ ಕಡಿಮೆ ಮಾಡುತ್ತದೆ. ಬೇಗ ಚೇತರಿಕೆಯಾಗುವಂತೆ ಮಾಡುತ್ತದೆ.

ಲಸಿಕೆ ಪಡೆದ ಮೇಲೆ ಕೊರೋನಾ ಸೋಂಕು ಬರುತ್ತದೆಯೇ?

ಹೌದು. ಲಸಿಕೆ ಪಡೆದ ಮೇಲೂ ಕೊರೋನಾ ಸೋಂಕು ಬರಬಹುದು. ಆದರೆ ಬೇಗ ಚೇತರಿಸಿಕೊಳ್ಳುತ್ತೀರಿ. ಸೋಂಕಿನ ತೀವ್ರತೆ ಕಡಿಮೆ ಇರುತ್ತದೆ.

ಒಂದನೇ ಡೋಸ್‌ ಮತ್ತು ಎರಡನೇ ಡೋಸ್‌ ಬೇರೆ ಬೇರೆ ಲಸಿಕೆ ಪಡೆಯಬಹುದೇ?

ಇಲ್ಲ. ಒಂದನೇ ಹಾಗೂ ಎರಡನೇ ಡೋಸ್‌ ಲಸಿಕೆಗಳನ್ನು ಬದಲಿಸಬಾರದು ಹಾಗೂ ಬೆರೆಸಬಾರದು.