Asianet Suvarna News Asianet Suvarna News

ಲಾಕ್‌ಡೌನ್‌ ಸಡಿಲಿಕೆ: ಬೆಂಗಳೂರಲ್ಲಿ ವೀಕೆಂಡ್‌ ಭಾರೀ ಜನದಟ್ಟಣೆ ಶುರು!

ಅನ್‌ಲಾಕ್‌ ಜಾರಿ ಬಳಿಕ ಸಹಜ ಸ್ಥಿತಿಯತ್ತ ಬೆಂಗಳೂರು| ಪ್ರಮುಖ ಪ್ರದೇಶಗಳ ಬೇಕರಿ, ಹೋಟೆಲ್‌ಗೆ ಜನರ ಲಗ್ಗೆ|  ರಜಾ ದಿನದಲ್ಲೂ ಹೆಚ್ಚಾದ ವಾಹನ ದಟ್ಟಣೆ| ಕೋವಿಡ್‌ ನಿಯಮ ಮರೆತ ಸಾರ್ವಜನಿಕರು| 

People Did Not Follow About Government Rules in Bengaluru
Author
Bengaluru, First Published Sep 7, 2020, 9:46 AM IST

ಬೆಂಗಳೂರು(ಸೆ.07): ಲಾಕ್‌ಡೌನ್‌ ಸಡಿಲಿಕೆಯೊಂದಿಗೆ ಸಾಮಾನ್ಯ ದಿನಗಳಲ್ಲಿ ಬಹುತೇಕ ಸಹಜ ಸ್ಥಿತಿಗೆ ಮರಳಿರುವ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ಅನ್‌ಲಾಕ್‌ 4.0 ಜಾರಿ ಬಳಿಕ ವಾರಾಂತ್ಯದ ಮೊದಲ ಭಾನುವಾರ ಹಲವೆಡೆ ಭಾರೀ ಜನದಟ್ಟಣೆ ಕಂಡುಬಂತು.

ಭಾನುವಾರದ ಲಾಕ್‌ಡೌನ್‌ ತೆರವಾದ ಬಳಿಕವೂ ಕೆಲ ವಾರಗಳ ಕಾಲ ರಸ್ತೆಗಳಲ್ಲಿ ಜನರಿಲ್ಲದೆ, ಹೆಚ್ಚಿನ ವಾಹನ ಸಂಚಾರ ಇಲ್ಲದೆ, ಅಂಗಡಿಗಳು ಬಾಗಿಲು ತೆರೆಯದೆ ಅಘೋಷಿತ ಲಾಕ್‌ಡೌನ್‌ ಸ್ಥಿತಿಯಲ್ಲಿ ಕಂಡು ಬರುತ್ತಿದ್ದ ರಾಜಧಾನಿ ಬೆಂಗಳೂರು ಈಗ ಸಂಪೂರ್ಣ ಕೋವಿಡ್‌ ಪೂರ್ವದ ದಿನಗಳ ಹಂತಕ್ಕೆ ಮರಳಲಾರಂಭಿಸಿದೆ. ಪ್ರಮುಖವಾಗಿ ನಗರದ ಪ್ರಮುಖ ಪ್ರದೇಶಗಳಲ್ಲಿನ ಫುಡ್‌ ಸ್ಟ್ರೀಟ್‌ಗಳು, ಹೋಟೆಲ್‌, ಬೇಕರಿ, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿದ ಜನರು ತಮ್ಮಿಷ್ಟದ ರುಚಿಯಾದ ಆಹಾರ, ಖಾದ್ಯ, ಪಾನೀಯಗಳನ್ನು ಸವಿಯುತ್ತಿದ್ದುದು ಕಂಡುಬಂತು.

ವಿವಿ ಪುರದ ಫುಡ್‌ ಸ್ಟ್ರೀಟ್‌, ರಾಜಾಜಿನಗರ ಮತ್ತಿತರ ಪ್ರದೇಶಗಳ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಭಾನುವಾರ ಜನವೋ ಜನ. ಸಂಜೆಯಾಗುತ್ತಲೇ ರಸ್ತೆಯುದ್ದಕ್ಕೂ ಜಮಾಯಿಸಿದ ಜನರು ಇಲ್ಲಿನ ಉಪಹಾರ ಕೇಂದ್ರಗಳಲ್ಲಿ ಇಡ್ಲಿ, ದೋಸೆ, ಪುಲಾವ್‌, ಚಿತ್ರಾನ್ನ, ಜೊತೆಗೆ ಮೆಣಸಿನ ಕಾಯಿ, ಬಾಳೆ ಕಾಯಿ ಬಜ್ಜಿ, ವಡೆ, ಬೋಂಡಾ ಸವಿದರು. ಬೇಕರಿಗಳಲ್ಲಿ ಸಿಹಿ ತಿನಿಸುಗಳನ್ನು ಖರೀದಿಸಿದರು. ಕೆಲವರು ಕುಟುಂಬ ಸಮೇತರಾಗಿ ಆಗಮಿಸಿ ಸ್ಥಳದಲ್ಲೇ ಉಪಹಾರ ಸೇವಿಸಿದರೆ, ಇನ್ನು ಕೆಲವರು ಕೊರೋನಾ ಆತಂಕದಿಂದ ಪಾರ್ಸೆಲ್‌ ತೆಗೆದುಕೊಂಡು ಹೋಗುತ್ತಿದ್ದರು. ಇದರ ನಡುವೆ ರುಚಿಕರ ಆಹಾರ ಸೇವಿಸುವ ಬರದಲ್ಲಿ ಕೆಲ ನಾಗರಿಕರು ಆ ಜನದಟ್ಟಣೆ ನಡುವೆಯೂ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತಕ ಕಾಯ್ದುಕೊಳ್ಳುವಂತಹ ಕೋವಿಡ್‌ ನಿಯಂತ್ರಣ ನಿಯಮಗಳನ್ನೇ ಮರೆತಂತೆ ಕಂಡುಬಂದರು.

ಸೋಂಕಿತರ ಸಂಖ್ಯೆ 4 ಲಕ್ಷಕ್ಕೆ : ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖ

ಇದು ವಿವಿ ಪುರದಲ್ಲಿ ಮಾತ್ರ ಕಂಡುಬಂದ ದೃಶ್ಯವಲ್ಲ. ಎಂ.ಜಿ.ರಸ್ತೆ, ಬ್ರಿಗೇಟ್‌ ರಸ್ತೆಯ, ಜಯನಗರ, ಜೆ.ಪಿ.ನಗರ, ಮೈಸೂರು ರಸ್ತೆ, ರಾಜರಾಜೇಶ್ವರಿ ನಗರ, ವಿಜಯನಗರ, ನಾಗರಬಾವಿ, ಯಶವಂತಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿನ ಹೋಟೆಲ್‌ಗಳು, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲೂ ಜನದಟ್ಟಣೆ ಸಾಮಾನ್ಯ ದಿನಗಳಂತಿತ್ತು.

ಮಾರುಕಟ್ಟೆ, ಅವೆನ್ಯೂ ರಸ್ತೆಯಲ್ಲೂ ಜನ

ಕೆಲ ದಿನಗಳ ಹಿಂದಷ್ಠೇ ಪುನಾರಂಭಗೊಂಡಿರುವ ನಗರದ ಪ್ರಮುಖ ಮಾರುಕಟ್ಟೆಯಲ್ಲೂ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಗ್ರಾಹಕರು ತರಕಾರಿ, ಹಣ್ಣು ಹಂಪಲು ಖರೀದಿಸಿದರು. ಇದೇ ಪ್ರದೇಶದ ಜನಜಂಗುಳಿ ಪ್ರದೇಶ ಅವೆನ್ಯೂ ರಸ್ತೆಯಲ್ಲೂ ವ್ಯಾಪಾರದ ಭರಾಟೆ ಜೋರಾಗಿಯೇ ಇತ್ತು.

ಇಷ್ಟು ದಿನ ಭಾನುವಾರ ಬಿಕೋ ಎನ್ನುತ್ತಿದ್ದ ನಗರದ ರಸ್ತೆಗಳಲ್ಲಿ ಈಗ ಸಾಮಾನ್ಯ ದಿನಗಳಂತೆ ವಾಹನಗಳು ಸಂಚರಿಸಲಾರಂಭಿಸಿವೆ. ರಜೆ ದಿನವೂ ಜನರು ಹೊರಬರುತ್ತಿದ್ದು, ತಮ್ಮ ಊರು, ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ನೀಡಲಾರಂಭಿಸಿದ್ದಾರೆ. ಇದರಿಂದ ರಜಾ ದಿನದಲ್ಲೂ ವಾಹನ ದಟ್ಟಣೆ ಹೆಚ್ಚಾಗಿದೆ.

ಕೋವಿಡ್‌ ನಿಯಮ ಮರೆತ ಸಾರ್ವಜನಿಕರು

ಭಾನುವಾರ ರಜಾ ದಿನ ಕಳೆಯಲು ಮನೆಯಿಂದ ಹೊರಬಂದ ಜನರು ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿದ್ದು ಅಲ್ಲಲ್ಲಿ ಕಂಡುಬಂತು. ಕೆಲವರು ಮಾಸ್ಕ್‌ ಧರಿಸಿರಲಿಲ್ಲ, ಇನ್ನು ಸಾಮಾಜಿಕ ಅಂತರ ಲೆಕ್ಕಕ್ಕೇ ಇಲ್ಲ ಎನ್ನುವ ದೃಶ್ಯಗಳು ಕಂಡುಬಂದವು.

ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಲೇ ಇದೆ. ನಿತ್ಯ ಸಾವಿರಾರು ಜನರಿಗೆ ಸೋಂಕು ದೃಢಪಡುತ್ತಿದೆ. ಆದರೆ, ಜನರಲ್ಲಿ ಕೋವಿಡ್‌ ಬಗ್ಗೆ ಇದುವರೆಗೆ ಇದ್ದ ಭಯ ಆತಂಕ ಮರೆತಂತೆ ಕಂಡುಬರುತ್ತಿದೆ. ಮಾರುಕಟ್ಟೆ, ಬಾರ್‌ ಅಂಡ್‌ ರೆಸ್ಟೋರೆಂಟ್‌, ಹೋಟೆಲ್‌ಗಳು, ಅಂಗಡಿ, ರಸ್ತೆಗಳಲ್ಲಿ ಸಂಚರಿಸುವಾಗ, ದೇವಸ್ಥಾನಗಳು ಸೇರಿದಂತೆ ಸಾರ್ವನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸ್ಯಾನಿಟೈಸರ್‌ ಬಳಕೆ ಮಾಡಬೇಕೆಂಬ ನಿಯಮಗಳನ್ನು ಅನೇಕ ಜನರು ಗಾಳಿಗೆ ತೂರುತ್ತಿದ್ದಾರೆ. ಜನರ ಈ ನಿರ್ಲಕ್ಷ್ಯದಿಂದ ಕೋವಿಡ್‌ ಇನ್ನೊಂದು ತಿಂಗಳಲ್ಲಿ ಕಡಿಮೆಯಾಗಬಹುದೆಂಬ ತಜ್ಞರ ನಿರೀಕ್ಷೆ, ಅಧ್ಯಯನ, ಅಂದಾಜು ಲೆಕ್ಕಾಚಾರಗಳೆಲ್ಲಾ ತಲೆಕೆಳಕಾಗುವ ಆತಂಕ ಶುರುವಾಗಿದೆ.
 

Follow Us:
Download App:
  • android
  • ios