ಕೊರೋನಾ ಅಟ್ಟಹಾಸ: ರಾಜ್ಯದಲ್ಲಿ ಮತ್ತೊಂದು ಆತಂಕಕಾರಿ ಬೆಳವಣಿಗೆ!
100 ಪರೀಕ್ಷೆಗಳಲ್ಲಿ 10 ಕೊರೋನಾ ಪಾಸಿಟಿವ್!| 5 ದಿನಗಳಿಂದ ಕೊರೋನಾ ಸೋಂಕಿತರ ಸಂಖ್ಯೆ ತೀವ್ರ ಹೆಚ್ಚಳ| ಜೂನ್ ಮೊದಲ ವಾರ ಶೇ.1ರಷ್ಟಿದ್ದ ಪಾಸಿಟಿವ್ ದರ ಈಗ ಶೇ.10| ಬೆಂಗಳೂರಲ್ಲಿ 100 ಟೆಸ್ಟ್‌ಗಳಲ್ಲಿ ಸರಾಸರಿ 8 ಪಾಸಿಟಿವ್
ಬೆಂಗಳೂರು(ಜು.07): ರಾಜ್ಯದಲ್ಲಿ ಕಳೆದ ಐದು ದಿನದಿಂದ ಸೋಂಕಿನ ಪಾಸಿಟಿವ್ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು ಕಳೆದ ಐದು ದಿನಗಳಿಂದ ಪ್ರತಿ 100 ಪರೀಕ್ಷೆಯಲ್ಲಿ 10 ಮಂದಿಗೆ ಸೋಂಕು ದೃಢಪಟ್ಟಿದೆ.
ಈ ಮೂಲಕ ಜೂನ್ ಮೊದಲ ವಾರದಲ್ಲಿ ಶೇ.1 ರಷ್ಟಿದ್ದ ಪಾಸಿಟಿವ್ ದರ ಕಳೆದ ಜುಲೈ ಮಾಸದ ಆರಂಭದ 5 ದಿನದಲ್ಲಿ ಶೇ.10 ಮುಟ್ಟಿದೆ. ಪರಿಣಾಮ ಜೂನ್ ಮಾಸದಲ್ಲಿ ಶೇ.1.2ರಷ್ಟಿದ್ದ ಒಟ್ಟು ಸೋಂಕು ಪ್ರಕರಣಗಳ ಪಾಸಿಟಿವ್ ದರವು ಪ್ರಸ್ತುತ ಶೇ.1.61ಕ್ಕೆ ಏರಿಕೆಯಾಗಿದೆ.
ಮನೆ ಬಾಡಿಗೆ ಕಟ್ಟಲೂ ಹಣವಿಲ್ಲ: ಬೆಂಗಳೂರಿಂದ ತವರಿಗೆ ಮತ್ತಷ್ಜು ಜನರ ಗುಳೆ!
ಜುಲೈ 1ರಿಂದ ಕಳೆದ ಐದು ದಿನದಲ್ಲಿ ಬರೋಬ್ಬರಿ 8232 ಮಂದಿಗೆ ಸೋಂಕು ದೃಢಪಟ್ಟಿದ್ದು 85,678 ಪರೀಕ್ಷೆಯಲ್ಲಿ ಸುಮಾರು ಶೇ.10 (ನಿಖರವಾಗಿ ಶೇ.9.60) ಮಂದಿಗೆ ಸೋಂಕು ದೃಢಪಟ್ಟಂತಾಗಿದೆ.
ಜು.1ರಂದು 16,670 ಮಂದಿಗೆ ಪರೀಕ್ಷೆ ನಡೆಸಿದ 1,272 ಮಂದಿಗೆ, ಜು.2 ರಂದು 16,210 ಪರೀಕ್ಷೆಗಳಲ್ಲಿ 1502 ಮಂದಿಗೆ, ಜು.3 ರಂದು 18307 ಪರೀಕ್ಷೆಯಲ್ಲಿ 1694 ಮಂದಿಗೆ ಸೋಂಕು ದೃಢಪಟ್ಟಿತ್ತು. ಜು.4 ರಂದು 17592 ಮಂದಿಯಲ್ಲಿ 1839 (ಶೇ.10.45) ರಷ್ಟುಮಂದಿಗೆ ಸೋಂಕು ದೃಢಪಟ್ಟಿದೆ. ಇದು ಜು.5 ರಂದು ಮತ್ತಷ್ಟುಹೆಚ್ಚಾಗಿ 16,899 ಪರೀಕ್ಷೆಗಳಲ್ಲಿ ಬರೋಬ್ಬರಿ ಶೇ.11.39 ರಷ್ಟು(1925) ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಮಾ.9 ರಿಂದ ಜೂನ್‌ವರೆಗೆ ಕೇವಲ ಶೇ.1ರಷ್ಟಿದ್ದ ಪಾಸಿಟಿವ್ ದರ ಏಕಾಏಕಿ ಶೇ.1.61 ಕ್ಕೆ ಏರಿಕೆಯಾಗಿದೆ.
ಕಣ್ಮುಂದೆ ಪತ್ನಿ ಜೀವ ಬಿಟ್ಟರೂ ಅಸಹಾಯನಾಗಿ ನಿಂತಿದ್ದೆ!
ಬೆಂಗಳೂರಿನಲ್ಲಿ ಶೇ.8ಕ್ಕೆ ಏರಿಕೆ:
ಬೆಂಗಳೂರಿನಲ್ಲಿ ಕೊರೋನಾ ಸೋಂಕು ಪರೀಕ್ಷೆಗೆ ಒಳಗಾಗುತ್ತಿರುವವರ ಪೈಕಿ 100 ಮಂದಿಯಲ್ಲಿ 7 ರಿಂದ 8 ಮಂದಿಗೆ ಸೋಂಕು ದೃಢಪಡುತ್ತಿದೆ. ಕಳೆದ ಮೇ 31ರ ವೇಳೆಗೆ ಬೆಂಗಳೂರು ನಗರದಲ್ಲಿ ಒಟ್ಟು 33,070 ಮಂದಿಯನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 386 ಮಂದಿಗೆ ಸೋಂಕು ದೃಢಪಟ್ಟಿತ್ತು. ಪರೀಕ್ಷೆಗೆ ಒಳಪಟ್ಟಶೇ.1.17 ರಷ್ಟುಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಜೂನ್ ಅಂತ್ಯದ ವೇಳೆಗೆ ಶೇ.6.25 ರಷ್ಟಕ್ಕೆ ಏರಿಕೆಯಾಗಿದೆ. ಜೂನ್ ಅಂತ್ಯಕ್ಕೆ 78,440 ಮಂದಿಗೆ ಸೋಂಕು ಪರೀಕ್ಷೆ ಮಾಡಿಸಲಾಗಿದ್ದು, ಅದರಲ್ಲಿ 4,904 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಇನ್ನು ಜುಲೈ 5ರ ವೇಳೆ 1,24,431 ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 9,580 ಮಂದಿಗೆ ಅಂದರೆ, ಶೇ.7.70 ರಷ್ಟುಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಕಳೆದ ಮೇ ಅಂತ್ಯದಿಂದ ಜುಲೈ 5ರ ವೇಳೆಗೆ ಸೋಂಕು ದೃಢಪಡುತ್ತಿರುವ ಪ್ರಮಾಣ ಶೇ.6.53 ರಷ್ಟುಏರಿಕೆಯಾಗಿದೆ.
ಈವರೆಗೆ 146 ಮಂದಿ ಸೋಂಕಿಗೆ ಬಲಿಯಾಗಿದ್ದು. ಸೋಂಕು ದೃಢಪಟ್ಟವರ ಪೈಕಿ ಶೇ 1.52 ರಷ್ಟುಮಂದಿ ಮರಣ ಹೊಂದಿದ್ದಾರೆ. ಈವರೆಗೆ ಸೋಂಕು ದೃಢಪಟ್ಟ9,580 ಮಂದಿಯಲ್ಲಿ 227 ಮಂದಿ (ಶೇ.5.24 ರಷ್ಟು) ಹೊರ ದೇಶ ಹಾಗೂ ಹೊರ ರಾಜ್ಯದಿಂದ ಬೆಂಗಳೂರಿಗೆ ಆಗಮಿಸದ ಪ್ರಯಾಣಿಕರಾಗಿದ್ದಾರೆ. 544 ಮಂದಿ (ಶೇ.10.28 ರಷ್ಟು) ಕೊರೋನಾ ಸೋಂಕಿತರ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. 762 ಮಂದಿ (ಶೇ.14.40 ರಷ್ಟು) ಉಸಿರಾಟದ ಸಮಸ್ಯೆ ಹಾಗೂ ಜ್ವರ, ಕೆಮ್ಮು ಹಾಗೂ ಶೀತದಿಂದ ಬಳಲುತ್ತಿರುವವರಾಗಿದ್ದಾರೆ. ಉಳಿದವರ ವಿವರ ಸಂಗ್ರಹಿಸಲಾಗುತ್ತಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಕೊರೋನಾ ತಾಂಡವ: ದೇಶದಲ್ಲಿ 20 ಸಾವಿರ ಗಡಿ ದಾಟಿದ ಸಾವು!
ಶೇ.9ರಷ್ಟುಪ್ರಾಥಮಿಕ ಸಂಪರ್ಕಿತರಿಗೆ ಸೋಂಕು
ಸೋಂಕಿತರ ಪಾಸಿಟಿವ್ ಪ್ರಮಾಣದಲ್ಲಿ ಪ್ರಾಥಮಿಕ ಸಂಪರ್ಕಿತರಲ್ಲೇ ಹೆಚ್ಚು ಸೋಂಕು ವರದಿಯಾಗಿದೆ. ಸೋಂಕಿತರ ಸಂಪರ್ಕದಲ್ಲಿದ್ದ 54 ಸಾವಿರ ಮಂದಿ ಪ್ರಾಥಮಿಕ ಸಂಪರ್ಕಿತರ ಪರೀಕ್ಷೆಯಲ್ಲಿ ಶೇ.9.24 ರಷ್ಟುಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಅಂತರ್ ರಾಷ್ಟ್ರೀಯ ಟ್ರಾವೆಲ್ ಹಿಸ್ಟರಿ ಹೊಂದಿದ್ದ 17 ಸಾವಿರ ಮಂದಿಯ ಪರೀಕ್ಷೆಯಲ್ಲಿ ಶೇ. 3.19 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಅಂತರ್‌ರಾಜ್ಯ ಪ್ರಯಾಣ ಹಿನ್ನೆಲೆಯ 2.27 ಲಕ್ಷ ಮಂದಿಗೆ ಪರೀಕ್ಷೆ ನಡೆಸಿದ್ದು ಶೇ.2.98 ಮಂದಿಗೆ ಸೋಂಕು ದೃಢಪಟ್ಟಿದೆ.
"