ಅರ್ಧಕ್ಕರ್ಧ ಕೆಎಸ್ಸಾರ್ಟಿಸಿ ಬಸ್‌ ಎಲೆಕ್ಷನ್‌ಗೆ, ಖಾಸಗಿ ಬಸ್‌ಗಳಿಂದ ಪ್ರಯಾಣಿಕರ ಸುಲಿಗೆ, 8100 ಬಸ್‌ ಹೊಂದಿರುವ ಕೆಎಸ್‌ಆರ್‌ಟಿಸಿ. ಈ ಪೈಕಿ 4100 ಬಸ್‌ ಚುನಾವಣೆಗೆ ನಿಯೋಜನೆ, 4000 ಬಸ್‌ ಮಾತ್ರ ಸೇವೆಗೆ ಬಳಕೆ. ಊರಿಗೆ ಹೋಗಲು ನಿರೀಕ್ಷೆಗೂ ಮೀರಿ ಬಂದ ಪ್ರಯಾಣಿಕರು, ಬಸ್‌ಗಳು ಸಿಗದ್ದರಿಂದ ಪ್ರಯಾಣಿಕರ ತೀವ್ರ ಆಕ್ರೋಶ. 

ಬೆಂಗಳೂರು(ಮೇ.10): ಚುನಾವಣೆ ಕಾರ್ಯಕ್ಕೆ ದೊಡ್ಡ ಪ್ರಮಾಣದ ಬಸ್‌ ಒದಗಿಸಿದ ಕಾರಣ ಮತದಾನಕ್ಕೆಂದು ಮಂಗಳವಾರ ತಮ್ಮ ಊರುಗಳಿಗೆ ಹೋಗಲು ಹೊರಟಿದ್ದವರಿಗೆ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಬಸ್‌ಗಳು ಸಿಗದೆ ಪರದಾಡಿದರು. ತಾಸುಗಟ್ಟಲೆ ಕಾದರೂ ಬಸ್‌ ಸಿಗದೇ ಆಕ್ರೋಶಗೊಂಡ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ವಿರುದ್ಧ ಕಿಡಿಕಾರಿದರು.

ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ವಿವಿಧ ಜಿಲ್ಲೆಗಳಿಗೆ ತೆರಳಲು ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದರಿಂದ ಎಚ್ಚೆತ್ತುಕೊಂಡ ಕೆಎಸ್‌ಆರ್‌ಟಿಸಿ ನಿಗಮ, ಸುಮಾರು 300 ಬಿಎಂಟಿಸಿ ಬಸ್‌ಗಳ ಮೂಲಕ ಪ್ರಯಾಣಿಕರು ತಮ್ಮ ಜಿಲ್ಲೆಗಳಿಗೆ ತೆರಳಲು ಅನುಕೂಲ ಮಾಡಿಕೊಟ್ಟಿತು.

ಮತದಾನ ಮುಕ್ತಾಯವಾಗುವವರೆಗೆ ಪ್ರತಿಬಂಧಕಾಜ್ಞೆಯ ಜಾರಿ

ಕೆಎಸ್‌ಆರ್‌ಟಿಸಿ 8100 ಬಸ್‌ ಹೊಂದಿದ್ದು, ಚುನಾವಣಾ ಕರ್ತವ್ಯ ಮತ್ತು ಪೊಲೀಸ್‌ ಬಂದೋಬಸ್‌್ತಗಾಗಿ 4100 ಬಸ್‌ಗಳನ್ನು ಒದಗಿಸಿತ್ತು. ಉಳಿದ ನಾಲ್ಕು ಸಾವಿರ ಬಸ್‌ಗಳನ್ನು ಮಾತ್ರ ಕಾರ್ಯಾಚರಣೆಗೆ ಬಳಸಿಕೊಳ್ಳಲು ನಿರ್ಧರಿಸಿತ್ತು. ಆದರೆ, ಮಂಗಳವಾರ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದು ಕೆಎಸ್‌ಆರ್‌ಟಿಸಿ ತಲೆನೋವಿಗೆ ಕಾರಣವಾಯಿತು. ಬಸ್‌ಗಳ ಕೊರತೆಯಿಂದ ಸಿಟ್ಟುಗೊಂಡಿದ್ದ ಪ್ರಯಾಣಿಕರು ಬಸ್‌ ಚಾಲಕರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಯಾಣಿಕರನ್ನು ನಿಯಂತ್ರಿಸಲು ಕೆಎಸ್‌ಆರ್‌ಟಿಸಿ ಭದ್ರತಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

ಬಿಎಂಟಿಸಿಯ 300 ಬಸ್‌ ಬಳಕೆ:

ಪ್ರಯಾಣಿಕರ ಒತ್ತಡಕ್ಕೆ ಮಣಿದು ಬಿಎಂಟಿಸಿಯ 40 ವೋಲ್ವೋ ಬಸ್‌ಗಳು ಹಾಗೂ 260 ಸಾಮಾನ್ಯ ಬಸ್‌ಗಳನ್ನು ಅಂತರ ಜಿಲ್ಲಾ ಸಂಚಾರ ಕಾರ್ಯಾಚರಣೆಗೆ ಕೆಎಸ್‌ಆರ್‌ಟಿಸಿ ಬಳಸಿಕೊಂಡಿತು. ಕೆಂಪೇಗೌಡ ಬಸ್‌ ನಿಲ್ದಾಣದಿಂದ ಚಳ್ಳಕೆರೆ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಿರಿಯೂರು, ಬಳ್ಳಾರಿ, ಮೈಸೂರು, ಹಾಸನ, ಹಾವೇರಿ ಕಡೆಗೆ ಬಿಎಂಟಿಸಿ ಬಸ್‌ಗಳನ್ನು ಬಿಡಲಾಯಿತು. ಬನಶಂಕರಿ ಬಸ್‌ ನಿಲ್ದಾಣದಿಂದ ಮೈಸೂರು, ಮಳವಳ್ಳಿ, ಕನಕಪುರ, ಮಂಡ್ಯ ಕಡೆಗೆ ಬಸ್‌ಗಳು ಕಾರ್ಯಾಚರಣೆ ನಡೆಸಿದವು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.

ಇದೇ ಮೊದಲ ಬಾರಿಗೆ ಚುನಾವಣಾ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸಲು ಊರುಗಳಿಗೆ ತೆರಳುತ್ತಿದ್ದಾರೆ. ಬಸ್‌ಗಳನ್ನು ಚುನಾವಣಾ ಕರ್ತವ್ಯಕ್ಕೆ ಒದಗಿಸಿದ್ದರಿಂದ ಕೊರತೆ ಉಂಟಾಗಿದ್ದು ಬಿಎಂಟಿಸಿ ಬಸ್‌ಗಳನ್ನು ಹೆಚ್ಚುವರಿಯಾಗಿ ಪಡೆದು, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದರು.

ನೀವು ನೀಡುವ ಮತ ಇತಿಹಾಸವಾಗಲಿ: ಲಾಲ್‌

ಖಾಸಗಿ ಬಸ್‌ ಟಿಕೆಟ್‌ :

ಚುನಾವಣೆ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳ ಬುಕ್ಕಿಂಗ್‌ ಕೂಡ ಭರ್ತಿಯಾಗಿದ್ದು ಹೆಚ್ಚುವರಿ ಬಸ್‌ಗಳನ್ನು ಖಾಸಗಿ ಬಸ್‌ಗಳ ಮಾಲೀಕರು ಕಾರ್ಯಾಚರಣೆಗೆ ಬಿಟ್ಟಿದ್ದರು. ಹೀಗಾಗಿ ಖಾಸಗಿ ಬಸ್‌ ಟಿಕೆಟ್‌ ದರವನ್ನು ದ್ವಿಗುಣ ಮಾಡಿದ್ದರು. ಈ ಹಿಂದೆ 900 ರು.ಗಳಿದ್ದ ಟಿಕೆಟ್‌ ಬೆಲೆ 2 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಉಡುಪಿ, ಮಂಗಳೂರು, ಶಿವಮೊಗ್ಗ, ಗೋವಾ, ಚಿಕ್ಕಮಗಳೂರು, ಬಳ್ಳಾರಿ, ಕೊಡಗು, ಬಾಗಲಕೋಟೆ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಗೆ ಟಿಕೆಟ್‌ ದರ ಶಾಕ್‌ ನೀಡಿತ್ತು.

ಬಹುತೇಕ ಬಸ್‌ಗಳ ಸೀಟ್‌ಗಳನ್ನು ರಾಜಕೀಯ ಪಕ್ಷಗಳ ಮುಖಂಡರೇ ಬುಕ್‌ ಮಾಡಿದ್ದಾರೆ. ಹೀಗಾಗಿ ಹೆಚ್ಚುವರಿ ಬಸ್‌ಗಳನ್ನು ಬಸ್‌ ಮಾಲೀಕರು ತರಬೇಕಾಗಿದೆ. ಆದ್ದರಿಂದ ಸ್ವಲ್ಪ ಟಿಕೆಟ್‌ ದರದಲ್ಲಿ ಏರಿಳಿತವಾಗಿದೆ. ಇದು ಈ ದಿನಕ್ಕೆ ಮಾತ್ರ ಸೀಮಿತ. ನಾಳೆಯಿಂದ ಟಿಕೆಟ್‌ ದರ ಎಂದಿನಂತಿರಲಿದೆ ಎಂದು ಬಸ್‌ ಮಾಲೀಕರೊಬ್ಬರು ತಿಳಿಸಿದರು.