ಬಾಬ್ರಿ ಮಸೀದಿ ಒಡೆದಾಗ ಚಪ್ಪಾಳೆ ತಟ್ಟಿದವನಿಗೆ ಕಪಾಳಕ್ಕೆ ಹೊಡೆದಿದ್ದ ಶ್ರೀಗಳು
ಬಾಬ್ರಿ ಮಸೀದಿಯನ್ನು ಕೆಡವಿದ ಸಂದರ್ಭದಲ್ಲಿ ಚಪ್ಪಾಳೆ ತಟ್ಟಿದ್ದ ಶಿಷ್ಯನೋರ್ವನಿಗೆ ಸಿಟ್ಟಿನಿಂದ ಶ್ರೀಗಳು ಕಪಾಳಕ್ಕೆ ಹೊಡೆದಿದ್ದರು.
ಉಡುಪಿ [ಡಿ.30]: ಸದಾ ಮಗುವಿನ ನಗುವನ್ನು ಮೊಗದಲ್ಲಿ ತುಳುಕಿಸಿಕೊಂಡಿರುವ ಪೇಜಾವರ ಶ್ರೀಗಳಿಗೆ ಸಿಟ್ಟು ಬಂದಿರುವುದನ್ನು ಯಾರೂ ನೊಡಿಲ್ಲ. ಆದರೂ ಅವರೇ ಹೇಳುವಂತೆ ಜೀವನದಲ್ಲಿ ಒಂದೇ ಒಂದು ಬಾರಿ ಅಸಹಾಯಕರಾಗಿ, ಉದ್ವಿಗ್ನರಾಗಿ, ಸಿಟ್ಟುಗೊಂಡು ಮಠದ ಶಿಷ್ಯನೊಬ್ಬನಿಗೆ ಹೊಡೆದಿದ್ದರು.
ಅದು 1992, ಪೇಜಾವರ ಶ್ರೀಗಳು ಅಯೋಧ್ಯೆಯಲ್ಲಿ ನಡೆಯುವ ಕರಸೇವೆಗೆ ಹೋಗಿದ್ದರು. ವಿವಾದಿತ ಬಾಬ್ರಿ ಮಸೀದಿಯ ಅನತಿ ದೂರದಲ್ಲಿ ಸಣ್ಣ ವೇದಿಕೆಯೊಂದರಲ್ಲಿ ಪೇಜಾವರ ಶ್ರೀಗಳು ಮತ್ತಿತರಿದ್ದರು. ಶಾಂತವಾಗಿ ಕರಸೇವೆ ಮಾಡಿ, ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸುವುದಷ್ಟೇ ಅಂದಿನ ಕಾರ್ಯಕ್ರಮವಾಗಿತ್ತು.
ಪೇಜಾವರ ಶ್ರೀಗಳ ಬಗೆಗಿನ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆದರೆ ಸೇರಿದ್ದ ಸಾವಿರ ಸಾವಿರ ಸಂಖ್ಯೆಯ ಕರಸೇವರು ಯಾರೂ ಯಾರ ಮಾತನ್ನೂ ಕೇಳುವಂತಿರಲಿಲ್ಲ. ಗುಂಪೊಂದು ಬಾಬ್ರಿ ಮಸೀದಿ ಯನ್ನೇರಿ, ನೋಡುನೋಡುತಿದ್ದಂತೆ ಗುಂಬಜ್‌ನ್ನು ಉರುಳಿಸಿಯೇ ಬಿಟ್ಟಿತು. ಪೇಜಾವರ ಶ್ರೀಗಳು ತಾಳ್ಮೆ ವಹಿಸುವಂತೆ, ಶಾಂತಿಯಿಂದಿರುವಂತೆ, ಮಸೀದಿಗೆ ಹಾನಿಯನ್ನುಂಟು ಮಾಡದಂತೆ ಪರಿಪರಿಯಾಗಿ ವಿನಂತಿಸಿದರೂ ಕರಸೇವಕರು ಗುಂಬಜನ್ನು ಉರುಳಿಸಿದರು.
ಪೇಜಾವರ ಶ್ರೀಗಳು ಅಸಹಾಯಕರಾಗಿ, ಪ್ರತಿಭಟಿಸಲಾಗದೆ, ಕರಸೇವರನ್ನು ನಿಯಂತ್ರಿಸಲಾಗದೇ ನಿಂತುನೋಡಬೇಕಾಯಿತು. ಆಗ ಪಕ್ಕದಲ್ಲಿ ನಿಂತಿದ್ದ ಮಠದ ಶಿಷ್ಯನೊಬ್ಬ ಖುಷಿಯಿಂದ ಜೋರಾಗಿ ಚಪ್ಪಾಳೆ ತಟ್ಟಿದ. ಅಷ್ಟೇ.. ಸಿಟ್ಟು ನೆತ್ತಿಗೇರಿದ ಪೇಜಾವರ ಶ್ರೀಗಳು ಆತನ ಕೆನ್ನೆಗೆ ಛಟೀರೆಂದು ಹೊಡೆದೇ ಬಿಟ್ಟರು. ಅವರ ಏಟಿನಲ್ಲಿ ಗುಂಬಜ್ ಒಡೆದ ಗುಂಪಿನ ಮೇಲಿದ್ದ ಅಸಮಾಧಾನವಿತ್ತು!