Asianet Suvarna News Asianet Suvarna News

ಎಲೆಕ್ಷನ್‌ ಎಫೆಕ್ಟ್‌: ಕಟ್ಟಡ ನಿರ್ಮಾಣ, ಕೃಷಿ ಕೆಲಸಕ್ಕೆ ಜನರೇ ಸಿಗುತ್ತಿಲ್ಲ..!

ಬೆಂಗಳೂರಿಗೆ ರಾಜ್ಯದ ವಿವಿಧ ಭಾಗಗಳಿಂದ ಬರುವ ವಲಸೆ ಕಾರ್ಮಿಕರು ಬರದಂತಾಗಿದ್ದು, ರಾಜಧಾನಿಯಲ್ಲಿ 3 ಸಾವಿರಕ್ಕೂ ಹೆಚ್ಚಿನ ನಿರ್ಮಾಣ ಕಾಮಗಾರಿಗಳು ಬಹುತೇಕ ಸ್ಥಗಿತಗೊಂಡಿವೆ. 

People Not available for Building Construction and Agricultural Work in Karnataka grg
Author
First Published May 5, 2023, 3:00 AM IST | Last Updated May 5, 2023, 3:00 AM IST

ಗಿರೀಶ್‌ ಗರಗ/ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು(ಮೇ.05):  ದಿನಪೂರ್ತಿ ಬಿಸಿಲು, ಮಳೆ ಎನ್ನದೆ ದುಡಿಯುತ್ತಿದ್ದ ಕಾರ್ಮಿಕರು ಇದೀಗ ರಾಜಕೀಯ ಪಕ್ಷಗಳ ಸಮಾವೇಶ, ರಾರ‍ಯಲಿಗಳಲ್ಲಿ ತೊಡಗಿಕೊಳ್ಳುತ್ತಿದ್ದು, ನಿತ್ಯ ದುಡಿಮೆಯನ್ನು ಅದರಲ್ಲಿ ಪಡೆಯುತ್ತಿದ್ದಾರೆ. ಹೀಗಾಗಿ ಕೃಷಿ ಚಟುವಟಿಕೆ, ಕಟ್ಟಡ ನಿರ್ಮಾಣ ಸೇರಿ ಇನ್ನಿತರ ಕಾರ್ಯಗಳಿಗೆ ಕಾರ್ಮಿಕರ ಕೊರತೆ ಎದುರಾಗಿದೆ.

ಮುಂಗಾರು ಮಳೆ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಅದಕ್ಕೂ ಮುನ್ನ ಕೃಷಿ ಚಟುವಟಿಕೆಗೆ ಅಗತ್ಯವಿರುವ ಕ್ರಮಗಳನ್ನು ಈಗಲೇ ಮಾಡಿಕೊಳ್ಳಬೇಕಿದೆ. ಭೂಮಿಯನ್ನು ಉಳುವುದು ಸೇರಿ ಇನ್ನಿತರ ಕಾರ್ಯಗಳನ್ನು ಈಗ ಆರಂಭಿಸಬೇಕಿದೆ. ಅದರ ಜತೆಗೆ ಮಳೆಗಾಲಕ್ಕೂ ಮುನ್ನ ಬೇಸಿಗೆಯಲ್ಲಿಯೇ ಕಟ್ಟಡ ನಿರ್ಮಾಣ ಕಾರ್ಯಕ್ಕೂ ಚುರುಕು ಮುಟ್ಟಿಸಬೇಕಿದೆ. ಆದರೆ, ಈ ಎಲ್ಲ ಕಾರ್ಯಗಳಿಗೆ ಇದೀಗ ಕಾರ್ಮಿಕರ ಕೊರತೆ ಎದುರಾಗಿದೆ. ಅದರಲ್ಲೂ ಬೆಂಗಳೂರಿಗೆ ರಾಜ್ಯದ ವಿವಿಧ ಭಾಗಗಳಿಂದ ಬರುವ ವಲಸೆ ಕಾರ್ಮಿಕರು ಬರದಂತಾಗಿದ್ದು, ರಾಜಧಾನಿಯಲ್ಲಿ 3 ಸಾವಿರಕ್ಕೂ ಹೆಚ್ಚಿನ ನಿರ್ಮಾಣ ಕಾಮಗಾರಿಗಳು ಬಹುತೇಕ ಸ್ಥಗಿತಗೊಂಡಿವೆ.

ಕರ್ನಾಟಕದ 6 ನಗರಗಳಿಗೆ ಟೌನ್‌ಶಿಪ್‌ ಭಾಗ್ಯ: 10,000 ಉದ್ಯೋಗ ಸೃಷ್ಟಿಯ ಗುರಿ

ಶ್ರಮವಿಲ್ಲದ ದುಡಿಮೆ:

ರಾಜ್ಯದಲ್ಲಿ ಸದ್ಯ ಚುನಾವಣಾ ಪ್ರಚಾರ, ಸಮಾವೇಶ, ರಾರ‍ಯಲಿಗಳ ಭರಾಟೆ ಜೋರಾಗಿದೆ. ಪ್ರಮುಖ ಮೂರು ಪಕ್ಷಗಳಿಂದಲೂ ನಿತ್ಯ ಒಂದಿಲ್ಲೊಂದು ಜಿಲ್ಲೆಗಳಲ್ಲಿ ಸಮಾವೇಶ, ರಾರ‍ಯಲಿಗಳು ನಡೆಯುತ್ತಲೇ ಇವೆ. ಮೇ 8ರ ವರೆಗೆ ಸಮಾವೇಶ, ರಾರ‍ಯಲಿಗಳು ನಡೆಯುತ್ತಲಿರುತ್ತವೆ. ಅದರಲ್ಲಿ ಜನರನ್ನು ಸೇರಿಸುವುದು ಸ್ಥಳೀಯ ಮುಖಂಡರು ಮತ್ತು ಅಭ್ಯರ್ಥಿಗಳ ಕೆಲಸವಾಗಿದ್ದು, ಅದಕ್ಕಾಗಿ ಪಕ್ಷದ ಕಾರ್ಯಕರ್ತರ ಜತೆಗೆ ಅಸಂಘಟಿತ ವಲಯದ ಕಾರ್ಮಿಕರನ್ನು ಪ್ರಮುಖವಾಗಿ ನೆಚ್ಚಿಕೊಂಡಿದ್ದಾರೆ. ಹೀಗೆ ಸಮಾವೇಶದಲ್ಲಿ ಪಾಲ್ಗೊಳ್ಳುವವರಿಗೆ 500ರಿಂದ 1 ಸಾವಿರ ರು. ನೀಡಲಾಗುತ್ತಿದೆ. ಅದರ ಜತೆಗೆ ಊಟವನ್ನೂ ಕೊಡಲಾಗುತ್ತದೆ. ಅದೇ ಕಾರ್ಮಿಕರು ದಿನವಿಡೀ ದುಡಿದರೆ ಕನಿಷ್ಠ 500ರಿಂದ ಗರಿಷ್ಠ 800 ರು. ಆದಾಯ ಗಳಿಸುತ್ತಾರೆ. ಆದರೆ, ಈಗ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಂಡು ಯಾವುದೇ ಶ್ರಮವಿಲ್ಲದೆ ಆದಾಯ ಪಡೆಯುತ್ತಿದ್ದಾರೆ.

ವಲಸೆ ಕಾರ್ಮಿಕರಿಲ್ಲದೆ ಸಮಸ್ಯೆ:

ಪ್ರತಿವರ್ಷ ಡಿಸೆಂಬರ್‌ನಿಂದ ಮೇ ತಿಂಗಳ ಅಂತ್ಯದವರೆಗೆ ನಿರ್ಮಾಣ ಕಾಮಗಾರಿಗಳಿಗೆ ಚುರುಕು ಸಿಗಲಿದೆ. ಈ ಅವಧಿಯಲ್ಲಿ ಉತ್ತರ ಕರ್ನಾಟಕ ಸೇರಿ ಇನ್ನಿತರ ಭಾಗಗಳಿಂದ 80 ಸಾವಿರಕ್ಕೂ ಹೆಚ್ಚಿನ ವಲಸೆ ಕಾರ್ಮಿಕರು ಬೆಂಗಳೂರಿಗೆ ಬರುತ್ತಾರೆ. ಆದರೆ, ಈ ಬಾರಿ ಬೆಂಗಳೂರಿಗೆ ಬಂದಿರುವ ವಲಸೆ ಕಾರ್ಮಿಕರ ಸಂಖ್ಯೆ 10 ಸಾವಿರವೂ ದಾಟಿಲ್ಲ. ಅಲ್ಲದೆ, ಈ ಹಿಂದೆ ಬಂದ ಕಾರ್ಮಿಕರು ಈಗಾಗಲೇ ವಾಪಸು ತಮ್ಮ ಊರುಗಳಿಗೆ ತೆರಳಿದ್ದು, ತಮ್ಮ ಊರಿನಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ.

ಕೂಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಟ್ಯಾಬ್‌ ವಿತರಣೆ

ಒಂದು ಅಂದಾಜಿನಂತೆ ನಗರದಲ್ಲಿ ಸದ್ಯ 4 ಸಾವಿರಕ್ಕೂ ಹೆಚ್ಚಿನ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಅದರಲ್ಲಿ ಅಪಾರ್ಚ್‌ಮೆಂಟ್‌ಗಳು ಸೇರಿ ಇನ್ನಿತರ ಬೃಹತ್‌ ಕಟ್ಟಡ ನಿರ್ಮಾಣಕ್ಕೆ ಉತ್ತರ ಭಾರತ ಸೇರಿ ಹೊರ ರಾಜ್ಯದ ಕಾರ್ಮಿಕರನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಅವರ ಜತೆಗೆ ರಾಜ್ಯದ ಕಾರ್ಮಿಕರೂ ಇದ್ದಾರೆ. ಅದರ ಜತೆಗೆ ಸಣ್ಣ ಪ್ರಮಾಣ ವಸತಿ ಕಟ್ಟಡ, ವಾಣಿಜ್ಯ ಕಟ್ಟಡಗಳಿಗೆ ರಾಜ್ಯದ ಕಾರ್ಮಿಕರನ್ನೇ ನೆಚ್ಚಿಕೊಳ್ಳಲಾಗಿದೆ. ಅಂತಹ 3 ಸಾವಿರಕ್ಕೂ ಹೆಚ್ಚಿನ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕಾರ್ಮಿಕರು ದೊರೆಯದಂತಾಗಿದೆ. ಬಿಬಿಎಂಪಿ ಸೇರಿ ಇನ್ನಿತರ ಸರ್ಕಾರಿ ಸಂಸ್ಥೆಗಳು ಕೈಗೊಂಡಿರುವ ಕಾಮಗಾರಿಗಳೂ ಬಹುತೇಕ ಸ್ಥಗಿತಗೊಂಡಿವೆ.

ಕೃಷಿ ಚಟುವಟಿಕೆಗಳಿಗೆ ಹಿನ್ನಡೆ:

ಈ ಮಾಸಾಂತ್ಯ ಅಥವಾ ಜೂನ್‌ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭವಾಗಲಿದೆ. ಅದಕ್ಕೂ ಮುನ್ನ ಸುರಿಯುವ ಮುಂಗಾರು ಪೂರ್ವ ಮಳೆಯ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳು ಆರಂಭಿಸಲಾಗುತ್ತದೆ. ಆದರೆ, ಈ ವರ್ಷ ಕೃಷಿ ಚಟುವಟಿಕೆ ಆರಂಭವೂ ವಿಳಂಬವಾಗುತ್ತಿದೆ. ಹೊಲಗಳನ್ನು ಹೂಳುವುದು, ತಿಪ್ಪೆಯ ಗೊಬ್ಬರವನ್ನು ಹೊಲ, ತೋಟಗಳಿಗೆ ಸಾಗಿಸುವುದು, ಗೊಬ್ಬರವನ್ನು ಚೆಲ್ಲಲು ಕಾರ್ಮಿಕರು ಸಿಗುತ್ತಿಲ್ಲ. ಜತೆಗೆ ಜಮೀನುಗಳಿಗೆ ಹೊಸ ಮಣ್ಣು ಹೊಡೆಸಲೂ ಕೆಲಸಗಾರರು ಸಿಗುತ್ತಿಲ್ಲ. ಸದ್ಯ ಎಲ್ಲೆಡೆ ಒಂದಷ್ಟುಮಳೆ ಬರುತ್ತಿದ್ದು, ಜಮೀನುಗಳನ್ನು ಹದ ಮಾಡಿಟ್ಟುಕೊಳ್ಳಲೂ ಆಗದೇ ರೈತರು ಪರದಾಡುತ್ತಿದ್ದಾರೆ.

ಪ್ರತಿ ಹಳ್ಳಿಯಲ್ಲೂ ಕನಿಷ್ಠ 30ರಿಂದ 40 ಮಂದಿ ಕೃಷಿ ಕಾರ್ಮಿಕರಿದ್ದು, ಅವರು ದಿನಗೂಲಿ ಅಡಿಯಲ್ಲಿ ಬೇರೆಯವರ ಜಮೀನಿನಲ್ಲಿ ಕೆಲಸ ಮಾಡಲು ತೆರಳುತ್ತಾರೆ. ಆದರೆ, ಈಗ ಅದರಲ್ಲಿ 10ರಿಂದ 15 ಮಂದಿ ಮಾತ್ರ ಕೃಷಿ ಕೆಲಸಕ್ಕೆ ತೆರಳುತ್ತಿದ್ದು, ಉಳಿದವರು ಮನೆ ಮನೆ ಪ್ರಚಾರ, ಸಮಾವೇಶ ಸೇರಿ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ರಾಜಕೀಯ ಪಕ್ಷಗಳ ಮುಖಂಡರು ಹೆಚ್ಚಿನ ಹಣದ ಆಮಿಷವೊಡ್ಡಿ ಕಟ್ಟಡ ಮತ್ತು ಇತರ ನಿರ್ಮಾಣ ವಲಯದ ಕಾರ್ಮಿಕರನ್ನು ಚುನಾವಣೆ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ನಿರ್ಮಾಣ ಕಾಮಗಾರಿಗಳಿಗೆ ಹಿನ್ನಡೆ ಉಂಟಾಗಿದೆ ಅಂತ ರಾಜ್ಯ ಕಾರ್ಮಿಕರ ಹಿತರಕ್ಷಣಾ ಸಂಘದ ಅಧ್ಯಕ್ಷ ಡಿ.ಸಿ.ಪಾಪಣ್ಣ ಹೇಳಿದ್ದಾರೆ. 

ಪ್ರತಿ ವರ್ಷ ಬೆಂಗಳೂರಿಗೆ ಬರುತ್ತಿದ್ದ ವಲಸೆ ಕಾರ್ಮಿಕರು ಈ ಬಾರಿ ಬಂದಿಲ್ಲ. ರಾಜಕೀಯ ಸಮಾವೇಶ, ರಾರ‍ಯಲಿಯಂತಹ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಅದರಿಂದಲೇ ಆದಾಯ ಗಳಿಸುತ್ತಿದ್ದಾರೆ. ಹೀಗಾಗಿ ನಗರದಲ್ಲಿ ನಿರ್ಮಾಣ ಕಾಮಗಾರಿಗಳು ಬಹುತೇಕ ಸ್ಥಗಿತಗೊಂಡಿವೆ​​​​​ ಅಂತ ಎಐಎಡಬ್ಲ್ಯೂಯು ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios