Spyware Pegasus: 'ಟಾರ್ಗೆಟ್' ಪಟ್ಟಿಯಲ್ಲಿ ರಾಗಾ, ಪಿಕೆ, ಇಬ್ಬರು ಕೇಂದ್ರ ಸಚಿವರ ಹೆಸರು!
* ಇಡೀ ದೆಶದಲ್ಲಿ ಸದ್ದು ಮಾಡುತ್ತಿದೆ ಪೆಗಾಸಸ್ ಸಾಫ್ಟ್‌ವೇರ್ ವಿಚಾರ
* ಫೋನ್ ಹ್ಯಾಕ್ ಆದವರ ಪಟ್ಟಿಯಲ್ಲಿ ರಾಗಾ, ಪ್ರಶಾಂತ್ ಕಿಶೋರ್, ಅಶ್ವಿನಿ ವೈಷ್ಣವ್ ಹೆಸರು
* ಅಧಿವೇಶನದಲ್ಲೂ ಗದ್ದಲ ಮೂಡಿಸಿದೆ ಪೆಗಾಸಸ್ ವಿಚಾರ
ನವದೆಹಲಿ(ಜು.19): ಪೆಗಾಸಸ್ ಸಾಫ್ಟ್‌ವೇರ್ ಇಡೀ ದೆಶದಲ್ಲಿ ಸದ್ದು ಮಾಡುತ್ತಿರುವ ವಿಚಾರ. ಇಂದು ಸೋಮವಾರ ಮುಂಗಾರು ಅಧಿವೇಶನ ಆರಂಭವಾಗಿದ್ದು, ಸದನದಲ್ಲೂ ಇದೇ ವಿಚಾರ ಸರ್ಕಾರ ಹಾಗೂ ವಿಪಕ್ಷಗಳ ನಡುವಿನ ಗದ್ದಲಕ್ಕೆ ಸಾಕ್ಷಿಯಾಗಿದೆ. ಆದರೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲ ಶಾಕಿಂಗ್ ವಿಚಾರ ಬಯಲಾಗಿದ್ದು, ಮೊಬೈಲ್ ಹ್ಯಾಕ್ ಆದ ಪ್ರಮುಖರ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹಾಗೂ ಮೋದಿ ಕ್ಯಾಬಿನೆಟ್‌ನ ಐಟಿ ಸಚಿವ ಅಶ್ವಿನಿ ವೈಷ್ಣವ್ ಹೆಸರಿದೆ ಎಂದು ‘ದಿ ವೈರ್’ ವರದಿ ಮಾಡಿದೆ.
Spyware Pegasus: ತನ್ನ ವಿರುದ್ಧದ ಆರೋಪ ಸುಳ್ಳೆಂದ ಇಸ್ರೇಲ್ ಕಂಪನಿ!
ಹೌದು ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್‌ನ ಇಬ್ಬರು ಸಚಿವರು, ಮೂವರು ವಿಪಕ್ಷ ನಾಯಕರು, ಓರ್ವ ನ್ಯಾಯಾಧೀಶ, ಉದ್ಯಮಿಗಳು, ಚಳವಳಿಗಾರರು ಮತ್ತು 40ಕ್ಕೂ ಹೆಚ್ಚು ಪತ್ರಕರ್ತರು ಸೇರಿದಂತೆ 300ಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳು ಪೆಗಾಸಸ್ ಸಾಫ್ಟ್‌ವೇರ್‌ನಿಂದ ಹ್ಯಾಕ್ ಆಗಿರುವುದಾಗಿ ಭಾರತದ ‘ದಿ ವೈರ್’ ವರದಿ ಮಾಡಿತ್ತು. ಆದರೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಬಹಿರಂಗಗೊಳಿಸಿರುವ ಈ ವೆಬ್‌ಸೈಟ್, ಈ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿರುವುದನ್ನು ಖಚಿತಪಡಿಸಿದೆ.
ಅಲ್ಲದೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್ ಬ್ಯಾನರ್ಜಿ, ಮೋದಿ ಕ್ಯಾಬಿನೆಟ್‌ನ ನೂತನ ಸಚಿವರಾದ ಪ್ರಹ್ಲಾದ್ ಪಟೇಲ್ ಹಾಗೂ ಅಶ್ವಿನಿ ವೈಷ್ಣವ್ ಹೆಸರೂ ಇರುವುದಾಗಿ ವರದಿ ಮಾಡಿದೆ.
40 ಪತ್ರಕರ್ತರು ಸೇರಿ 300 ಗಣ್ಯರ ಮೊಬೈಲ್ ಹ್ಯಾಕ್: ವರದಿ!
ಈ ವಿಚಾರ ಇಂದಿನಿಂದ ಆರಂಭವಾಗಿರುವ ಮುಂಗಾರು ಅಧಿವೇಶನದಲ್ಲೂ ಭಾರೀ ಸದ್ದು ಮಾಡಿದೆ. ವಿಪಕ್ಷಗಳು ಇದು ಸರ್ಕಾರವೇ ಮಾಡಿಸಿದ ಕುತಂತ್ರ, ಈ ಬಗ್ಗೆ ತನಿಖೆ ನಡೆಯಲೇಬೇಕೆಂದು ಆಗ್ರಹಿಸಿವೆ. ಹೀಗಿರುವಾಗ ಸರ್ಕಾರದ ಪರ ಮಾತನಾಡಿರುವ ಐಟಿ ಸಚಿವ ಅಶ್ವಿನಿ ವೈಷ್ಣವ್ ಅಧಿವೇಶನದ ಹಿಂದಿನ ದಿನ ಇಂತಹುದ್ದೊಂದು ಸೂಕ್ಷ್ಮ ಹಾಗೂ ಗಂಭೀರ ಆರೋಪಗಳಿರುವ ವರದಿ ಪ್ರಸಾರವಾಗಿರುವುದು ಕಾಕತಾಳೀಯವಲ್ಲ ಎಂದಿದ್ದಾರೆ.
ಏನಿದು ಪೆಗಾಸಸ್ ಸ್ಪೈವೇರ್? ಹೇಗೆ ಫೋನ್ ಒಳಗೆ ನುಸುಳುತ್ತದೆ?
ವಾಷಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್ ಸೇರಿದಂತೆ 16 ಅಂತಾರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ಭಾರತದ ‘ದಿ ವೈರ್’ ವೆಬ್‌ಸೈಟ್ ವಿಶ್ವಾದ್ಯಂತ 50 ಸಾವಿರ ಮೊಬೈಲ್ ಸಂಖ್ಯೆಗಳನ್ನು ಇಸ್ರೇಲ್‌ನ ಕಣ್ಗಾವಲು ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಸಾಫ್ಟ್‌ವೇರ್‌ನಿಂದ ಹ್ಯಾಕ್ ಮಾಡಲಾಗಿದೆ ಎಂದು ವರದಿ ಮಾಡಿದ್ದವು.