ಕೊರೋನಾ ತಾಂಡವ: ದೇಶದಲ್ಲಿ 20 ಸಾವಿರ ಗಡಿ ದಾಟಿದ ಸಾವು!

ದೇಶದಲ್ಲಿ ನಿನ್ನೆ 21529 ಮಂದಿಗೆ ಕೊರೋನಾ ಸೋಂಕು, 456 ಸಾವು| 20000 ಗಡಿ ದಾಟಿದ ಸಾವು| ಸತತ 4ನೇ ದಿನವೂ 20 ಸಾವಿರಕ್ಕೂ ಹೆಚ್ಚು ಕೇಸ್‌| ನಾಲ್ಕೇ ದಿನದಲ್ಲಿ 6ರಿಂದ 7 ಲಕ್ಷಕ್ಕೇರಿತು ಸೋಂಕಿತರ ಸಂಖ್ಯೆ

21529 New Coronavirus Cases Reported In India

ನವದೆಹಲಿ(ಜು.07): ದೇಶದಲ್ಲಿ ಸತತ ನಾಲ್ಕನೇ ದಿನವೂ 20 ಸಾವಿರಕ್ಕೂ ಅಧಿಕ ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 7 ಲಕ್ಷದ ಗಡಿ ದಾಟಿದೆ. ಇನ್ನೊಂದೆಡೆ ಸಾವಿನ ಸಂಖ್ಯೆ 20 ಸಾವಿರದ ಎಲ್ಲೆಯನ್ನು ಮೀರಿದ್ದು, ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ 8ನೇ ಸ್ಥಾನ ಪಡೆದುಕೊಂಡಿದೆ.

ಸೋಮವಾರ ಹೊಸದಾಗಿ 21529 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 711878ಕ್ಕೆ ಏರಿಕೆ ಕಂಡಿದೆ. ಇನ್ನು ಒಂದೇ ದಿನ 456 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 20139ಕ್ಕೆ ಏರಿಕೆಯಾಗಿದೆ.

ಆತಂಕಕಾರಿ ಸಂಗತಿಯೆಂದರೆ, ಸೋಂಕಿನ ಪ್ರಮಾಣ ಕೇವಲ 4 ದಿನದಲ್ಲೇ 6 ಲಕ್ಷದಿಂದ 7 ಲಕ್ಷಕ್ಕೆ ಏರಿಕೆ ಆಗಿದೆ. ಕೊರೋನಾದಿಂದ ಅತಿ ಹೆಚ್ಚು ಬಾಧಿತವಾದ ದೇಶಗಳ ಪೈಕಿ ಅಮೆರಿಕ ಮತ್ತು ಬ್ರೆಜಿಲ್‌ ಬಳಿಕ ಭಾರತ ಮೂರನೇ ಸ್ಥಾನದಲ್ಲಿದೆ. ಆರಂಭಿಕ ಹಂತದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಹೇರಿಕೆ ಮಾಡಿದ್ದರಿಂದ ಕೊರೋನಾ ಪ್ರಕರಣಗಳು 1 ಲಕ್ಷದ ಗಡಿಗೆ ತಲುಪಲು 110 ದಿನಗಳು ಬೇಕಾಗಿದ್ದವು. ಬಳಿಕ 48 ದಿನಗಳ ಅಂತರದಲ್ಲಿ ಸೋಂಕಿತ ಸಂಖ್ಯೆ 7 ಲಕ್ಷ ಗಡಿ ದಾಟಿದೆ.

ಇದೇ ವೇಳೆ ಭಾರತದಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯಲ್ಲೂ ಏರಿಕೆ ಕಂಡುಬರುತ್ತಿದೆ. ಸೋಮವಾರ 13787 ಮಂದಿ ಚೇತರಿಸಿಕೊಂಡಿದ್ದು, ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 436373ಕ್ಕೆ ಏರಿಕೆಯಾಗಿದೆ. ಗುಣಮುಖರಾಗುತ್ತಿರುವವರ ಪ್ರಮಾಣ ಶೇ.60.86ರಷ್ಟಿದೆ.

ದೆಹಲಿಯಲ್ಲಿ 1 ಲಕ್ಷ ಗಡಿ ದಾಟಿದ ಸೋಂಕು:

ಕೊರೋನಾಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಅಕ್ಷರಶಃ ನಲುಗಿ ಹೋಗಿದ್ದು, ಸೋಂಕಿತರ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ದೆಹಲಿಯಲ್ಲಿ ಹೊಸದಾಗಿ 1,379 ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿದ್ದು, ಸೊಂಕಿತರ ಸಂಖ್ಯೆ 100823ಕ್ಕೆ ಏರಿಕೆಯಾಗಿದೆ. ಇನ್ನು ಮಹಾರಾಷ್ಟ್ರದಲ್ಲಿ ಸೋಂಕಿತರು 211987ಕ್ಕೆ ಏರಿಕೆಯಾಗಿದ್ದರೆ, ತಮಿಳುನಾಡಿನಲ್ಲಿ 114978ಕ್ಕೆ ತಲುಪಿದೆ.

ಸಾವಿನಲ್ಲಿ ಭಾರತ ನಂ.8

ಭಾರತದಲ್ಲಿ ಕೊರೋನಾ ಸಾವಿನ ಪ್ರಮಾಣ 20 ಸಾವಿರ ಗಡಿ ದಾಟುವುದರೊಂದಿಗೆ ಭಾರತ ಸಾವಿನ ಸಂಖ್ಯೆಯಲ್ಲಿ 8ನೇ ಸ್ಥಾನಕ್ಕೆ ಏರಿಕೆಯಾಗಿದೆ. 1.32 ಲಕ್ಷ ಸಾವಿನೊಂದಿಗೆ ಅಮೆರಿಕ ಮೊದಲ ಸ್ಥಾನದಲ್ಲಿದೆ.

Latest Videos
Follow Us:
Download App:
  • android
  • ios