ಬೆಂಗಳೂರು(ಜ.01): ಕೊರೋನಾ ಹಿನ್ನೆಲೆಯಲ್ಲಿ ನಗರದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಅವಕಾಶ ನೀಡದಿರುವ ಸೂಚನೆ ಅರಿತ ಬಹುತೇಕರು ಈ ಬಾರಿ ತಂಡೋಪ ತಂಡವಾಗಿ ನಗರದ  ಹೊರ ವಲಯಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡಿದರು. ಫಾಮ್‌ರ್‍ ಹೌಸ್‌ಗಳು, ಸ್ನೇಹಿತರ ಜಮೀನು, ತೋಟಗಳಲ್ಲಿ ಭರ್ಜರಿ ಪಾರ್ಟಿಗಳನ್ನು ಮಾಡಿದರು.

ನಗರದಿಂದ ಹೊರಗೆ ಪಾರ್ಟಿ ಆಯೋಜನೆ ಮಾಡಿರುವುದರಿಂದ ಕೊರೋನಾ ನಿಯಮ ಉಲ್ಲಂಘನೆ, ನಿಗದಿತ ಸಮಯಕ್ಕಿಂತ ತಡವಾದರೆ ಪೊಲೀಸರೊಂದಿಗೆ ವಾಗ್ವಾದ, ಪಾರ್ಟಿ ಮುಗಿಸಿ ಮನೆಗೆ ಹಿಂತಿರುಗುವ ವೇಳೆ ಅಪಘಾತ ಮುಂತಾದವುಗಳ ಸಮಸ್ಯೆಯಿಲ್ಲ. ಪಬ್‌, ಕ್ಲಬ್‌ ಇವುಗಳಿಗೆ ಹೋಲಿಕೆ ಮಾಡಿದರೆ ಹೊರ ವಲಯವೇ ಉತ್ತಮ ಮತ್ತು ಆರಾಮದಾಯಕ ಎನಿಸುತ್ತಿದೆ. ಇಲ್ಲಿಯೇ ಡಿಜೆ, ಲೈಟಿಂಗ್ಸ್‌ ಅಲಂಕಾರ ಎಲ್ಲವನ್ನೂ ಮಾಡಲಾಗಿದೆ. ಹೊಸ ವರ್ಷ ಸಂಭ್ರಮಾಚರಣೆ ವಿಶಿಷ್ಟಅನುಭವ ನೀಡುತ್ತಿದೆ ಎಂದು ಸಂಪಂಗಿರಾಮನಗರ ಮೂಲದ ಪ್ರಮೋದ್‌ ರಾಜ್‌ ಹೇಳಿದರು.

ಕುಸಿದ ಕೇಕ್‌ ಮಾರಾಟ

ಹೊಸ ವರ್ಷದ ಹಿನ್ನೆಲೆಯಲ್ಲಿ ಬೇಕರಿಗಳು ಸಾಕಷ್ಟುಪ್ರಮಾಣದಲ್ಲಿ ವಿವಿಧ ಬಗೆಯ ಕೇಕ್‌ಗಳನ್ನು ಸಿದ್ಧಪಡಿಸಿಕೊಂಡಿದ್ದರೂ, ನಿರೀಕ್ಷೆ ಪ್ರಮಾಣದಲ್ಲಿ ಕೇಕ್‌ಗಳು ಮಾರಾಟವಾಗದೇ ಬೇಕರಿ ಮಾಲಿಕರು ನಿರಾಶೆಗೊಳಗಾದರು. ಸಿಹಿ, ತಿಂಡಿ ತಿನಿಸುಗಳು ಮಾರಾಟ ಸಹ ಕಡಿಮೆಯಾಗಿತ್ತು.

2020ರ ಕೊನೆಯ ದಿನ 150 ಕೋಟಿ ಮದ್ಯ ಮಾರಾಟ! 2 ವರ್ಷದಲ್ಲಿ ಇದೇ ದಾಖಲೆ

ಪೊಲೀಸ್‌ ಸರ್ಪಗಾವಲು

ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚಚ್‌ರ್‍ ಸ್ಟ್ರೀಟ್‌ಗಳ ಪಬ್‌, ಹೋಟೆಲ್‌, ರೆಸಾರ್ಟ್‌ಗಳಲ್ಲಿ ಹೊಸ ವರ್ಷ ಪಾರ್ಟಿ ಆಯೋಜನೆ ಮಾಡಿದ್ದವರಿಗೆ ಗ್ರಾಹಕರಿಗೆ ಮುಂಗಡವಾಗಿ ಕೂಪನ್‌ ವಿತರಿಸಲು ಸೂಚಿಸಲಾಗಿತ್ತು. ಶೇ.50ರಷ್ಟುಮಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದರಿಂದ ಪಾರ್ಟಿಗಳ ಕಳೆಗುಂದಿತ್ತು. ಎಂ.ಜಿ.ರಸ್ತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತೆಗೆ ಸುಮಾರು ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ ಸಾರ್ವಜನಿಕರ ಚಲವಲನಗಳ ಮೇಲೆ ನಿಗಾವಹಿಸಲಾಗಿತ್ತು.

ಮೇಲ್ಸೇತುವೆಗಳು ಬಂದ್‌

ಗುರುವಾರ ರಾತ್ರಿ ಎಂಟು ಗಂಟೆಯಿಂದ ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ, ಚಚ್‌ರ್‍ ಸ್ಟ್ರೀಟ್‌, ಮ್ಯೂಸಿಯಂ ರಸ್ತೆ, ರೆಸ್ಟ್‌ ಹೌಸ್‌ ಪಾರ್ಕ್ ರಸ್ತೆ, ರೆಸಿಡೆನ್ಸಿ ರಸ್ತೆಯಲ್ಲಿ ಪೊಲೀಸ್‌ ವಾಹನ, ತುರ್ತು ಸೇವಾ ವಾಹನ ಹೊರತುಪಡಿಸಿ ಇನ್ನುಳಿದ ಎಲ್ಲ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು.ನಗರದ 44 ಮೇಲ್ಸೆತುವೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ವರ್ಷಾಚರಣೆ ನೆಪದಲ್ಲಿ ಫ್ಲೈ ಓವರ್‌ಗಳ ಮೇಲೆ ವ್ಹೀಲಿಂಗ್‌, ಡ್ರ್ಯಾಗ್‌ರೇಸ್‌, ಅತಿವೇಗದ ಚಾಲನೆ ಮಾಡುವುದನ್ನು ತಡೆಯುವ ನಿಟಿನಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದರು.

ವಾಹನ ನಿಲುಗಡೆ ನಿಷೇಧ

ನಗರದ ಕೇಂದ್ರ ಭಾಗದ ಎಂ.ಜಿ ರಸ್ತೆ, ಕಬ್ಬನ್‌ ರಸ್ತೆ, ರೆಸಿಡೆನ್ಸಿ ರಸ್ತೆ, ರಿಚ್‌ಮಂಡ್‌ ರಸ್ತೆ, ಇನ್‌ಫೆಂಟ್ರಿ ರಸ್ತೆ, ಬ್ರಿಗೇಡ್‌ ರಸ್ತೆ, ಅಶೋಕನಗರ ಹಳೆ ಪೊಲೀಸ್‌ ಠಾಣೆ ಜಂಕ್ಷನ್‌, ಚಚ್‌ರ್‍ ಸ್ಟ್ರೀಟ್‌, ಮ್ಯೂಸಿಯಂ ರಸ್ತೆ, ರೆಸ್ಟ್‌ ಹೌಸ್‌ ರಸ್ತೆ, ಸೆಂಟ್‌ ಮಾರ್ಕ್ಸ್‌ ರಸ್ತೆ, ಮಾರ್ಕನ್‌ ರಸ್ತೆ, ಮೈನ್‌ಗಾರ್ಡ್‌ ಕ್ರಾಸ್‌ ರಸ್ತೆ, ಡಿಸ್ಪೆನ್ಸರಿ ರಸ್ತೆ ಹಾಗೂ ಇಂದಿರಾನಗರ 100 ಅಡಿ ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿತ್ತು. ಈ ಭಾಗಗಳಲ್ಲಿ ಸಂಜೆ ಬಳಿಕ ಜನ ಸಂಚಾರವೇ ವಿರಳವಾಗಿದ್ದರಿಂದ ರಸ್ತೆಗಳು ಬಹುತೇಕ ಖಾಲಿ ಇದ್ದವು.

ಡ್ರಂಕ್‌ ಅಂಡ್‌ ಡ್ರೈವ್‌ ತಪಾಸಣೆ

ಹೊಸ ವರ್ಷದ ಸಡಗರದಲ್ಲಿ ಅತಿವೇಗವಾಗಿ ಬೈಕ್‌ ಚಾಲನೆ ಹಾಗೂ ಮದ್ಯ ಸೇವಿಸಿ ಚಾಲನೆ ಮಾಡುವವರಿಗೆ ಬಿಸಿ ಮುಟ್ಟಿಸಲು ನಗರದ ಪ್ರಮುಖ ರಸ್ತೆಗಳು, ವೃತ್ತಗಳು, ಜಂಕ್ಷನ್‌ಗಳು ಸೇರಿದಂತೆ 191 ಕಡೆ ಪೊಲೀಸರು ವಾಹನ ತಪಾಸಣೆ ಮುಂದಾಗಿದ್ದರು. ಈ ಕಾರ್ಯಕ್ಕೆ ಸಂಚಾರ ವಿಭಾಗದ 2500 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಗುರುವಾರ ಸಂಜೆಯಿಂದಲೇ ಪೊಲೀಸರು ಆಲ್ಕೋ ಮೀಟರ್‌ ಹಿಡಿದು ಕಾರ್ಯಾಚರಣೆಗೆ ಇಳಿದಿದ್ದರು.