*  ಮಳೆಗಾಲದ ಜ್ವರ, ನೆಗಡಿ, ಕೆಮ್ಮು ಇರಬಹುದೆಂದು ಜನರ ಅಸಡ್ಡೆ*  ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳದೆ ರೋಗ ಉಲ್ಬಣಿಸಿ ಮರಣ*  ರಾಜ್ಯದಲ್ಲಿ ಆಸ್ಪತ್ರೆಗೆ ಸೇರಿದ 5 ದಿನದೊಳಗೇ 254 ಮಂದಿ ಸಾವು  

ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಆ.26):ಕೋವಿಡ್‌ ಸೋಂಕಿನ ಅಬ್ಬರ ಕಡಿಮೆ ಆಗುತ್ತಿದೆ ಎಂದು ರೋಗ ಲಕ್ಷಣ ಕಂಡುಬಂದರೂ ಚಿಕಿತ್ಸೆ ಪಡೆಯದೆ ನಿರ್ಲಕ್ಷ್ಯ ತೋರುವ ಧೋರಣೆಯೂ ಸೋಂಕಿತರಲ್ಲಿ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಆಸ್ಪತ್ರೆಗೆ ದಾಖಲಾಗುವವರ ಪೈಕಿ ಮೊದಲ ಐದು ದಿನಗಳಲ್ಲೇ ಕೋವಿಡ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ರಾಜ್ಯದಲ್ಲಿ ಏರಿಕೆಯಾಗುತ್ತಿದೆ.

ಮಳೆಗಾಲದ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಶೀತ, ಕೆಮ್ಮು, ಜ್ವರ ತೊಂದರೆಗಳು ಕೊರೋನಾ ಸೋಂಕು ಕೂಡ ಆಗಿರಬಹುದು ಎಂದು ಜನರು ಯೋಚಿಸುತ್ತಿಲ್ಲ. ಹೀಗಾಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳದೇ ನಿರ್ಲಕ್ಷ್ಯ ಮಾಡಿ ಜೀವ ಹಾನಿ ಮಾಡಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಆಗಸ್ಟ್‌ 1ರಿಂದ 18ರ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 504 ಕೋವಿಡ್‌ ಸಾವು ವರದಿಯಾಗಿದ್ದು, ಈ ಪೈಕಿ 254 ಮಂದಿ ಆಸ್ಪತ್ರೆ ಸೇರಿದ ಮೊದಲ ಐದು ದಿನದೊಳಗೆ ಅಸುನೀಗಿದ್ದಾರೆ. 58 ಮಂದಿ ಆಸ್ಪತ್ರೆಗೆ ದಾಖಲಾಗುವ ಮುನ್ನ ಅಥವಾ ದಾಖಲಾದ ದಿನವೇ ಸಾವನ್ನಪ್ಪಿದ್ದಾರೆ. 65 ಮಂದಿ ಆಸ್ಪತ್ರೆ ಸೇರಿದ ಮರುದಿನವೇ ಮರಣವನ್ನಪ್ಪಿದ್ದಾರೆ. ಒಟ್ಟು 214 ಮಂದಿ ಆಸ್ಪತ್ರೆಗೆ ದಾಖಲಾದ ಮೂರು ದಿನದೊಳಗೆ ಮೃತರಾಗಿದ್ದಾರೆ. ಆಸ್ಪತ್ರೆಗೆ ಸೇರಿದ ಇಷ್ಟುಕಡಿಮೆ ಅವಧಿಯಲ್ಲಿ ಇಷ್ಟೊಂದು ಸಾವು ದಾಖಲಾಗಲು ರೋಗಿಗಳು ತಡವಾಗಿ ಆಸ್ಪತ್ರೆಗೆ ಬರುತ್ತಿರುವುದೇ ಪ್ರಮುಖ ಕಾರಣ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

ಏರ್‌ಪೋರ್ಟ್‌ನಲ್ಲಿ ಕೋವಿಡ್‌ ಟೆಸ್ಟ್‌ ಮಾಡಿಸಿ ಮನೆಗೆ ಹೋಗ್ಬಹುದು: ಸರ್ಕಾರ

ಕೋವಿಡ್‌ ಅಬ್ಬರದ ದಿನಗಳಿಗೆ ಹೋಲಿಸಿದರೆ ಈಗ ಆಸ್ಪತ್ರೆಯಲ್ಲಿ ಬಹು ಬೇಗ ಹಾಸಿಗೆ, ಚಿಕಿತ್ಸೆ ದೊರಕುತ್ತಿದೆ. ಆಮ್ಲಜನಕ, ಔಷಧಿಯ ಕೊರತೆಯೂ ಇಲ್ಲ. ಆದರೆ ಕೋವಿಡ್‌ ಸೋಂಕಿನ ಗುಣಲಕ್ಷಣಗಳನ್ನು ನಿರ್ಲಕ್ಷಿಸುತ್ತಿರುವುದರಿಂದ ಸಾವಿನ ಪ್ರಮಾಣ ನಿರೀಕ್ಷೆಯಷ್ಟುಕಡಿಮೆಯಾಗುತ್ತಿಲ್ಲ.

ಕೋವಿಡ್‌ನ ಲಕ್ಷಣಗಳು ಕಾಣಿಸಿಕೊಂಡಾಗ ಮಾನ್ಸೂನ್‌ ಅವಧಿಯಲ್ಲಿನ ಸಾಮಾನ್ಯ ಶೀತ, ಜ್ವರ, ಕೆಮ್ಮು ಎಂದು ಜನರು ಕೋವಿಡ್‌ ಪರೀಕ್ಷೆಯನ್ನೇ ಮಾಡಿಕೊಳ್ಳುವುದಿಲ್ಲ. ಆದರೆ ಗುಣಲಕ್ಷಣಗಳು ತೀವ್ರವಾಗಿ ನ್ಯೂಮೋನಿಯಾದ ಹಂತ ತಲುಪಿದ ಮೇಲೆ ಆಸ್ಪತ್ರೆಗೆ ದೌಡಾಯಿಸುತ್ತಾರೆ. ಆದರೆ ಆಗಲೇ ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ. ಇದು ಸಾವು ಹೆಚ್ಚು ಸಂಭವಿಸಲು ಕಾರಣ ಎಂದು ಬೆಂಗಳೂರಿನ ಜಿಲ್ಲಾ ಸರ್ಜನ್‌, ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ಅಧೀಕ್ಷಕ ಡಾ.ಅನ್ಸರ್‌ ಅಹ್ಮದ್‌ ಹೇಳುತ್ತಾರೆ.

ಅದೇ ರೀತಿ ಮರಣವನ್ನಪ್ಪುತ್ತಿರುವ ಹೆಚ್ಚಿನವರಿಗೆ ಡಯಾಬಿಟೀಸ್‌ ಅಥವಾ ಒತ್ತಡದ ಸಮಸ್ಯೆ ಇರುತ್ತದೆ. ಈ ಕಾಯಿಲೆಗಳು ಇರುವವರು ಕೋವಿಡ್‌ನ ಯಾವುದೇ ಗುಣಲಕ್ಷಣ ಇದ್ದರೂ ನಿರ್ಲಕ್ಷಿಸಲೇಬಾರದು ಎಂಬುದು ತಜ್ಞರ ಅಭಿಪ್ರಾಯ. ಸಾಮಾನ್ಯ ಜ್ವರ, ಕೆಮ್ಮು ಇದ್ದರೂ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಪಾಸಿಟಿವ್‌ ಬಂದರೆ ಆಗಿನಿಂದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅದರಲ್ಲಿಯೂ ಆಮ್ಲಜನಕ ಪ್ರಮಾಣದತ್ತ ಕಟ್ಟೆಚ್ಚರ ಹೊಂದಿರಬೇಕು ಮತ್ತು ಸದಾ ವೈದ್ಯರ ಸಂಪರ್ಕದಲ್ಲಿರಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.