ರಮೇಶ್‌ ಆತ್ಮಹತ್ಯೆ ಸುದ್ದಿ ತಿಳಿದು ಕೆರಳಿದ ಮೃತನ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಬಂಧುಗಳು, ಐಟಿ ಅಧಿಕಾರಿಗಳು ಮತ್ತು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಬೆಂಗಳೂರು (ಅ.13):  ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಆಪ್ತ ಸಹಾಯಕ ರಮೇಶ್‌ ಆತ್ಮಹತ್ಯೆ ಸುದ್ದಿ ತಿಳಿದು ಕೆರಳಿದ ಮೃತನ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಬಂಧುಗಳು, ಐಟಿ ಅಧಿಕಾರಿಗಳು ಮತ್ತು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಮೇಶ್‌ ಆತ್ಮಹತ್ಯೆ ವಿಚಾರ ತಿಳಿದು ಜ್ಞಾನಭಾರತಿ ಆವರಣಕ್ಕೆ ಕಣ್ಣೀರಿಡುತ್ತಲೇ ಆಗಮಿಸಿದ ಮೃತನ ಕುಟುಂಬದವರು ಹಾಗೂ ಸ್ನೇಹಿತರು, ರಮೇಶ್‌ ಸಾವಿಗೆ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣ. ಅಮಾಯಕನನ್ನುಅಧಿಕಾರಿಗಳು ಬಲಿ ಪಡೆದರು ಎಂದು ಕಿಡಿಕಾರಿದರು.

ಮಧ್ಯಾಹ್ನ 12 ಗಂಟೆಗೆ ರಮೇಶ್‌ ನಿಗೂಢವಾಗಿ ನಾಪತ್ತೆಯಾಗಿರುವ ಸಂಗತಿ ತಿಳಿದು ಆತಂಕಗೊಂಡಿದ್ದ ಪತ್ನಿ ಸೌಮ್ಯಾ, ಇದಾದ ಅರ್ಧ ತಾಸಿಗೆ ಮಾಧ್ಯಮಗಳಲ್ಲಿ ರಮೇಶ್‌ ಆತ್ಮಹತ್ಯೆ ಸುದ್ದಿ ಪ್ರಸಾರ ನೋಡಿ ಆಘಾತಕ್ಕೊಳಗಾಗಿದ್ದರು. ಬಳಿಕ ನಿತ್ರಾಣರಾಗಿದ್ದ ಅವರನ್ನು ಸಮಾಧಾನಪಡಿಸಿ ಕುಟುಂಬ ಸದಸ್ಯರು, ಘಟನಾ ಸ್ಥಳಕ್ಕೆ ಕರೆತಂದರು. ಅಷ್ಟರಲ್ಲಿ ಬೆಂಗಳೂರಿನಲ್ಲೇ ನೆಲೆಸಿದ್ದ ಮೃತನ ಸೋದರ ಸತೀಶ್‌ ಸಹ ದೌಡಾಯಿಸಿದರು. ಇದಾದ ಕೆಲ ಹೊತ್ತಿನಲ್ಲೇ ರಾಮನಗರ ಸೇರಿದಂತೆ ಇತರೆಡೆಯಿಂದ ಅವರ ಬಂಧುಗಳು ಹಾಗೂ ಸ್ನೇಹಿತರು ಜ್ಞಾನಭಾರತಿಗೆ ಬಂದರು.

ಕುಟುಂಬ ಸದಸ್ಯರ ಅಕ್ರಂದನ ಮುಗಿಲು ಮುಟ್ಟಿತು. ‘ನನ್ನನ್ನು ನಡು ದಾರಿಯಲ್ಲಿ ಬಿಟ್ಟು ಹೋದರಲ್ಲಾ. ನನ್ನ ಪತಿ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇ ತಪ್ಪಾಯ್ತಾ’ ಎಂದು ರಮೇಶ್‌ ಪತ್ನಿ ಸೌಮ್ಯ ರೋಧಿಸುತ್ತಿದ್ದ ದೃಶ್ಯ ಮನಕಲುವಂತಿತ್ತು. ರಮೇಶ್‌ ಸೋದರಿ ಲಕ್ಷ್ಮೇ ದೇವಿ ಅವರಂತೂ ‘ಇಷ್ಟೊಂದು ಜನ ಇದ್ದಾರೆ. ನೀನು ಇಲ್ಲೆಲ್ಲೋ ಮರದಲ್ಲಿ ಕುಳಿತಿದ್ದೀಯಾ. ಬಾರೋ ರಮೇಶ’ ಎಂದೂ ಕೂಗುತ್ತಾ ಕಣ್ಣೀರುಡುತ್ತಿದ್ದ ನೋಡಿ ನೆರೆದವರ ಕಣ್ಣಾಲಿಗಳು ಹನಿಗೂಡಿದ್ದವು. ಅಲ್ಲದೆ ತನ್ನ ತಂಗಿ ಪದ್ಮಾ ಮತ್ತು ತಮ್ಮ ಸತೀಶನಿಗೆ ಲಕ್ಷ್ಮೇ ಅಪ್ಪಿಕೊಂಡು ಗೋಳಾಡಿದರು. ಲಕ್ಷ್ಮೇ ಅವರ ಪುತ್ರ, ‘ನನಗೆ ತಂದೆಯಂತೆ ಮಾಮ ಇದ್ದರು. ಅವರೂ ಇಲ್ಲ ಅನ್ನೋದನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ದುಃಖಿಸಿದರು.

ಇದೇ ಸಮಯಕ್ಕೆ ಘಟನಾ ಸ್ಥಳಕ್ಕೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು, ಮೃತದೇಹದ ದರ್ಶನ ಪಡೆದ ಬಳಿಕ ಕುಟುಂಬದವರ ಸ್ವಾಂತನ ಹೇಳಲು ಬಂದರು. ಆಗ ರಮೇಶ್‌ ಪತ್ನಿ ಸೌಮ್ಯ ಅವರು, ‘ಸರ್‌ ನಿಮಗೆ ಪ್ರಾಮಾಣಿಕವಾಗಿ ನನ್ನ ಪತಿ ಕೆಲಸ ಮಾಡಿದ್ದಾರೆ. ನಮಗೇಕೆ ಯಾಕೆ ಸರ್‌ ಇಂಥ ನೋವು ಕೊಟ್ರು. ನನಗೆ, ನನ್ನ ಮಕ್ಕಳಿಗೆ ದಿಕ್ಕು ಯಾರೂ’ ಎಂದು ಕಣ್ಣೀರಿಟ್ಟರು. ಈ ಮಾತುಗಳಿಗೆ ಪ್ರತಿಕ್ರಿಯಿಸಲಾರದೆ ಭಾವುಕರಾಗಿ ಪರಮೇಶ್ವರ್‌ ಸಹ ಕಣ್ಣೀರು ಸುರಿಸಿದರು. ಬಳಿಕ ಮೃತನ ಕುಟುಂಬದವರಿಗೆ ಅವರು ಧೈರ್ಯ ತುಂಬಿದರು.

ಬಾಕ್ಸ್‌...ಅಪ್ಪನನ್ನು ಕೇಳಬೇಡ್ವೋ...

ಮಧ್ಯಾಹ್ನ 2.30ಕ್ಕೆ ಮನೆಯಲ್ಲಿದ್ದ ರಮೇಶ್‌ ಅವರ ಎಂಟು ವರ್ಷದ ಪುತ್ರ ಮೋಹಿತ್‌ ಹಾಗೂ ಆರು ವರ್ಷದ ಶ್ರೇಯಾಳನ್ನು ಕುಟುಂಬ ಸದಸ್ಯರು, ಜ್ಞಾನಭಾರತಿ ಆವರಣಕ್ಕೆ ಕರೆ ತಂದರು. ಆಗ ಮಕ್ಕಳನ್ನು ನೋಡುತ್ತಿದ್ದಂತೆ ಮೋಹಿತ್‌ ಇನ್ನೂ ಅಪ್ಪನನ್ನು ಕೇಳಬೇಡ್ವೋ. ಅಪ್ಪ ನಮ್ಮನ್ನೆಲ್ಲಾ ಬಿಟ್ಟು ಹೊರಟು ಹೋದ್ರೋ ಎಂದು ಜೋರಾಗಿ ಕೂಗಿಕೊಂಡು ರಮೇಶ್‌ ಪತಿನ ಸೌಮ್ಯಾ ಕಣ್ಣೀರಿಡುತ್ತಿದ್ದರು. ಅಳುತ್ತಿದ್ದ ತಾಯಿಯನನ್ನು ಅಪ್ಪಿಕೊಂಡು ಮಕ್ಕಳು ಕಣ್ಣೀರಿಟ್ಟರು. ಬಳಿಕ ಬಂಧುಗಳು, ತಾಯಿ-ಮಕ್ಕಳನ್ನು ಸಂತೈಸಿದರು.

ಬಿಜೆಪಿಗೆ ಧಿಕ್ಕಾರ ಕೂಗಿದ ಜನರು

ಇದೇ ವೇಳೆ ರಮೇಶ್‌ ಸಾವಿಗೆ ಐಟಿ ಅಧಿಕಾರಗಳೇ ಕಾರಣ ಎಂದೂ ಆರೋಪಿಸಿದ ಜನರು, ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರ ದಿಕ್ಕಾರ ಕೂಗಿದರು. ಕಾಂಗ್ರೆಸ್‌ ನಾಯಕರನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸುತ್ತಿದೆ ಎಂದು ಕಿಡಿಕಾರಿದರು. ಒಂದು ಹಂತದಲ್ಲಿ ಘಟನಾ ಸ್ಥಳಕ್ಕೆ ಬಂದಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ಸುತ್ತುವರೆದ ಮೃತನ ಸ್ನೇಹಿತರು ಹಾಗೂ ಸಂಬಂಧಿಕರು, ಐಟಿ ದಾಳಿ ನಡೆದಾಗ ಯಾಕೆ ರಮೇಶ್‌ ರಕ್ಷಣೆಗೆ ಬರಲಿಲ್ಲ ಎಂದು ಪ್ರಶ್ನಿಸಿ ಘೇರಾವ್‌ ಹಾಕಿದರು. ಆಗ ರಮೇಶ್‌ನ ಕುಟುಂಬದ ಸದಸ್ಯರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.