ಡಿಕೆಶಿ ಹೇಳಿಕೆ ನನಗೆ ಗೊತ್ತಿಲ್ಲ; ಗಂಡುಮಕ್ಕಳಿಗೆ ಉಚಿತ ಬಸ್ ಪ್ರಯಾಣ ಇಲ್ಲ: ರಾಮಲಿಂಗಾರೆಡ್ಡಿ
ಹೆಣ್ಣುಮಕ್ಕಳ ರೀತಿ ಶಕ್ತಿ ಯೋಜನೆಯಡಿ ಗಂಡುಮಕ್ಕಳಿಗೆ ಉಚಿತ ಪ್ರಯಾಣದ ಪ್ರಸ್ತಾಪ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿ (ನ.16): ಹೆಣ್ಣುಮಕ್ಕಳ ರೀತಿ ಶಕ್ತಿ ಯೋಜನೆಯಡಿ ಗಂಡುಮಕ್ಕಳಿಗೆ ಉಚಿತ ಪ್ರಯಾಣದ ಪ್ರಸ್ತಾಪ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಲಾಗಿದೆ. ಪುರುಷರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಪ್ರಸ್ತಾವನೆ ಇಲ್ಲ ಎಂದರು.
ಶಕ್ತಿ ಯೋಜನೆಯಡಿ ಗಂಡಸರಿಗೂ ಉಚಿತ ಪ್ರಯಾಣ: ಡಿಕೆಶಿ ಸುಳಿವು
ಬೆಂಗಳೂರಿನಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆದ ಸಂವಾದ ವೊಂದರಲ್ಲಿ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗಂಡು ಮಕ್ಕಳಿಗೂ ಉಚಿತ ಪ್ರಯಾಣದ ಅವಕಾಶ ನೀಡುವ ಕುರಿತು ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದ್ದರು. ಈ ಸಂಬಂಧ ಸುದ್ದಿಗಾರರು ಪ್ರಶ್ನಿಸಿದಾಗ, ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದಾಗ ಈ ಕುರಿತು ವಿಚಾರಿಸುತ್ತೇನೆ. ಸದ್ಯ ನಮ್ಮ ಬಳಿ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ಸಾರಿಗೆ ಸಂಸ್ಥೆ ಲಾಭದಲ್ಲಿ ಇಲ್ಲವಲ್ಲ ಎಂಬ ಪ್ರಶ್ನೆಗೆ, ಸಾರಿಗೆ ಸಂಸ್ಥೆಯಲ್ಲಿ ಲಾಭ- ನಷ್ಟದ ಬಗ್ಗೆ ವಿಚಾರ ಮಾಡಲು ಬರುವುದಿಲ್ಲ. ಸಾರ್ವಜನಿಕರ ಅನುಕೂಲಕ್ಕೆ ಮಾತ್ರ ಬಸ್ ಓಡಿಸುತ್ತೇವೆ. ಇಡೀ ವಿಶ್ವದಲ್ಲಿ ಸಾರಿಗೆ ನಿಗಮಗಳು ಲಾಭದ ಲೆಕ್ಕ ಇಟ್ಟುಕೊಂಡಿಲ್ಲ ಎಂದು ಅವರು ಹೇಳಿದರು.