ಬೈಕ್‌ ಟ್ಯಾಕ್ಸಿ ಸೇವೆಗೆ ಸುಪ್ರೀಂಕೋರ್ಟ್‌ ತಡೆ ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮ ರೂಪಿಸಲು ಮುಂದಾಗಿದೆ. ಆಟೋ ರಿಕ್ಷಾಗೆ ಅನುಮತಿಸುವ ಮಾದರಿಯಲ್ಲೇ ಬೈಕ್‌ ಟ್ಯಾಕ್ಸಿಗೆ ಅನುಮತಿಸುವ ನಿಯಮ ರೂಪಿಸಲು ಇಲಾಖೆ ನಿರ್ಧರಿಸಿದೆ.

ಬೆಂಗಳೂರು: ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗೆ ಸುಪ್ರೀಂಕೋರ್ಟ್‌ ತಡೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿ ನೀಡುವ ಸಂಬಂಧ ಕಠಿಣ ನಿಯಮಗಳನ್ನು ರೂಪಿಸಲು ಸಾರಿಗೆ ಇಲಾಖೆ ಮುಂದಾಗಿದೆ.

ಕರ್ನಾಟಕ ನಿವಾಸಿಗಳಿಗಷ್ಟೇ ಬೈಕ್‌ ಟ್ಯಾಕ್ಸಿ ಲೈಸೆನ್ಸ್‌ ಸಾಧ್ಯತೆ

ಬೈಕ್‌ ಟ್ಯಾಕ್ಸಿ ಸೇವೆ ನೀಡುವ ಬೈಕ್‌ಗಳಿಗೆ ಹಳದಿ ಫಲಕ (ಯೆಲ್ಲೋ ಬೋರ್ಡ್‌) ಕಡ್ಡಾಯಗೊಳಿಸುವುದು, ಹಳದಿ ಫಲಕದ ಬೈಕ್‌ ಟ್ಯಾಕ್ಸಿಗಳಿಗೆ ತೆರಿಗೆ ವಿಧಿಸುವುದು, ಚಾಲಕರಿಗೆ ಬೈಕ್‌ ಟ್ಯಾಕ್ಸಿ ಪರವಾನಗಿ ಕಡ್ಡಾಯಗೊಳಿಸುವುದು, ಪರವಾನಗಿ ಪಡೆದವರಿಗೆ ಮತ್ತು ಕರ್ನಾಟಕದ ನಿವಾಸಿಗಳಿಗಷ್ಟೇ ಬೈಕ್‌ ಟ್ಯಾಕ್ಸಿ ಸೇವೆ ನೀಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ.

ರಾಜ್ಯದಲ್ಲಿ ತ್ರಿಚಕ್ರ ಮೇಲ್ಪಟ್ಟ ವಾಹನಗಳಿಗೆ ಹಳದಿ ಫಲಕವಿದೆ. ಆದರೆ ಬೈಕ್‌ಗಳಿಗೆ ಹಳದಿ ಫಲಕ ನೀಡಲಾಗುತ್ತಿಲ್ಲ. ಒಂದು ವೇಳೆ, ಬೈಕ್ ಟ್ಯಾಕ್ಸಿಗೆ ಹಳದಿ ಫಲಕ ಕಡ್ಡಾಯಗೊಳಿಸಿದರೆ, ದ್ವಿಚಕ್ರ ವಾಹನಗಳಿಗೂ ಹಳದಿ ಫಲಕ ವಿತರಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗುತ್ತದೆ.

ಪರವಾನಗಿ ಕಡ್ಡಾಯಗೊಳಿಸಿ ತೆರಿಗೆ ವಿಧಿಸುವ ಬಗ್ಗೆ ಪರಿಶೀಲನೆ

ಪ್ರಯಾಣಿಕರ ಸುರಕ್ಷತೆ ಸೇರಿ ಮತ್ತಿತರ ಕಾರಣವನ್ನಿಟ್ಟುಕೊಂಡು ರಾಜ್ಯ ಸರ್ಕಾರ ಬೈಕ್‌ ಟ್ಯಾಕ್ಸಿಗೆ ಅನುಮತಿ ನಿರಾಕರಿಸಿತ್ತು. ಆದರೆ, ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ಗಳು ರಾಜ್ಯ ಸರ್ಕಾರದ ನಿರ್ಧಾರಕ್ಕೆ ವ್ಯತಿರಿಕ್ತವಾಗಿ ಆದೇಶಿಸಿವೆ. ಅದರಿಂದ ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿಗೆ ಅನುಮತಿ ನೀಡುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯ. ಹೀಗಾಗಿಯೇ ಬೈಕ್‌ ಟ್ಯಾಕ್ಸಿಗೆ ಅನುಮತಿಸುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ರೂಪಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಆಟೋ ರಿಕ್ಷಾಗೆ ಅನುಮತಿಸುವ ಮಾದರಿಯಲ್ಲೇ ಬೈಕ್‌ ಟ್ಯಾಕ್ಸಿಗೆ ಅನುಮತಿಸುವ ನಿಯಮ ರೂಪಿಸಲು ಇಲಾಖೆ ನಿರ್ಧರಿಸಿದೆ.