ಬೆಂಗಳೂರು (ಸೆ.10):  ಕೊರೋನಾ ಸೇರಿದಂತೆ ವಿವಿಧ ಕಾರಣಗಳಿಂದ ವಿಳಂಬವಾಗಿರುವ 2934 ಕಲಾವಿದರಿಗೆ ನೀಡಬೇಕಾಗಿರುವ ಮಾಸಾಶನವನ್ನು 15 ದಿನದೊಳಗೆ ವಿತರಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಇಲಾಖೆ ಹಾಗೂ ವಿವಿಧ ಪ್ರಾಧಿಕಾರ, ಅಕಾಡೆಮಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಕಾಡೆಮಿಗಳು ಬ್ಯಾಂಕ್‌ ಮೂಲಕ 3.45 ಕೋಟಿ ರು. ಹಣವನ್ನು ಬಿಡುಗಡೆ ಮಾಡಿ ಕಲಾವಿದರಿಗೆ ತ್ವರಿತವಾಗಿ ಮಾಸಾಶನ ತಲುಪುವ ವ್ಯವಸ್ಥೆ ಮಾಡಬೇಕು ಎಂದರು. ಕಳೆದ ಮೂರು ವರ್ಷಗಳಿಂದ ವಿವಿಧ ಅಕಾಡೆಮಿಗಳು ವಾರ್ಷಿಕ ಪ್ರಶಸ್ತಿ ನೀಡಲಾಗಿಲ್ಲ. ತಕ್ಷಣ ಅರ್ಹರನ್ನು ಆಯ್ಕೆ ಮಾಡಿ ಪ್ರಶಸ್ತಿ ವಿತರಿಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಸಾಕಷ್ಟುವಿಳಂಬವಾಗಿದೆ. ಮತ್ತಷ್ಟುಕಾರಣ ನೀಡದೇ ಕ್ರಮಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.

ಕೊಂಕಣಿ, ಬ್ಯಾರಿ,ತುಳು ಹಾಗೂ ಕೊಡಗು ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಬಿಡುಗಡೆ ಮಾಡಿರುವ ಅನುದಾನವನ್ನು ಬಳಸಿಕೊಂಡು ನೆನೆಗುದಿಗೆ ಬಿದ್ದಿರುವ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕಾಲ ಮಿತಿಯಲ್ಲಿ ಪೂರ್ಣಗೊಳಿಸಿ, ಕಾರ್ಯಾರಂಭ ಮಾಡುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೆಂಗಳೂರಿನ 4 ಕಡೆ ಕಲಾಕ್ಷೇತ್ರ ನಿರ್ಮಾಣ: ಸಿ.ಟಿ.ರವಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಇ-ತಂತ್ರಾಂಶ ಬಳಸಿ ವಿವಿಧ ರೀತಿಯ ಕ್ರಿಯಾಶೀಲ ಕಾರ್ಯಕ್ರಮ ರೂಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಬರುವ ನವೆಂಬರ್‌ ಒಂದರಿಂದ ಜಾರಿಗೆ ತರಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅದೇ ರೀತಿ ಅಕಾಡೆಮಿ, ಪ್ರಾಧಿಕಾರಗಳ ಮುಖ್ಯಸ್ಥರು ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿ ಜಿಲ್ಲಾ ಮಟ್ಟದ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಬೇಕು.ಅಕಾಡೆಮಿ ಹಾಗೂ ಪ್ರಾಧಿಕಾರಗಳು ಈಗಾಗಲೇ ಮುದ್ರಿಸುವ ಪುಸ್ತಕಗಳನ್ನು ಮತ್ತೆ ಮುದ್ರಿಸದೇ, ಹೊಸ ಲೇಖಕರ ಕೃತಿಗಳ ಮುದ್ರಣಕ್ಕೆ ಆದ್ಯತೆ ನೀಡಬೇಕು ಎಂದು ಸಚಿವ ಸಿ.ಟಿ.ರವಿ. ಸಲಹೆ ನೀಡಿದರು.

ರಾಜ್ಯದಲ್ಲಿ ರಾಷ್ಟ್ರೀಯ ಲಲಿತ ಕಲಾ ಮೇಳ: ಈ ಬಾರಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲಿ ರಾಷ್ಟ್ರೀಯ ಲಲತ ಕಲಾ ಮೇಳ ನಡೆಸಲು ಉದ್ದೇಶಿಸಿದ್ದು, ರಾಜ್ಯಕ್ಕೂ ಈ ಸಂಬಂಧ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಈ ಸಂಬಂಧ ವಿಸ್ತೃತ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಕಾಡೆಮಿ, ಪ್ರಾಧಿಕಾರಗಳಿಗೆ ನೀಡುವ ಅನುದಾನವನ್ನು ದುರುಪಯೋಗ ಮಾಡಿಕೊಂಡರೆ, ಯಾರು ಎಷ್ಟೇ ಪ್ರಭಾವ ಇರಲಿ ಅಂತವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.