ಕಾರವಾರ ಬಂದರಿಗೆ ಎಂಟಿಆರ್ ಓಶಿಯನ್ ಎಂಬ ಸರಕು ಹಡಗಿನಲ್ಲಿ ಆಗಮಿಸಿದ್ದ ಪಾಕಿಸ್ತಾನ ಪ್ರಜೆಯೊಬ್ಬನನ್ನು ಭಾರತದ ನೆಲಕ್ಕೆ ಇಳಿಯಲು ಅನುಮತಿಸದೆ, ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಘಟನೆ ನಡೆದಿದೆ. ಈ ಹಡಗು ಇರಾಕ್‌ನ ಅಲ್ ಜುಬೈರ್‌ನಿಂದ ಮೇ 12 ರಂದು ಬಿಟುಮಿನ್ ತುಂಬಿಕೊಂಡು ಕಾರವಾರಕ್ಕೆ ಆಗಮಿಸಿತ್ತು.

ಕಾರವಾರ (ಮೇ.14): ಕಾರವಾರ ಬಂದರಿಗೆ ಎಂಟಿಆರ್ ಓಶಿಯನ್ ಎಂಬ ಸರಕು ಹಡಗಿನಲ್ಲಿ ಆಗಮಿಸಿದ್ದ ಪಾಕಿಸ್ತಾನ ಪ್ರಜೆಯೊಬ್ಬನನ್ನು ಭಾರತದ ನೆಲಕ್ಕೆ ಇಳಿಯಲು ಅನುಮತಿಸದೆ, ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಘಟನೆ ನಡೆದಿದೆ. ಈ ಹಡಗು ಇರಾಕ್‌ನ ಅಲ್ ಜುಬೈರ್‌ನಿಂದ ಮೇ 12 ರಂದು ಬಿಟುಮಿನ್ ತುಂಬಿಕೊಂಡು ಕಾರವಾರಕ್ಕೆ ಆಗಮಿಸಿತ್ತು.

ಹಡಗಿನಲ್ಲಿ 15 ಭಾರತೀಯರು, 2 ಸಿರಿಯಾ ಪ್ರಜೆಗಳು ಮತ್ತು 1 ಪಾಕಿಸ್ತಾನ ಪ್ರಜೆ ಸೇರಿದಂತೆ ಒಟ್ಟು 18 ಮಂದಿ ಸಿಬ್ಬಂದಿ ಇದ್ದರು. ಹಡಗಿನಲ್ಲಿ ಪಾಕಿಸ್ತಾನ ಪ್ರಜೆಯ ಇರುವ ಬಗ್ಗೆ ಬಂದರು ಇಲಾಖೆಯಿಂದ ಕರಾವಳಿ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಕೂಡಲೇ ಕೋಸ್ಟಲ್ ಪೊಲೀಸರು ಬಂದರಿಗೆ ತೆರಳಿ ಆತನನ್ನು ಭಾರತದ ನೆಲಕ್ಕೆ ಇಳಿಯದಂತೆ ತಡೆದರು. ಜೊತೆಗೆ, ಆತನ ಮೊಬೈಲ್ ಮತ್ತು ದಾಖಲೆಗಳನ್ನು ಹಡಗಿನ ಕ್ಯಾಪ್ಟನ್ ಮೂಲಕವೇ ವಶಪಡಿಸಿಕೊಂಡರು.

ಎರಡು ದಿನಗಳ ಕಾಲ ಬಿಟುಮಿನ್ ಅನ್‌ಲೋಡ್ ಮಾಡಿದ ನಂತರ, ಇಂದು (ಮೇ 14) ಬೆಳಗ್ಗೆ ಹಡಗು ಕಾರವಾರದಿಂದ ಶಾರ್ಜಾಕ್ಕೆ ತೆರಳಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಪ್ರಜೆಯನ್ನು ಕೂಡ ಹಡಗಿನಲ್ಲೇ ಕಳುಹಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ಕರಾವಳಿಯಲ್ಲೂ ಕಟ್ಟೆಚ್ಚರ

ಬಂದರು ಇಲಾಖೆಯ ಅಧಿಕಾರಿಯೊಬ್ಬರು, ಪಾಕಿಸ್ತಾನ ಮತ್ತು ಚೀನಾದ ಧ್ವಜವಿರುವ ಹಡಗುಗಳಿಗೆ ಭಾರತೀಯ ಬಂದರುಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಪ್ರಜೆಯೊಬ್ಬ ಹಡಗಿನ ಸಿಬ್ಬಂದಿಯಾಗಿ ಆಗಮಿಸಿದ್ದ ಬಗ್ಗೆ ಮಾಹಿತಿ ದೊರೆತ ಕೂಡಲೇ, ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಿ, ಕಾನೂನುಬದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಭಾರತ ಪಾಕಿಸ್ತಾನ ಸಂಘರ್ಷ ನಡೆದಿರುವ ಹಿನ್ನೆಲೆ ಕರಾವಳಿಯಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಪ್ರಜೆ ಹಡಗಿನ ಮೂಲಕ ಭಾರತ ಪ್ರವೇಶಿರುವ ಹಿನ್ನೆಲೆ ಕಾರವಾರ ಬಂದರಿನಲ್ಲಿ ಭದ್ರತೆಯನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಲಾಗಿದ್ದು, ಕರಾವಳಿ ಪೊಲೀಸರು ಮತ್ತು ಬಂದರು ಇಲಾಖೆಯ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.