Asianet Suvarna News Asianet Suvarna News

Raita Ratna Award: ಕೃಷಿ ರಫ್ತಿನಲ್ಲಿ ಭಾರತ ನಂ.1 ಆಗಬೇಕು: ಕೇಂದ್ರ ಸಚಿವೆ ಶೋಭಾ

ರಾಸಾಯನಿಕ ಅಂಶ ಕಡಿಮೆ ಇರುವ ಉತ್ಪನ್ನಕ್ಕೆ ಬೇಡಿಕೆ ಇದೆ, ಅಂತಹ ಆಹಾರ ತಯಾರಿಸಲು ರೈತರನ್ನು ಸಜ್ಜುಗೊಳಿಸಬೇಕು, ಹತ್ತೇ ವರ್ಷದಲ್ಲಿ ಕೃಷಿ ಬಜೆಟ್‌ ಗಾತ್ರ 1 ಲಕ್ಷ ಕೋಟಿ ಏರಿಕೆಯಾಗಿದೆ ರೈತರತ್ನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ. 

India Should Become No.1 in Agricultural Exports Says Union Minister Shobha Karandlaje grg
Author
First Published Mar 18, 2023, 8:32 AM IST

ಬೆಂಗಳೂರು(ಮಾ.18): ಕೃಷಿ ಉತ್ಪನ್ನ ರಫ್ತು ರಾಷ್ಟ್ರಗಳ ಪಟ್ಟಿಯಲ್ಲಿ ನಾವು ಮುಂಚೂಣಿಗೇರಲು ಪ್ರಯತ್ನಿಸಬೇಕು ಎಂದಿರುವ ಕೇಂದ್ರ ಕೃಷಿ, ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆ ಬೇಡಿಕೆ ಅನುಸಾರ ಗುಣಮಟ್ಟದ ಆಹಾರ ಪೂರೈಸುವ ಮಟ್ಟಕ್ಕೆ ರೈತರನ್ನು ರೂಪಿಸಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.

'ರೈತ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಹಲವು ವರ್ಷಗಳ ಕನಸಿನಂತೆ ನಾವು ಇಂದು ಜಾಗತಿಕ ಮಟ್ಟದ ಕೃಷಿ ಉತ್ಪನ್ನ ರಫ್ತಿನಲ್ಲಿ 9ನೇ ಸ್ಥಾನದಲ್ಲಿದ್ದೇವೆ. ಅದನ್ನು ಮೊದಲೆರಡು ಸ್ಥಾನಕ್ಕೆ ಕೊಂಡೊಯ್ಯುವಂತೆ ಪ್ರಯತ್ನಿಸಬೇಕಿದೆ. ವಿಶ್ವಸಂಸ್ಥೆ, ಜಿ-20 ಸಮಾವೇಶಗಳಲ್ಲಿ ಗುಣಮಟ್ಟದ ಆಹಾರ ಉತ್ಪನ್ನ ಕಳಿಸಲು ಬೇಡಿಕೆಯಿದೆ. ರಾಸಾಯನಿಕ ಅಂಶ ಎಷ್ಟುಕಡಿಮೆಯಿದೆ ಎಂಬುದರ ಮೇಲೆ ಜಾಗತಿಕ ಮಾರುಕಟ್ಟೆಆಹಾರ ಉತ್ಪನ್ನವನ್ನು ಖರೀದಿ ಮಾಡುತ್ತದೆ. ಈ ಬಗ್ಗೆ ರೈತರಿಗೆ ತಿಳುವಳಿಕೆ ಮೂಡಿಸಬೇಕು. ಕೃಷ್ಯುತ್ಪನ್ನ ಸಂಸ್ಕರಣೆಗೊಂಡು, ಒಳ್ಳೆಯ ಬ್ರ್ಯಾಂಡ್‌ನಲ್ಲಿ ಪ್ಯಾಕೇಜ್‌ ಆಗಿ ಅಂತಾರಾಷ್ಟ್ರೀಯ ಮಾರುಕಟ್ಟೆತಲುಪಬೇಕು. ಈ ಮಟ್ಟಕ್ಕೆ ನಮ್ಮ ರೈತರನ್ನು ಬೆಳೆಸುವ ಅಗತ್ಯವಿದೆ ಎಂದರು.

ಕೃಷಿ ಕ್ಷೇತ್ರದ 12 ಸಾಧಕರಿಗೆ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ರೈತ ರತ್ನ ಪ್ರಶಸ್ತಿ ಪ್ರದಾನ

ಸ್ವಾತಂತ್ರ್ಯದ ಬಳಿಕ ಜನಸಂಖ್ಯೆಗೆ ತಕ್ಕ ಆಹಾರವನ್ನು ಉತ್ಪಾದಿಸುವ ಅನಿವಾರ್ಯದಿಂದ ಹಸಿರು ಕ್ರಾಂತಿಗೆ ಹೊರಳಬೇಕಾಯಿತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಕೃಷಿ ಕೇವಲ ಅನ್ನಕ್ಕಾಗಿ ಮಾತ್ರವಲ್ಲ, ಗೌರವಯುತ ಉದ್ಯಮವಾಗಿ ಬೆಳೆಯಬೇಕು. ಪ್ರಸ್ತುತ ದೇಶದಲ್ಲಿ ಬಳಸಿ ಮಿಕ್ಕುವಷ್ಟುಆಹಾರ ಉತ್ಪಾದನೆ ಆಗುತ್ತಿದೆ. ಹೀಗಾಗಿ ಗುಣಮಟ್ಟದ ಆಹಾರ ಉತ್ನನ್ನಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಗುಣಮಟ್ಟದ ಆಹಾರ ಉತ್ಪಾದಿಸಲು ರೈತರಿಗೆ ಸೌಲಭ್ಯ ಒದಗಿಸಬೇಕು. ಅದಕ್ಕಾಗಿ ರೈತರಿಗೆ ತಕ್ಕ ತಂತ್ರಜ್ಞಾನ, ಹಣದ ಸಹಾಯ ನೀಡಲು ಕೇಂದ್ರ, ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.

ಕೃಷಿ ಸ್ವಾಭಿಮಾನದ ಕಸುಬು. ಕೃಷಿಕ ಈ ದೇಶದ ಬೆನ್ನೆಲುಬು ಎನ್ನಲಾಗುತ್ತದೆ. ಆದರೆ, ಸ್ವಾತಂತ್ರ್ಯದ ಬಳಿಕ ಈ ಬೆನ್ನುಲುಬನ್ನು ಗಟ್ಟಿಗೊಳಿಸುವ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. 2013ರ ಕೇಂದ್ರದ ಬಜೆಟ್‌ನಲ್ಲಿ ಕೃಷಿಗೆ ಕೇವಲ .23 ಸಾವಿರ ಕೋಟಿ ಮೀಸಲಿಡಲಾಗಿತ್ತು. ಆದರೆ, ಕಳೆದ ಬಜೆಟ್‌ನಲ್ಲಿ . 1 ಲಕ್ಷ 25 ಸಾವಿರ ಕೋಟಿ ನೀಡಲಾಗಿದೆ. ಜತೆಗೆ ಹೆಚ್ಚುವರಿಯಾಗಿ ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ .1 ಲಕ್ಷ ಕೋಟಿ ಇಟ್ಟಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮೂಲಕ ನಮ್ಮ ಜಿಲ್ಲೆಗಳ ಕುಂದುಕೊರತೆ ನಿವಾರಣೆಗೆ ಏನಾಗಬೇಕು ಎಂದು ಯೋಜನೆ ರೂಪಿಸಲು ಪ್ರಧಾನಿ ಮೋದಿಯವರು ಸೂಚಿಸಿದ್ದಾರೆ. ಅದರಂತೆ ನಡೆದ ಅಧ್ಯಯನದಲ್ಲಿ ಶೈತ್ಯಾಗಾರ, ದಾಸ್ತಾನು ಕೊಠಡಿ, ಪ್ಯಾಕೇಜಿಂಗ್‌, ಮಾರುಕಟ್ಟೆಕೃಷಿ ಸಂಸ್ಕರಣ ಘಟಕ, ಆಹಾರ ಪರೀಕ್ಷಾ ಲ್ಯಾಬ್‌, ಮಣ್ಣು ಪರೀಕ್ಷಾ ಕೇಂದ್ರಗಳ ಸಮಸ್ಯೆ ಮನಗಂಡು ಅವುಗಳ ಸ್ಥಾಪನೆಗೆ ಯೋಜನೆ ರೂಪಿಸಲು ಮುಂದಾಗಲಾಗಿದೆ ಎಂದರು.

ಮೋದಿ ನಾಯಕತ್ವಕ್ಕಾಗಿ ಬಿಜೆಪಿ ಗೆಲ್ಲಿಸಿ: ಸಚಿವೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ರೈತ ಕೇವಲ ಗ್ರಾಮ, ಊರಿಗೆ ಸೀಮಿತವಾಗಿಲ್ಲ. ನಮ್ಮ ರೈತರನ್ನು ಇವತ್ತು ಜಗತ್ತು ಗಮನಿಸುತ್ತಿದೆ. ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗದಿದ್ದರೂ ಸಾವಯವ ಕೃಷಿಯನ್ನು ಒಂದು ಭಾಗವಾಗಿ ರೈತರು ಅಳವಡಿಸಿಕೊಂಡರೆ ಹೆಚ್ಚು ಪ್ರಯೋಜನವಾಗಲಿದೆ. ಸಣ್ಣ, ಅತಿ ಸಣ್ಣ, ಮಧ್ಯಮ ರೈತರು ಬೆಳೆವ ಆಹಾರ ಉತ್ಪನ್ನಗಳು ಕೂಡ ದೊಡ್ಡ ಮಟ್ಟದ ಮಾರುಕಟ್ಟೆಯಲ್ಲಿ ವ್ಯಾಪಾರವಾಗಲು ಕೃಷಿ ಉತ್ಪಾದಕರ ಸಂಘಗಳು ರಚನೆ ಆಗಬೇಕು. ಈ ಮೂಲಕ ಒಟ್ಟಾಗಿ ಮಾರುಕಟ್ಟೆಗೆ ತಲುಪಿಸುವ ಕಾರ್ಯವಾಗಬೇಕಿದೆ. ಯುವ ರೈತರು ಸ್ಟಾರ್ಚ್‌ಅಪ್‌ಗಳು, ಕಿರು ಉದ್ಯಮ ಸ್ಥಾಪನೆಯತ್ತ ಮನಸ್ಸು ಮಾಡಬೇಕು. ಈ ಮೂಲಕ ಕೃಷಿಗೆ ಒತ್ತು ನೀಡಬೇಕಿದೆ ಎಂದರು.

ಈವರೆಗೆ ಯಾರಿಗೆ ಪ್ರಶಸ್ತಿ ಸಿಕ್ಕಿಲ್ಲವೋ ಅಂತಹ ಸಾಧಕರನ್ನು ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಗುರುತಿಸಿ ರೈತರತ್ನ ಪ್ರಶಸ್ತಿ ನೀಡುತ್ತಿವೆ. ಯಾವುದನ್ನು ಸಮಾಜದ ಮುನ್ನೆಲೆಗೆ ತರಬೇಕಾಗಿದೆಯೋ ಆ ಕಾರ್ಯವನ್ನು ಸುದ್ದಿಸಂಸ್ಥೆಯಾಗಿ ಮಾಡುತ್ತಿರುವುದು ಮೆಚ್ಚುವಂತದ್ದು ಎಂದು ಶ್ಲಾಘಿಸಿದರು.

Follow Us:
Download App:
  • android
  • ios