ಪರೀಕ್ಷಾ ಕೆಲಸಕ್ಕೆ ಪಂಚಾಯತಿ ಸಿಬ್ಬಂದಿ ನಿಯೋಜನೆ ಇಲ್ಲ: ಪ್ರಿಯಾಂಕ್ ಖರ್ಗೆ
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜಿಲ್ಲಾ ಉಪ ನಿರ್ದೇಶಕರುಗಳ ಕಾರ್ಯವನ್ನು ಜಿಪಂ ಸಿಇಒ ಮೇಲುಸ್ತುವಾರಿಗೆ ಒಳಪಡಿಸುವ ಯಾವುದೇ ಪ್ರಸ್ತಾವನೆ ಇಲಾಖೆ ಮುಂದಿಲ್ಲ. ಈ ಕುರಿತು ಯಾವುದೇ ಮಾಹಿತಿಯೂ ನನಗಿಲ್ಲ. ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಜೊತೆಗೆ ಸಾಕಷ್ಟು ಕೆಲಸವೂ ಇದ್ದು ಸಿಬ್ಬಂದಿಯನ್ನು ಬೇರೆ ಇಲಾಖೆ ಕೆಲಸಕ್ಕೆ ಕಳುಹಿಸಲು ಸಾಧ್ಯವಿಲ್ಲ. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಚರ್ಚಿಸುವುದಾಗಿ ತಿಳಿಸಿದ ಸಚಿವ ಪ್ರಿಯಾಂಕ್ ಖರ್ಗೆ
ವಿಧಾನ ಪರಿಷತ್(ಡಿ.15): ಕರ್ನಾಟಕ ರಾಜ್ಯ ಶಾಲೆ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಮುಂದೆ ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಯನ್ನು ಪರೀಕ್ಷಾ ಪ್ರಕ್ರಿಯೆಗೆ ನಿಯೋಜಿಸುವ ಪ್ರಸ್ತಾಪ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬುಧವಾರ ಜೆಡಿಎಸ್‌ನ ಹಿರಿಯ ಸದಸ್ಯರಾದ ಎಸ್.ಎಲ್.ಭೋಜೇಗೌಡ ಮತ್ತು ಮರಿತಿಬ್ಬೇಗೌಡ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಅವರ ಪರವಾಗಿ ಸಚಿವರು ಉತ್ತರಿಸಿದರು.
ಹಾಗೆಯೇ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜಿಲ್ಲಾ ಉಪ ನಿರ್ದೇಶಕರುಗಳ ಕಾರ್ಯವನ್ನು ಜಿಪಂ ಸಿಇಒ ಮೇಲುಸ್ತುವಾರಿಗೆ ಒಳಪಡಿಸುವ ಯಾವುದೇ ಪ್ರಸ್ತಾವನೆ ಇಲಾಖೆ ಮುಂದಿಲ್ಲ. ಈ ಕುರಿತು ಯಾವುದೇ ಮಾಹಿತಿಯೂ ನನಗಿಲ್ಲ. ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಜೊತೆಗೆ ಸಾಕಷ್ಟು ಕೆಲಸವೂ ಇದ್ದು ಸಿಬ್ಬಂದಿಯನ್ನು ಬೇರೆ ಇಲಾಖೆ ಕೆಲಸಕ್ಕೆ ಕಳುಹಿಸಲು ಸಾಧ್ಯವಿಲ್ಲ. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಚರ್ಚಿಸುವುದಾಗಿ ತಿಳಿಸಿದರು.
ಸಚಿವರಲ್ಲಿ ಗೊಂದಲ!
ಆದರೆ, ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಲಿಖಿತವಾಗಿ ನೀಡಿದ ಉತ್ತರದಲ್ಲಿ ಶಾಲಾ ಶಿಕ್ಷಣ ಇಲಾಖೆಯಲ್ಲಿನ (ಪದವಿಪೂರ್ವ ) ಜಿಲ್ಲಾಮಟ್ಟದಲ್ಲಿನ ಕಚೇರಿಯ ದೈನಂದಿನ ಕಾರ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮೇಲುಸ್ತುವಾರಿ ಮಾಡುವ ಅವಶ್ಯಕತೆ ಇದೆ. ಆದ್ದರಿಂದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜಿಲ್ಲಾ ಉಪ ನಿರ್ದೇಶಕರ ಕಾರ್ಯವನ್ನು ಸಂಬಂಧಪಟ್ಟ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು(ಜಿಪಂ ಸಿಇಒ), ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಮೇಲುಸ್ತುವಾರಿಗೆ ಒಳಪಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂದು ತಿಳಿಸಿದ್ದರು. ಹೀಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಇಲಾಖೆ ಸಚಿವರ ನಡುವೆ ಮಾಹಿತಿ ಕೊರತೆ ಇರುವುದು ಸ್ಪಷ್ಟವಾಗಿದ್ದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.