Asianet Suvarna News Asianet Suvarna News

ದುಬೈ ಮಾತ್ರವಲ್ಲ, ಇತರ ಕೊಲ್ಲಿ ದೇಶಗಳನ್ನೂ ಗಮನಿಸಿ, ಗಲ್ಫ್ ಕನ್ನಡಿಗರ ಆಗ್ರಹ

ರಾಜ್ಯ ಸರ್ಕಾರವು ಕೊಲ್ಲಿ ರಾಷ್ಟ್ರಗಳಿಗಾಗಿ ಕಲ್ಪಿಸಿರುವ ವಿಶೇಷ ವಿಮಾನ ಸೌಲಭ್ಯ ದುಬೈ ವಾಸಿ ಕನ್ನಡಿಗರಿಗೆ ಮಾತ್ರ ದೊರೆಯುತ್ತಿದೆ. ಇತರ ಪ್ರದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಲೇ ಇಲ್ಲ.

People from karnataka living in Gulf request govt to take them home
Author
Bangalore, First Published May 15, 2020, 10:49 AM IST

ಬೆಂಗಳೂರು(ಮೇ 15): ಕೊಲ್ಲಿ ರಾಷ್ಟ್ರಗಳು ಎಂದರೆ ದುಬೈ ಮಾತ್ರವಲ್ಲ. ದುಬೈನಲ್ಲಿ ಮಾತ್ರ ಕನ್ನಡಿಗರು ಇಲ್ಲ. ಕತಾರ್‌, ಬಹರೇನ್‌, ಯಮನ್‌, ಕುವೈತ್‌ನಂತಹ ಕೊಲ್ಲಿ ರಾಷ್ಟ್ರಗಳ ಇತರ ಪ್ರಮುಖ ಪ್ರದೇಶಗಳಲ್ಲಿ ಸಾವಿರಾರು ಕನ್ನಡಿಗರು ಇದ್ದಾರೆ.

"

ಕೊರೇನಾ ಸಂಕಷ್ಟದ ಪರಿಣಾಮವಾಗಿ ಈ ಪ್ರದೇಶಗಳಲ್ಲಿನ ಕನ್ನಡಿಗರು ರಾಜ್ಯಕ್ಕೆ ಹಿಂತಿರುಗಲು ಪ್ರಯತ್ನಿಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ದುಬೈ ವಾಸಿಗಳಿಗೆ ಮಾತ್ರ ಸ್ಪಂದಿಸುತ್ತಿದೆ. - ಹೀಗಂತ ಅಳಲು ತೋಡಿಕೊಳ್ಳತೊಡಗಿದ್ದಾರೆ ದುಬೈ ಹೊರತಾಗಿ ಕೊಲ್ಲಿ ರಾಷ್ಟ್ರಗಳ ಇತರ ಪ್ರದೇಶಗಳಲ್ಲಿ ನೆಲೆಸಿರುವ ಕನ್ನಡಿಗರು.

ಕೊಲ್ಲಿ ರಾಷ್ಟ್ರದಿಂದ ಕನ್ನಡಿಗರನ್ನು ಕರೆ ತರಲು ರಾಜ್ಯ ಸರ್ಕಾರ ವಿಶೇಷ ವಿಮಾನ ವ್ಯವಸ್ಥೆ ಮಾಡುತ್ತಿದೆ. ಈ ಬಗ್ಗೆ ಕೊಲ್ಲಿ ರಾಷ್ಟ್ರಗಳ ಕನ್ನಡಿಗರ ಮನವಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ ಅವರು ಸ್ಪಂದಿಸಿದ್ದಾರೆ. ದುರಂತವೆಂದರೆ, ರಾಜ್ಯ ಸರ್ಕಾರವು ಕೊಲ್ಲಿ ರಾಷ್ಟ್ರಗಳಿಗಾಗಿ ಕಲ್ಪಿಸಿರುವ ವಿಶೇಷ ವಿಮಾನ ಸೌಲಭ್ಯ ದುಬೈ ವಾಸಿ ಕನ್ನಡಿಗರಿಗೆ ಮಾತ್ರ ದೊರೆಯುತ್ತಿದೆ. ಇತರ ಪ್ರದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಲೇ ಇಲ್ಲ.

ಮಂಗಳೂರಿಗೆ ಬಂದಿಳಿದ ದುಬೈ ಕನ್ನಡಿಗರಿದ್ದ ಮೊದಲ ವಿಮಾನ, ತಾಯ್ನೆಲ ತಲುಪಿದಾಗ ಭಾವುಕ ಸೆಲ್ಫಿ

ಮುಖ್ಯಮಂತ್ರಿ ಯಡಿಯೂರಪ್ಪ, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಕೇಂದ್ರ ಸಚಿವ ಸದಾನಂದ ಗೌಡ ಸೇರಿದಂತೆ ಪ್ರಮುಖ ನಾಯಕರಿಗೆ ಕೊಲ್ಲಿ ರಾಷ್ಟ್ರಗಳ ಕನ್ನಡಿಗರು ಸತತವಾಗಿ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸುವ ಭರವಸೆಯೂ ನಾಯಕರಿಂದ ದೊರೆತಿದೆ. ಆದರೆ, ಈ ಭರವಸೆ ಜಾರಿಯಾಗುವ ಸಂದರ್ಭದಲ್ಲಿ ಅದು ಕೇವಲ ದುಬೈ ವಾಸಿಗಳಿಗೆ ಮಾತ್ರ ದೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಅಳಲು.

ಕತಾರ್‌ ಕನ್ನಡಿಗರ ಅಳಲು:

ಕೊಲ್ಲಿ ರಾಷ್ಟ್ರಗಳು ಎಂದರೆ ಯುಎಇ ಮಾತ್ರ ಎಂಬಂತಾಗಿದೆ. ಹೀಗಾಗಿ ದುಬೈಗೆ ಮಾತ್ರ ಅಲ್ಲಿನ ಕನ್ನಡಿಗರನ್ನು ಕರೆದೊಯ್ಯಲು ವಿಶೇಷ ವಿಮಾನ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಕತಾರ್‌, ಬಹರೇನ್‌, ಕುವೈಟ್‌ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕನ್ನಡಿಗರು ನೆಲೆಸಿದ್ದಾರೆ. ಅವರಿಗೆ ಈವರೆಗೂ ವಿಮಾನ ಸೌಲಭ್ಯ ನೀಡಿಲ್ಲ ಎಂದು ಕತಾರ್‌ನ ಭಾರತೀಯ ಸಮುದಾಯ ಹಿತೈಷಿ ವೇದಿಕೆ ಕರ್ನಾಟಕದ ಪ್ರತಿನಿಧಿ ಸುಬ್ರಮಣ್ಯ ಹೆಬ್ಬಾಗಿಲು ಬೇಸರ ವ್ಯಕ್ತಪಡಿಸುತ್ತಾರೆ.

ಏರ್‌ಲಿಫ್ಟ್‌; ಲಂಡನ್‌ನಿಂದ ಭಾರತಕ್ಕೆ ನಟಿ ಜಯಮಾಲಾ ಪುತ್ರಿ ವಾಪಸ್!

ಕತಾರ್‌ನಿಂದ ಸುಮಾರು 1,300 ಜನರು ಊರಿಗೆ ಬರಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಅವರಲ್ಲಿ ಕರ್ನಾಟಕದ ಕರಾವಳಿಯವರೇ ಹೆಚ್ಚು. ಬೆಂಗಳೂರು, ಮೈಸೂರು, ಮಂಡ್ಯ ಇತ್ಯಾದಿ ಕಡೆಗೆ ಹೋಗುವವರು ಬೆಂಗಳೂರಿನ ಮೂಲಕ ಹೋಗುತ್ತಾರೆ. ಕಾಸರಗೋಡು, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೈಂದೂರಿನವರೆಗೆ ಹೋಗುವವರು ಮಂಗಳೂರನ್ನು ಆಶ್ರಯಿಸಬೇಕಾಗಿದೆ. ಈಗ ಬೆಂಗಳೂರಿಗೆ ವಿಮಾನ ಯಾನಕ್ಕೆ ತಾತ್ವಿಕ ಸಮ್ಮತಿ ಇದೆ. ಆದರೆ, ಮಂಗಳೂರಿಗೆ ಹೋಗಲು ವಿಮಾನಯಾನಕ್ಕೆ ಸಮ್ಮತಿ ಸಿಕ್ಕಿಲ್ಲ. ಆದರೂ ಇಲ್ಲಿ ಕರಾವಳಿಯವರೇ ಹೆಚ್ಚು ಇರುವುದರಿಂದ ಕತಾರ್‌ನಿಂದ ಮಂಗಳೂರಿಗೆ ನೇರ ವಿಮಾನ ಸೌಲಭ್ಯ ಕಲ್ಪಿಸಬೇಕು. ಈ ಮೂಲಕ ಹೆಚ್ಚು ಸಂಕಷ್ಟದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಜನರ ನೆರವಿಗೆ ಬರುವಂತೆ ಹೆಬ್ಬಾಗಿಲು ಮನವಿ ಮಾಡಿದ್ದಾರೆ.

ಸಂಕಷ್ಟದಲ್ಲಿ ಸೌದಿಯ 6000 ಕನ್ನಡಿಗರು:

ಕತಾರ್‌ನಂತಯೇ ಸೌದಿ ಅರೇಬಿಯಾದ ಕನ್ನಡಿಗರು ಕಂಗೆಟ್ಟಿದ್ದಾರೆ. ಸೌದಿ ಅರೆಬಿಯಾದಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಸುಮಾರು ಆರು ಸಾವಿರ ಜನರು ತಮ್ಮ ಸಮಸ್ಯೆಗಳೊಂದಿಗೆ ಇಲ್ಲಿನ ರಾಯಭಾರಿ ಕಚೇರಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಸೌದಿ ಅರೇಬಿಯಾದ ರಿಯಾದ್‌ ನಗರದ ಭಾರತೀಯ ಕನ್ನಡ ಸಂಘದ ಅಧ್ಯಕ್ಷ ಸಂತೋಶ್‌ ಶೆಟ್ಟಿಆರ್ಡಿ ಹೇಳುತ್ತಾರೆ.

ಜಯಮಾಲಾ ಪುತ್ರಿ, ನಾರಾಯಣಸ್ವಾಮಿ ಪುತ್ರ ವಿದೇಶದಲ್ಲಿ ಪರದಾಟ!

ಸೌದಿ ಅರೇಬಿಯಾದ ರಿಯಾದ್‌, ದಮಾಮ್‌ ಹಾಗೂ ಜೆಡ್ಡಾ ಪ್ರಾಂತ್ಯದಿಂದ ಕೂಡ ಮಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಅಧಿಕವಾಗಿದೆ. ಸೌದಿ ಅರೇಬಿಯಾ ಪ್ರಪಂಚದ 13ನೇ ದೊಡ್ಡ ದೇಶವಾಗಿದ್ದು, ಇಲ್ಲಿ ಸುಮಾರು 28 ಲಕ್ಷಕ್ಕೂ ಅಧಿಕ ಭಾರತೀಯರು ನೆಲೆಸಿದ್ದಾರೆ. ಇವರಲ್ಲಿ ಹೆಚ್ಚಿನವರು ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅಲ್ಲದೇ ಪ್ರವಾಸಿ ವೀಸಾದಲ್ಲಿರುವವರು, ವಯೋವೃದ್ಧರು, ಗರ್ಭಿಣಿಯರು, ವಿದ್ಯಾರ್ಥಿಗಳು ಇದ್ದಾರೆ ಸಂತೋಶ್‌ ಶೆಟ್ಟಿಆರ್ಡಿ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ವಿಪರಾರ‍ಯಸವೆಂದರೆ ಆರೋಗ್ಯ ಸಮಸ್ಯೆಯಿಂದ ಹೆಚ್ಚಿನ ವೈದ್ಯಕೀಯ ಸೌಲಭ್ಯ ಪಡೆಯಲು ತಾಯ್ನಾಡಿಗೆ ಹೋಗಲು ಮತ್ತು ವಿವಿಧ ಕಾರಣಗಳಿಂದ ಮರಣ ಹೊಂದಿದವರ ಶವಗಳನ್ನು ಹುಟ್ಟೂರಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗಿಲ್ಲ. ಇಂತಹವರು ತುರ್ತು ವಿಮಾನ ಸೌಲಭ್ಯಕ್ಕಾಗಿ ಹಾತೊರೆಯುತ್ತಿದ್ದಾರೆ. ಇದುವರೆಗೂ ಯಾವುದೇ ವಿಮಾನಯಾನ ಖಚಿತವಾಗದ ಕಾರಣ ಆತಂಕದಲ್ಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ದುಬೈ ಮಾತ್ರವಲ್ಲದೆ, ಸೌದಿ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿರುವ ಇತರ ಕನ್ನಡಿಗರ ನೋವಿಗೂ ಸ್ಪಂದಿಸಬೇಕು. ಈ ತಾಣಗಳಿಗೂ ವಿಶೇಷ ವಿಮಾನ ಸೌಲಭ್ಯ ಕಲ್ಪಿಸಬೇಕು ಎಂದು ಎಂದು ಸಂತೋಶ್‌ ಶೆಟ್ಟಿಆರ್ಡಿ ಅವರು ತಿಳಿಸಿದ್ದಾರೆ.

Follow Us:
Download App:
  • android
  • ios