ಪೆಟ್ರೋಲ್, ಡೀಸೆಲ್ ಹಾಗೂ ತರಕಾರಿ ಬೆಲೆ ಏರಿಕೆ ನಡುವೆಯೇ ರಾಜ್ಯದಲ್ಲಿ ಇದೀಗ ವಿವಿಧ ತಳಿಯ ಅಕ್ಕಿ ಬೆಲೆಯೂ ಹೆಚ್ಚಳವಾಗಿದೆ. ಪ್ರತಿ ಕೆಜಿ ಅಕ್ಕಿಗೆ 6 ರಿಂದ 10 ರು.ನಷ್ಟು ಹಾಗೂ 25-26 ಕೆ.ಜಿ. ಚೀಲಕ್ಕೆ 150 ರು.ನಷ್ಟು ದರ ಏರಿಕೆಯಾಗುವ ಮೂಲಕ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬಿದ್ದಿದೆ.ಮಾರುಕಟ್ಟೆಯಲ್ಲಿ ಅಕ್ಕಿ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿದೆ. ಕೇಂದ್ರ ಸರ್ಕಾರ ವಿವಿಧ ದೇಶಗಳಿಗೆ ಅಕ್ಕಿ ರಫ್ತು ಮಾಡಲು ಅವಕಾಶ ನೀಡಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿ ಲಭ್ಯತೆ ಕಡಿಮೆಯಾಗಿದೆ. ಇದೇ ಕಾರಣದಿಂದ ಬೆಲೆ ಏರಿಕೆಯಾಗುತ್ತಿದೆ. ಮುಂದಿನ ನವೆಂಬರ್ ವರೆಗೂ ಅಕ್ಕಿ ಕೊರತೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಸ್ಥಳೀಯ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.ಸೋನಾ ಮಸೂರಿ, ಸ್ಟೀಮ್ ಅಕ್ಕಿ, ಕೋಲಂ ಮತ್ತು ರಾ ರೈಸ್ ಸೇರಿ ಎಲ್ಲ ಮಾದರಿಯ ಅಕ್ಕಿ ಬೆಲೆ ಕೆಜಿಗೆ 6ರಿಂದ 10 ರು.ಹೆಚ್ಚಳವಾಗಿದೆ. ಹತ್ತು ದಿನಗಳ ಹಿಂದೆಯೇ ಅಕ್ಕಿ ದರ ಏರಿಕೆಯಾಗಿದೆ. ಪ್ರತಿ 26 ಕೆಜಿ ಅಕ್ಕಿ ಮೂಟೆ ಬೆಲೆ ಕನಿಷ್ಠ 150 ರು.ಹೆಚ್ಚಳವಾಗಿದೆ. ಸೋನಾ ಸ್ಟೀಮ್ ರೈಸ್ 43 ರು.ನಿಂದ 49 ರು.ಗೆ ಹಾಗೂ ಸೋನಾ ರಾ ರೈಸ್ 52 ರೂ.ನಿಂದ 59 ರು.ಗೆ ಏರಿಕೆಯಾಗಿದೆ. ಅಕ್ಟೋಬರ್, ನವೆಂಬರ್ನಲ್ಲಿ ಹೊಸ ಅಕ್ಕಿ ಮಾರುಕಟ್ಟೆಗೆ ಬರುವವರೆಗೂ ಕಾಯಬೇಕಾಗಿರುವುದು ಅನಿವಾರ್ಯ ಎನ್ನುತ್ತಾರೆ ವ್ಯಾಪಾರಸ್ಥರು.