Asianet Suvarna News Asianet Suvarna News

ರಾಜ್ಯದಾದ್ಯಂತ ಕೋವಿಡ್‌ ಲಸಿಕೆ ಕೊರತೆ, ಜನರ ಪರದಾಟ

* ಪೂರೈಕೆಯಲ್ಲಿ ವಿಳಂಬ
* ಲಾಕ್‌ಡೌನ್‌ ಬಳಿಕ ಮುಗಿಬಿದ್ದ ಜನ
* ಜೂ.29ರ ವೇಳೆಗೆ ಕೇವಲ 5 ಲಕ್ಷ ಡೋಸ್‌ ಸಂಗ್ರಹ
 

People Facing Problems due to Vaccine Shortage in Karnataka grg
Author
Bengaluru, First Published Jul 1, 2021, 7:22 AM IST

ಬೆಂಗಳೂರು(ಜು.01): ರಾಜ್ಯದಲ್ಲಿ ಕೊರೋನಾ ಲಸಿಕೆಯ ದಾಸ್ತಾನಿನಲ್ಲಿ ತೀವ್ರ ಕೊರತೆ ಸೃಷ್ಟಿಯಾಗಿದೆ. ಅನ್‌ಲಾಕ್‌ ಬೆನ್ನಲ್ಲೇ ಜನರು ಲಸಿಕಾ ಕೇಂದ್ರಗಳಿಗೆ ಏಕಾಏಕಿ ಮುಗಿ ಬಿದ್ದಿರುವುದು ಹಾಗೂ ಕೇಂದ್ರದಿಂದ ಲಸಿಕೆ ಪೂರೈಕೆ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು ಲಸಿಕೆಗಾಗಿ ಪರದಾಡುವಂತಾಗಿದೆ.

ಲಸಿಕೆ ಪೂರೈಕೆ ಕೊರತೆಯಿಂದ ರಾಜ್ಯದ ಅರ್ಧಕ್ಕೂ ಹೆಚ್ಚು ಲಸಿಕಾ ಕೇಂದ್ರಗಳಿಗೆ ಬುಧವಾರ ನಿರ್ದಿಷ್ಟ ಸಂಖ್ಯೆ ಲಸಿಕೆ ತಲುಪಿಸಿಲ್ಲ. ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆಯನ್ನೇ ಪೂರೈಸಿಲ್ಲ. ನಿತ್ಯ 1 ಸಾವಿರ ಮಂದಿಗೆ ಲಸಿಕೆ ನೀಡುತ್ತಿದ್ದಂತಹ ಮಲ್ಲೇಶ್ವರದ ಕೆ.ಸಿ. ಜನರಲ್‌ ಆಸ್ಪತ್ರೆಯಂತಹ ಲಸಿಕಾ ಕೇಂದ್ರಗಳಿಗೆ ಕೇವಲ 50 ಡೋಸ್‌ ಲಸಿಕೆ ಕಳುಹಿಸಲಾಗಿದೆ. ಲಸಿಕೆಯ ತೀವ್ರ ಅಭಾವ ಸೃಷ್ಟಿಯಾಗಿದ್ದು, ಜನ ದಟ್ಟಣೆಯನ್ನು ನಿಯಂತ್ರಿಸಲಾಗದ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ದಾಸ್ತಾನು ಇರುವ ಲಸಿಕೆಯ ಮಾಹಿತಿ ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳು ನಿರಾಕರಿಸಿದ್ದಾರೆ. ಮೂಲಗಳ ಪ್ರಕಾರ ಜೂ.29ರ ವೇಳೆಗೆ ಕೇವಲ 5 ಲಕ್ಷ ಡೋಸ್‌ ಲಸಿಕೆ ದಾಸ್ತಾನು ಹೊಂದಿದ್ದು, ನಿತ್ಯ 2-3 ಲಕ್ಷ ಮಂದಿಗೆ ಲಸಿಕೆ ನೀಡಬೇಕು. ಹೀಗಾಗಿ ಬುಧವಾರ ರಾಜ್ಯಕ್ಕೆ ಬರಬೇಕಿದ್ದ 9,14,920 ಕೊವಿಶೀಲ್ಡ್‌ ಹಾಗೂ 86,390 ಕೊವ್ಯಾಕ್ಸಿನ್‌ ಸೇರಿದಂತೆ 10,01,310 (10.01 ಲಕ್ಷ) ಲಸಿಕೆಯು ಸಕಾಲಕ್ಕೆ ತಲುಪದಿದ್ದರೆ ಹಾಹಾಕಾರ ನಿರ್ಮಾಣವಾಗುವ ಸಾಧ್ಯತೆಯಿದೆ.

ಆಸ್ಟ್ರಾ, ಫೈಝರ್‌ ಮಿಶ್ರಣದಿಂದ ಹೆಚ್ಚಿನ ರೋಗ ನಿರೋಧಕ ಶಕ್ತಿ!

ಒಂದು ವೇಳೆ 10.01 ಲಕ್ಷ ಲಸಿಕೆ ಬಂದರೂ ಮುಂದಿನ ಒಂದು ವಾರದಲ್ಲಿ 18 ಲಕ್ಷ ಮಂದಿ ವಿವಿಧ ವಿದ್ಯಾರ್ಥಿಗಳಿಗೆ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಲಸಿಕೆ ನೀಡಬೇಕಾಗಿದೆ. ಹೀಗಾಗಿ ಸಾರ್ವಜನಿಕರಿಗೆ ಲಸಿಕೆ ಕೊರತೆ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.

ಜುಲೈ ತಿಂಗಳಲ್ಲಿ 60 ಲಕ್ಷ ಡೋಸ್‌ ಲಸಿಕೆ ಕೇಂದ್ರದಿಂದ ಬರುವ ನಿರೀಕ್ಷೆ ಇದೆ. ಆದರೆ, ಅನ್‌ಲಾಕ್‌ನಿಂದಾಗಿ ನಿತ್ಯ ಲಕ್ಷಾಂತರ ಮಂದಿ ಲಸಿಕೆಗಾಗಿ ಲಸಿಕಾ ಕೇಂದ್ರಗಳಿಗೆ ಮುಗಿ ಬಿದ್ದಿದ್ದಾರೆ. ಬಹುತೇಕ ಕಡೆ ಲಸಿಕೆ ಪಡೆದೇ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಹೀಗಾಗಿ ಲಸಿಕಾ ಕೇಂದ್ರಗಳ ಮೇಲೆ ಒತ್ತಡ ಹೆಚ್ಚಾಗಿದೆ.

ಎಲ್ಲಾ ಜಿಲ್ಲೆಗಳಲ್ಲೂ ಕೊರತೆ:

ಬುಧವಾರ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಲಸಿಕೆಗಾಗಿ ತೀವ್ರ ಕೊರತೆ ಉಂಟಾಗಿತ್ತು. ಬೆಂಗಳೂರಿನಲ್ಲಂತೂ ಪ್ರಮುಖ ಆಸ್ಪತ್ರೆಗಳಾದ ಕೆ.ಸಿ. ಜನರಲ್‌ ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವಿರಾರು ಮಂದಿ ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರರೆ 50 ರಿಂದ 100 ಮಂದಿಗೆ ಮಾತ್ರ ಲಸಿಕೆ ನೀಡಲಾಗಿದೆ. ಉಳಿದಂತೆ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಬಹುತೇಕ ಕಡೆ ಲಸಿಕೆ ಇಲ್ಲ ಎಂಬ ಫಲಕ ಹಾಕಲಾಗಿದೆ.

ಕೆಲವು ಕಡೆ ಬೆಳಗ್ಗೆ 5 ಗಂಟೆಯಿಂದ ಸಾಲುಗಟ್ಟಿ ನಿಂತರೆ ಬೆಳಗ್ಗೆ 9 ಗಂಟೆಗೆ ಬಂದು ಸಿಬ್ಬಂದಿ ಲಸಿಕೆ ಇಲ್ಲ ಎಂಬ ಫಲಕ ಅಳವಡಿಸಿದ್ದಾರೆ. ಇದರಿಂದ ಕೆರಳಿದ ಸಾರ್ವಜನಿಕರು ಸಿಬ್ಬಂದಿ ಜೊತೆ ವಾಗ್ವಾದ ನಡೆಸಿರುವ ಘಟನೆಗಳು ವರದಿಯಾಗಿವೆ.
 

Follow Us:
Download App:
  • android
  • ios