ಆಂಧ್ರ ಸಿಎಂ ಒತ್ತಾಯದ ಮೇರೆಗೆ ಮತ್ಸ್ಯ ಊಟ ಮತ್ತು ಎಣ್ಣೆ ರಫ್ತು ನಿರ್ಬಂಧಿಸುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ಮೀನುಗಾರರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ನಿರ್ಬಂಧದಿಂದ ಮೀನುಗಾರರು ಹಾಗೂ ಅವಲಂಬಿತ ಉದ್ಯಮಗಳಿಗೆ ಭಾರಿ ಹೊಡೆತ ಬೀಳಲಿದೆ ಎಂದು ಉದ್ಯಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಮತ್ಸ್ಯ ಊಟ (ಮೀನು ಪುಡಿ) ಮತ್ತು ಮತ್ಸ್ಯ ಎಣ್ಣೆ ರಫ್ತಿಗೆ ನಿರ್ಬಂಧ ವಿಧಿಸುವ ಸಂಬಂಧ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ಭಾರತೀಯ ಮತ್ಸ್ಯ ಊಟ ಮತ್ತು ಮತ್ಸ್ಯ ಎಣ್ಣೆ ಉತ್ಪಾದಕರು ಮತ್ತು ರಫ್ತುದಾರರ ಸಂಘ ಹಾಗೂ ಭಾರತೀಯ ರಾಷ್ಟ್ರೀಯ ಮೀನುಗಾರರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

ಬೆಂಗಳೂರಿನಲ್ಲಿ ಸಂಘದ ಪದಾಧಿಕಾರಿಗಳು ಮಂಗಳವಾರ ನಡೆಸಿದ ಸಭೆಯಲ್ಲಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಅವರು ರಫ್ತು ಪ್ರಕ್ರಿಯೆಗೆ ನಿರ್ಬಂಧ ವಿಧಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಅದರಂತೆ ಕೇಂದ್ರ ಸರ್ಕಾರ ಕೂಡ ನಿರ್ಬಂಧ ವಿಧಿಸಲು ಪ್ರಸ್ತಾಪಿಸುತ್ತಿದೆ. ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲಾಗಿದೆ.

ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮೀನುಗಾರರ ಸಂಘ

ಈ ವೇಳೆ ಮಾತನಾಡಿದ ಮತ್ಸ್ಯೋದ್ಯಮಿ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಜಗತ್ತಿನಲ್ಲಿ ಪೆರು ದೇಶವು ಅತಿಹೆಚ್ಚಿನ ಮತ್ಸ್ಯ ಊಟ, ಮತ್ಸ್ಯ ಎಣ್ಣೆ ಉತ್ಪಾದಿಸುವ ದೇಶವಾಗಿದೆ. ಎಲ್‌ನಿನೋ ಪರಿಣಾಮದಿಂದ ಅಲ್ಲಿ ಉತ್ಪಾದನೆ ಕಡಿಮೆಯಾಗಿದ್ದು, ಅನೇಕ ರಾಷ್ಟ್ರಗಳು ಇದೀಗ ಭಾರತದತ್ತ ಮುಖ ಮಾಡಿವೆ. ಇದರಿಂದಾಗಿ ರಫ್ತು ಪ್ರಮಾಣವೂ ಹೆಚ್ಚಾಗಿದೆ.

ದೇಶದ ಶೇ.80ರಷ್ಟು ಮತ್ಸ್ಯ ಊಟ ಮತ್ತು ಮತ್ಸ್ಯಎಣ್ಣೆಗೆ ಕರಾವಳಿಯ ಮೀನು ಬೇಕೇ ಬೇಕು. ಆದರೆ, ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ದು ಅವರು ರಫ್ತಿನ ಮೇಲೆ ನಿರ್ಬಂಧ ವಿಧಿಸುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ರಫ್ತು ಹೆಚ್ಚಾದರೆ ಭಾರತೀಯರಿಗೆ ಮತ್ಸ್ಯ ಊಟ, ಮತ್ಸ್ಯ ಎಣ್ಣೆ ಸಿಗದಂತಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ನಿರ್ಬಂಧದಿಂದ ಮೀನುಗಾರರು ಹಾಗೂ ಅವಲಂಬಿತ ಉದ್ಯಮಗಳಿಗೆ ಹೊಡೆತ ಬೀಳಲಿದೆ. ಉದ್ಯಮದ ಪರಿಸ್ಥಿತಿ ಕುರಿತು ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ಸೇರಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಏನೇ ನೀತಿ, ನಿಯಮ ಮಾಡುವುದಿದ್ದರೂ ನಮ್ಮೆಲ್ಲರ ವಿಶ್ವಾಸ ಪಡೆಯಬೇಕು ಎಂದು ಹೇಳಿದರು.

ಸಂಘದ ಅಧ್ಯಕ್ಷ ಮೊಹಮ್ಮದ್‌ ಶೌಕತ್‌, ಕಾರ್ಯದರ್ಶಿ ಮೊಹಮ್ಮದ್ ಹ್ಯಾರಿಸ್‌ ಇತರರಿದ್ದರು.