Asianet Suvarna News Asianet Suvarna News

ಬೆಂಗಳೂರಿನ 4 ಕಡೆ ಕಲಾಕ್ಷೇತ್ರ ನಿರ್ಮಾಣ: ಸಿ.ಟಿ.ರವಿ

ವಾರದೊಳಗೆ ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿ: ಸಿ.ಟಿ.ರವಿ| ವರ್ಷವಿಡೀ ಬೆಂಗಳೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಉದ್ದೇಶದಿಂದ ಬಜೆಟ್‌ನಲ್ಲಿ ನಾಲ್ಕು ಕಡೆ ರಂಗಮಂದಿರ ನಿರ್ಮಿಸಲು ನಿರ್ಧಾರ| ನಗರದ 4 ದಿಕ್ಕಿನಲ್ಲಿ 2 ಎಕರೆಯಿಂದ 5 ಎಕರೆ ಜಾಗದಲ್ಲಿ ರಂಗಮಂದಿರ ನಿರ್ಮಾಣ| 

Minister C T Ravi Says Construction of Kalakshetra on 4 sides of Bengaluru
Author
Bengaluru, First Published Sep 10, 2020, 8:11 AM IST

ಬೆಂಗಳೂರು(ಸೆ.10): ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ರಾಜಧಾನಿ ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ ರಂಗಮಂದಿರ ನಿರ್ಮಿಸಲು ವಾರದೊಳಗೆ ಭೂಮಿ ಗುರುತಿಸಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ರಂಗಭೂಮಿ ನಿರ್ಮಾಣ ಸಂಬಂಧ ಬಿಡಿಎ, ಬಿಬಿಎಂಪಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ವರ್ಷವಿಡೀ ಬೆಂಗಳೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಉದ್ದೇಶದಿಂದ ಬಜೆಟ್‌ನಲ್ಲಿ ನಾಲ್ಕು ಕಡೆ ರಂಗಮಂದಿರ ನಿರ್ಮಿಸಲು ಉದ್ದೇಶಿಸಿದೆ. ನಗರದ 4 ದಿಕ್ಕಿನಲ್ಲಿ 2 ಎಕರೆಯಿಂದ 5 ಎಕರೆ ಜಾಗದಲ್ಲಿ ರಂಗಮಂದಿರ ನಿರ್ಮಿಸಲಾಗುವುದು. ಒತ್ತುವರಿ ಮಾಡಿಕೊಂಡಿರುವ, ಕಾನೂನು ತೊಡಕು ಇಲ್ಲದ ನಿವೇಶನಗಳನ್ನು ಗುರುತಿಸಿ, ವಾರದೊಳಗೆ ಹಸ್ತಾಂತರ ಪ್ರಕ್ರಿಯೆ ಮುಗಿಸಬೇಕು, ವಿಳಂಬ ಮಾಡಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

'ಕೊರೋನಾ ಕಷ್ಟ ಕಡಿಮೆ ಮಾಡುವ 22 ಉತ್ಪನ್ನ ಬಿಡುಗಡೆ'

ಕೊರೋನಾ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಹಾಗಾಗಿ ಅಧಿಕಾರಿಗಳು ನಾಲ್ಕು ರಂಗಮಂದಿರಗಳ ನಿರ್ಮಾಣ ಕುರಿತು ವಿಸ್ತೃತ ಯೋಜನಾ ವರದಿ, ನೀಲ ನಕ್ಷೆ ಸಿದ್ಧಪಡಿಸಿ ಈ ವರ್ಷದ ಅಂತ್ಯದೊಳಗೆ ಕಾಮಗಾರಿ ಆರಂಭಿಸಬೇಕು. ನಾಲ್ಕು ರಂಗ ಮಂದಿರ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಒಟ್ಟು 60 ಕೋಟಿಗಳನ್ನು ಘೋಷಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ರಂಗ ಮಂದಿರ ನಿರ್ಮಾಣಕ್ಕೆ ಈಗಾಗಲೇ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಎರಡೂವರೆ ಎಕರೆ, ದೇವನಹಳ್ಳಿ ಕಸಬಾ ಹೋಬಳಿ ಕುನ್ನಹಳ್ಳಿ ಬಳಿ 5 ಎಕರೆ ಹಾಗೂ ಕೆಐಎಡಿಬಿ ಹಾಗೂ ಕರ್ನಾಟಕ ಗೃಹ ಮಂಡಳಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಜಾಗದಲ್ಲಿ ರಂಗ ಮಂದಿರ ನಿರ್ಮಾಣಕ್ಕೆ ನಿವೇಶನಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಸಭೆಯಲ್ಲಿ ಬಿಡಿಎ ಆಯುಕ್ತ ಮಹದೇವು, ಬಿಬಿಎಂಪಿ ಪ್ರತಿನಿಧಿ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಅಪರ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Follow Us:
Download App:
  • android
  • ios