Asianet Suvarna News Asianet Suvarna News

ಮಾಧ್ಯಮಗಳನ್ನು ಜನರೂ ವಿಶ್ಲೇಷಿಸ್ತಾರೆ: ಸಿಎಂ ಬೊಮ್ಮಾಯಿ

ಸಮಾಜದಲ್ಲಿನ ಸಮಸ್ಯೆಗಳನ್ನು ವೈಭವೀಕರಿಸುವುದಕ್ಕಿಂತಲೂ ಆ ಸಮಸ್ಯೆಗಳಿಗೆ ಪರಿಹಾರವನ್ನು ವೈಭವೀಕರಿಸುವ ಕಾರ್ಯ ಮಾಧ್ಯಮಗಳಿಂದ ಆಗಬೇಕು: ಸಿಎಂ 

People Also Analyze the Media Says CM Basvaraj Bommai grg
Author
Bengaluru, First Published Jul 24, 2022, 1:00 AM IST

ಬೆಂಗಳೂರು(ಜು.24):  ಕನ್ನಡ ಪತ್ರಿಕೋದ್ಯಮದ ಹೊಸ ಮಾಧ್ಯಮ ‘ವಿಸ್ತಾರ ನ್ಯೂಸ್‌’ನ ವೆಬ್‌ಸೈಟ್‌ ಮತ್ತು ಲೋಗೋವನ್ನು ಶನಿವಾರ ಎಫ್‌ಕೆಸಿಸಿಐನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ‘ಸಮಾಜದಲ್ಲಿನ ಸಮಸ್ಯೆಗಳನ್ನು ವೈಭವೀಕರಿಸುವುದಕ್ಕಿಂತಲೂ ಆ ಸಮಸ್ಯೆಗಳಿಗೆ ಪರಿಹಾರವನ್ನು ವೈಭವೀಕರಿಸುವ ಕಾರ್ಯ ಮಾಧ್ಯಮಗಳಿಂದ ಆಗಬೇಕು. ಜನರ ನಿರೀಕ್ಷೆ ಕೂಡ ಇದೇ ಆಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ, ಸಮಾಜಗಳನ್ನು ಒಡೆಯುವಂತಹ ಸುದ್ದಿಗಳನ್ನು ವೈಭವೀಕರಿಸಬಾರದು. ಬದಲಾಗಿ ಅಂತಹ ಸ್ಥಿತಿಯನ್ನು ಹೇಗೆ ನಿಯಂತ್ರಣಕ್ಕೆ ತರಬೇಕು ಎನ್ನುವುದಕ್ಕೆ ಒತ್ತು ನೀಡಬೇಕು. ಅಪಘಾತವಾದಾಗ ಅದರ ಭೀಕರತೆಯ ದೃಶ್ಯಗಳನ್ನು ತೋರಿಸುವ ಬದಲು ಚಿಕಿತ್ಸೆ ಬಗ್ಗೆ ಒತ್ತು ಕೊಡಬೇಕು. ಸಮಾಜಕ್ಕೆ ನಕಾರಾತ್ಮಕ ಅಂಶ ಬಿತ್ತುವ ಸುದ್ದಿಗಳನ್ನೂ ಧನಾತ್ಮಕವಾಗಿ ಪರಿವರ್ತಿಸಬೇಕು. ಸಮಸ್ಯೆಗಳಿಗೆ ಯಾರು ಬೇಕಾದರೂ ಕಾರಣ ಆಗಬಹುದು. ಆದರೆ ಪರಿಹಾರದ ಭಾಗವಾಗಲು ಎಲ್ಲರಿಂದಲೂ ಸಾಧ್ಯವಿಲ್ಲ. ಹೀಗಾಗಿಯೇ, ಮಾಧ್ಯಮಗಳು ಸಮಸ್ಯೆಗಳ ಪರಿಹಾರದ ಭಾಗವಾಗಬೇಕು’ ಎಂದರು.

ವಿಸ್ತಾರ ಮೀಡಿಯಾ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಈ ದೇಶದಲ್ಲಿ ಯಾವೆಲ್ಲ ಒಳಿತಾಗುತ್ತವೆಯೋ ಅದೆಲ್ಲದಕ್ಕೂ ನಾವೇ ಕಾರಣ ಎಂದು ಮಾಧ್ಯಮದವರು ತಿಳಿದುಕೊಂಡಿದ್ದರೆ, ದೇಶದಲ್ಲಿರುವ ದೋಷಗಳಿಗೂ ನಾವು ಹೊಣೆ ಹೊರಬೇಕಾಗುತ್ತದೆ. ಪಾರದರ್ಶಕತೆಗೆ ಮಾಧ್ಯಮ ಪರ್ಯಾಯವಾದಾಗ ಸಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ. ಜನರು ದೂರದ ಊರಿನ ವಿಷಯಗಳಿಗಿಂತ ತಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಹೀಗಾಗಿ, ಮಾಧ್ಯಮಗಳು ನಾಲ್ಕು ಗೋಡೆಗಳ ನಡುವೆ ಕುಳಿತು ಜನರಿಗೆ ಯಾವ ರೀತಿ ಸುದ್ದಿ/ಅಂಶಗಳು ಬೇಕು ಎಂದು ನಿರ್ಧರಿಸುವ ಬದಲು ಸಮಾಜದ ಒಡನಾಟದೊಂದಿಗೆ ನಿರ್ಧರಿಸಬೇಕು ಎಂದರು.

Chikkamagaluru: ಪತ್ರಿಕೋದ್ಯಮ ಪದವಿಯಲ್ಲಿ ಚಿನ್ನದ ಪದಕ ಪಡೆದ ಆಮುದಾ!

ಕಾರ್ಯಕ್ರಮದ ವೇದಿಕೆಯಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌, ವಿಸ್ತಾರ ಮೀಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಎಚ್‌.ವಿ. ಧರ್ಮೇಶ್‌, ನಿರ್ದೇಶಕ ಶ್ರೀನಿವಾಸ ಹೆಬ್ಬಾರ್‌, ಕೂ ಸಾಮಾಜಿಕ ಜಾಲತಾಣದ ಸಹ ಸ್ಥಾಪಕ ಅಪ್ರಮೇಯ ರಾಧಾಕೃಷ್ಣ, ಓಪನ್‌ ಡಾಟ್‌ ಮನಿ ಜಾಲತಾಣದ ಸಹ ಸ್ಥಾಪಕ ಅನೀಶ್‌ ಅಚ್ಯುತನ್‌, ಫ್ರೀಡಂ ಆ್ಯಪ್‌ನ ಸ್ಥಾಪಕ ಹಾಗೂ ಸಿಇಒ ಸಿ.ಎಸ್‌.ಸುಧೀರ್‌, ಎಫ್‌ಕೆಸಿಸಿಐ ಅಧ್ಯಕ್ಷ ಡಾ.ಐ.ಎಸ್‌.ಪ್ರಸಾದ್‌, ವಿಸ್ತಾರ ನ್ಯೂಸ್‌ ಕಾರ್ಯಕಾರಿ ಸಂಪಾದಕ ಎಂ.ಎಸ್‌.ಶರತ್‌ ಉಪಸ್ಥಿತರಿದ್ದರು.
 

Follow Us:
Download App:
  • android
  • ios