* ದೇವೇಗೌಡ, ಸಿದ್ದು, ಎಚ್‌ಡಿಕೆ ಆಪ್ತರು, ಪರಂ ಬಗ್ಗೆ ಬೇಹುಗಾರಿಕೆ: ಕಾಂಗ್ರೆಸ್‌* ಇಸ್ರೇಲಿ ಸಾಫ್ಟ್‌ವೇರ್‌ ಪೆಗಾಸಸ್‌ ಬಳಸಿ ಕದ್ದಾಲಿಕೆ* ತನಿಖೆಗೆ ಆಗ್ರಹಿಸಿ ಇಂದು ರಾಜಭವನಗಳಿಗೆ ಮುತ್ತಿಗೆ

ನವದೆಹಲಿ(ಜು.21): ಪೆಗಾಸಸ್‌ ಗೂಢಚಾರಿಕೆ ಸಾಫ್ಟ್‌ವೇರ್‌ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್‌ ಹಿರಿಯ ನಾಯಕರು ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲೂ ಈ ಸಾಫ್ಟ್‌ವೇರ್‌ ಬಳಸಿ ಪ್ರತಿಪಕ್ಷಗಳ ನಾಯಕರ ಆಪ್ತರ ಫೋನ್‌ ಕದ್ದಾಲಿಕೆ ನಡೆದಿದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ ಅವರ ಆಪ್ತರು ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ

ಜಿ. ಪರಮೇಶ್ವರ್‌ ಅವರ ಬೇಹುಗಾರಿಕೆ ನಡೆಸಲಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಗುರುವಾರ ದೇಶಾದ್ಯಂತ ರಾಜಭವನಗಳಿಗೆ ಮುತ್ತಿಗೆ ಹಾಕುವುದಾಗಿ ಪ್ರಕಟಿಸಿದ್ದಾರೆ.

Spyware Pegasus: 'ಟಾರ್ಗೆಟ್‌' ಪಟ್ಟಿಯಲ್ಲಿ ರಾಗಾ, ಪಿಕೆ, ಇಬ್ಬರು ಕೇಂದ್ರ ಸಚಿವರ ಹೆಸರು!

ದೆಹಲಿಯ ಎಐಸಿಸಿ ಕಚೇರಿಯಲ್ಲಿ ಬುಧವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಡಿಸಿಎಂ ಜಿ.ಪರಮೇಶ್ವರ್‌ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಕಿಡಿಕಾರಿದರು.

ಪಿಎ ಫೋನ್‌ ಕದ್ದಾಲಿಕೆ:

2019ರಲ್ಲಿ ಆಪರೇಷನ್‌ ಕಮಲ ನಡೆಸಲು ಫೋನ್‌ ಕದ್ದಾಲಿಕೆ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ಜತೆಗೆ ತಮ್ಮ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಆಪ್ತರ ಫೋನ್‌ ಕೂಡ ಕದ್ದಾಲಿಕೆ ಮಾಡಲಾಗಿದೆ ಎಂದು ಕಿಡಿಕಾರಿದರು. ಪೆಗಾಸಸ್‌ ಹಗರಣ ಕುರಿತು ಉನ್ನತಮಟ್ಟದ ತನಿಖೆ ಆಗಬೇಕು ಎಂದೂ ಒತ್ತಾಯಿಸಿದರು.

ಮೈತ್ರಿ ಸರ್ಕಾರದ ಅವಧಿಯಲ್ಲಿ ನಾನು ಮೊಬೈಲ್‌ ಬಳಕೆ ಮಾಡುತ್ತಿರಲಿಲ್ಲ. ಆಗ ಪೆಗಾಸಸ್‌ ಗೂಢಚಾರಿಕೆ ಸಾಫ್ಟ್‌ವೇರ್‌ ಬಳಸಿ ನನ್ನ ಆಪ್ತ ಕಾರ‍್ಯದರ್ಶಿ ವೆಂಕಟೇಶ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತ ಕಾರ‍್ಯದರ್ಶಿ ಸತೀಶ್‌, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಭದ್ರತಾ ಸಿಬ್ಬಂದಿ ಮಂಜುನಾಥ ಅವರ ಫೋನ್‌ ಕದ್ದಾಲಿಕೆ ಮಾಡಲಾಗಿದೆ. ಫೋನ್‌ ಕದ್ದಾಲಿಸಿರುವುದು ಅಪರಾಧ. ಕೇಂದ್ರ ಈ ಅಪರಾಧ ಮಾಡಿದೆ ಎಂದು ಆರೋಪಿಸಿದರು.

ಪೆಗಾಸಸ್ ಪೂರ್ವನಿಯೋಜಿತ ಪಿತೂರಿ; ಕಾಂಗ್ರೆಸ್ ರಾಜಕೀಯದಾಟ ತೆರೆದಿಟ್ಟ ರವಿಶಂಕರ್ ಪ್ರಸಾದ್!

ಫೋನ್‌ ಕದ್ದಾಲಿಕೆ ಸಂಬಂಧ ಕರ್ನಾಟಕದಲ್ಲಿ ಸಿಬಿಐ ತನಿಖೆ ನಡೆಯುತ್ತಿದೆ. ಆದರೆ, ಈ ಕಳ್ಳಗಿವಿ ವಿಚಾರವಾಗಿ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದರು.

ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್‌ ಕದ್ದಾಲಿಕೆ ಬಗ್ಗೆ ಯಡಿಯೂರಪ್ಪ ಸಿಬಿಐ ತನಿಖೆಗೆ ಸೂಚಿಸಿದ್ದಾರೆ. ಆದರೆ ಅದೇನಾಗಿದೆ ಅಂತ ಗೊತ್ತಿಲ್ಲ ಎಂದರು.

ಇಂದು ರಾಜಭವನಕ್ಕೆ ಮುತ್ತಿಗೆ:

ದೇಶದಲ್ಲಿ ಖಾಸಗಿತನವೇ ಇಲ್ಲದಂತಾಗಿದೆ. ಕೇಂದ್ರ ಸರ್ಕಾರ ಬೆಡ್‌ ರೂಮ…, ಬಾತ್‌ ರೂಂ, ಅಡುಗೆ ಮನೆಗೂ ಬಂದಿದೆ. ಫೋನ್‌ ಕದ್ದಾಲಿಕೆ ಸಂಬಂಧ ಸುಪ್ರೀಂ ಕೋರ್ಟ್‌ ನೇತೃತ್ವದಲ್ಲಿ ತನಿಖೆ ಆಗಬೇಕೆಂದು ಆಗ್ರಹಿಸಿ ಎಲ್ಲ ರಾಜ್ಯಗಳಲ್ಲಿ ಗುರುವಾರ ರಾಜಭವನ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಹೇಳಿದರು.

ಧ್ಯಪ್ರದೇಶದಲ್ಲೂ ಬೇಹುಗಾರಿಕೆ

ನವದೆಹಲಿ: ಮೋದಿ ಸರ್ಕಾರ ಆಪರೇಷನ್‌ ಕಮಲ ಮೂಲಕ ಪ್ರಜಾತಂತ್ರ ಅಪಹರಣ ಮಾಡಿದೆ. ಕರ್ನಾಟಕದಲ್ಲಿ ಸಮಿಶ್ರ ಸರ್ಕಾರ ಕೆಡವಲು ಪೆಗಾಸಸ್‌ ಗೂಢಚಾರಿಕೆ ಸಾಫ್ಟ್‌ವೇರ್‌ ಬಳಕೆ ಮಾಡಲಾಗಿದೆ. ಮಧ್ಯಪ್ರದೇಶ, ಅರುಣಾಚಲಪ್ರದೇಶದಲ್ಲೂ ಪೆಗಾಸಸ್‌ ಸಾಫ್ಟ್‌ವೇರ್‌ ಬಳಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಆರೋಪಿಸಿದ್ದಾರೆ.

ಮೋದಿ-ಶಾ ನಿರಂಕುಶ ಪ್ರಭುತ್ವ: ಖರ್ಗೆ

ದೇಶದಲ್ಲಿ ಪ್ರಜಾತಂತ್ರ ಸಂಸ್ಥೆಗಳನ್ನು ಮುಗಿಸುವ ಕೆಲಸ ಆಗುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ತಯಾರಾಗಿದ್ದಾರೆ. ಈ ಇಬ್ಬರು ನಿರಂಕುಶ ಪ್ರಭುತ್ವ ನಡೆಸಲು ಹೊರಟಿದ್ದಾರೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ಈ ವಿಚಾರವಾಗಿ ರಾಜ್ಯಸಭೆ, ಲೋಕಸಭೆಯಲ್ಲಿ ನಾವು ಏನು ಮಾಡಬೇಕು ಅದನ್ನು ಮಾಡುತ್ತಿದ್ದೇವೆ. ಫ್ರಾನ್ಸ್‌ನಲ್ಲಿ ಪೋನ್‌ ಕದ್ದಾಲಿಕೆ ವಿಚಾರದಲ್ಲಿ ತನಿಖೆ ಆರಂಭವಾಗಿದೆ. ಅದೇ ರೀತಿ ಭಾರತದಲ್ಲೂ ತನಿಖೆ ಆಗಬೇಕು ಎಂದು ಖರ್ಗೆ ಆಗ್ರಹಿಸಿದರು.

ಪೆಗಾಸಸ್ ಬಳಿಕ ಛತ್ತೀಸ್‌ಗಢ ಫೋನ್ ಟ್ಯಾಪಿಂಗ್ ಸದ್ದು, ಗಾಂಧಿ ಕುಟುಂಬಕ್ಕೆ ಸವಾಲು!

ಏನಿದು ಕಳ್ಳಗಿವಿ ವಿವಾದ?

ಇಸ್ರೇಲ್‌ ಮೂಲದ ಕಣ್ಗಾವಲು ಸಾಫ್ಟ್‌ವೇರ್‌ ‘ಪೆಗಾಸಸ್‌’ ಬಳಸಿ ವಿಶ್ವಾದ್ಯಂತ 50 ಸಾವಿರ ಜನರ ಬೇಹುಗಾರಿಕೆ ನಡೆಸಲಾಗಿದೆ ಎಂದು ಫ್ರಾನ್ಸ್‌ ಮೂಲದ ‘ಫಾರ್ಬಿಡನ್‌ ಸ್ಟೋರಿಸ್‌’ ಎಂಬ ಸ್ವಯಂ ಸೇವಾ ಸಂಸ್ಥೆ ಹೇಳಿತ್ತು. ಬಳಕೆದಾರರ ಅರಿವಿಗೇ ಬಾರದೆ ಅವರ ಮೊಬೈಲ್‌ ಮೂಲಕ ಸಂಪೂರ್ಣ ಚಲನವಲನ, ಮಾಹಿತಿ ಸಂಗ್ರಹಿಸುವ ಸಾಫ್ಟ್‌ವೇರ್‌ ಇದು. ಒಟ್ಟು 400 ಭಾರತೀಯರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ಆರೋಪವಿದ್ದು, ಅದರಲ್ಲಿ ಕರ್ನಾಟಕದ ರಾಜಕಾರಣಿಗಳ ಹೆಸರೂ ಇದೆ ಎಂದು ವರದಿಗಳು ತಿಳಿಸಿವೆ.