ಸೋಮವಾರದಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದ್ದು, ರಾಜ್ಯ ಸರ್ಕಾರದ ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರತಿಪಕ್ಷ ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್‌ ನಡುವೆ ‘ಜಂಗೀ ಕುಸ್ತಿ’ ನಡೆಯುವ ಸಾಧ್ಯತೆಯಿದೆ.

ಬೆಂಗಳೂರು (ಜು.3)  ಸೋಮವಾರದಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದ್ದು, ರಾಜ್ಯ ಸರ್ಕಾರದ ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರತಿಪಕ್ಷ ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್‌ ನಡುವೆ ‘ಜಂಗೀ ಕುಸ್ತಿ’ ನಡೆಯುವ ಸಾಧ್ಯತೆಯಿದೆ.

ಮತಾಂತರ ನಿಷೇಧ ಹಾಗೂ ಗೋಹತ್ಯೆ ನಿಷೇಧ, ಎಪಿಎಂಸಿ ಕಾಯ್ದೆಯಂತಹ ವಿವಾದಿತ ಕಾಯಿದೆ ರದ್ದುಗೊಳಿಸಲು ತಿದ್ದುಪಡಿ ವಿಧೇಯಕಗಳ ಮಂಡನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಅದಕ್ಕೆ ಪ್ರತಿಯಾಗಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಲೋಪ ಸೇರಿದಂತೆ ವಿವಿಧ ವಿಚಾರ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ. ಅದಕ್ಕೆ ಆಡಳಿತ ಪಕ್ಷ ತಿರುಗೇಟು ನೀಡಲು ತಯಾರಾಗಿದೆ. ಹೀಗಾಗಿ ಹತ್ತು ದಿನಗಳ ಸದನದಲ್ಲಿ ‘ಗ್ಯಾರಂಟಿ ಕದನ’ ಖಚಿತ ಎಂಬಂತಾಗಿದೆ.

ನಾಳೆ ಸದನದ ಒಳಗೆ, ಹೊರಗೆ ಬಿಜೆಪಿ ‘ಗ್ಯಾರಂಟಿ ಹೋರಾಟ’: ಅಶ್ವತ್ಥನಾರಾಯಣ

ಗೃಹ ಜ್ಯೋತಿ, ಗೃಹ ಲಕ್ಷ್ಮೇ ಯೋಜನೆಗೆ ನಿಬಂಧನೆ ವಿಧಿಸಿರುವುದು, ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಬದಲು ಹಣ ನೀಡಲು ಮುಂದಾಗಿರುವುದು, ವರ್ಗಾವಣೆಯಲ್ಲಿ ದಂಧೆ ನಡೆಯುತ್ತಿರುವುದು ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಬಿಜೆಪಿ ಮುಗಿಬೀಳಲು ಮುಂದಾಗಿದೆ. ಇದಕ್ಕೆ ಪ್ರತಿಯಾಗಿ ಸರ್ಕಾರದ ಗ್ಯಾರಂಟಿಗಳ ಯಶಸ್ವಿ ಅನುಷ್ಠಾನ, ಪ್ರತಿಪಕ್ಷ ಬಿಜೆಪಿಯಲ್ಲಿ ಉಂಟಾಗುತ್ತಿರುವ ಬಹಿರಂಗ ತಿಕ್ಕಾಟ, ಅಶಿಸ್ತಿನ ಹೇಳಿಕೆಗಳು, ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆಯ ಪ್ರಹಸನ, ಹಿಂದಿನ ಸರ್ಕಾರದ ಹಗರಣ, ಬಡವರ ಪರ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿರುವ ಪರಿ ವಿರುದ್ಧ ಬಲವಾಗಿ ತಿರುಗೇಟು ನೀಡಲು ಕಾಂಗ್ರೆಸ್‌ ಸಜ್ಜಾಗಿದೆ. ಹಣ ನೀಡಲು ಮುಂದಾದರೂ ಅಕ್ಕಿ ನೀಡದ ಕೇಂದ್ರ ಹಾಗೂ ಬಿಜೆಪಿಯವರ ನಿಲುವನ್ನು ಪ್ರಸ್ತಾಪಿಸಿ ಸರ್ಕಾರ ಪ್ರತಿದಾಳಿ ನಡೆಸುವ ಸಾಧ್ಯತೆಯಿದೆ.

ಅಧಿವೇಶನದ ಮೊದಲ ದಿನವಾದ ಸೋಮವಾರ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಭಾಷಣ ಮಾಡಲಿದ್ದಾರೆ. ಜು.3ರಿಂದ 14ರವರೆಗೆ 10 ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಜು.7ರಂದು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24ನೇ ಸಾಲಿನ ಬಜೆಟ್‌ ಮಂಡಿಸಲಿದ್ದಾರೆ.

ಮೊದಲ ದಿನ ರಾಜ್ಯಪಾಲರ ಭಾಷಣ:

10 ದಿನಗಳ ಅಧಿವೇಶನದಲ್ಲಿ ಮೊದಲ ದಿನವಾದ ಸೋಮವಾರ ಮಧ್ಯಾಹ್ನ 12 ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಭಾಷಣ ಮಾಡಲಿದ್ದಾರೆ. ನಂತರ ಕಳೆದ ಅಧಿವೇಶನದಿಂದ ಈಚೆಗೆ ಅಗಲಿದ ಗಣ್ಯರಿಗೆ ಉಭಯ ಸದನಗಳ ಸಂತಾಪ ಸೂಚಿಸಲಿವೆ. ಜು.4ರಿಂದ ಸರ್ಕಾರಿ ಕಾರ್ಯಕಲಾಪಗಳು ಪ್ರಾರಂಭವಾಗಲಿದ್ದು, ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ.

ಸಿಎಂ ಸಿದ್ದು ದಾಖಲೆಯ 14ನೇ ಬಜೆಟ್‌:

ಬಳಿಕ ಜು.7ರಂದು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24ನೇ ಸಾಲಿನ ಬಜೆಟ್‌ ಮಂಡನೆ ಮಾಡಲಿದ್ದಾರೆ. ಈ ಬಾರಿಯ ಬಜೆಟ್‌ ಗಾತ್ರ ದಾಖಲೆಯ 3.35 ಲಕ್ಷ ಕೋಟಿಗೆ ಹೆಚ್ಚಾಗುವ ನಿರೀಕ್ಷೆ ಇದೆ.

ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ 13 ಬಜೆಟ್‌ಗಳ ಮಂಡನೆಯ ಸಾಧನೆಯನ್ನು 2018ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿಗಟ್ಟಿದ್ದರು. ಇದೀಗ ಎರಡನೇ ಅವಧಿ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಬಜೆಟ್‌ ಮಂಡಿಸಿದ್ದು, ತನ್ಮೂಲಕ ರಾಜ್ಯದ ಅತಿ ಹೆಚ್ಚು ಬಜೆಟ್‌ ಮಂಡನೆ ಮಾಡಿದ ಕೀರ್ತಿಗೆ ಭಾಜನರಾಗಲಿದ್ದಾರೆ.

ವಿವಾದಿತ ತಿದ್ದುಪಡಿ ವಿಧೇಯಕಗಳ ಮಂಡನೆ:

ಅಧಿವೇಶನದಲ್ಲಿ ಸರ್ಕಾರದಿಂದ ಸ್ವೀಕರಿಸಲಾದ ವಿಧೇಯಕಗಳ ಪರ್ಯಾಲೋಚನೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ (ಎಪಿಎಂಸಿ) ಕಾಯಿದೆಯ ತಿದ್ದುಪಡಿಯನ್ನು ಹಿಂಪಡೆಯಲು ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯಿದೆ- 2022’ ಅರ್ಥಾತ್‌ ಮತಾಂತರ ನಿಷೇಧ ಕಾಯಿದೆ ತಿದ್ದುಪಡಿಯನ್ನು ರದ್ದುಪಡಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದ್ದು, ತಿದ್ದುಪಡಿ ವಿಧೇಯಕವನ್ನು ಸರ್ಕಾರ ಮಂಡಿಸಲಿದೆ.

ಹತ್ತು ದಿನಗಳ ಕಲಾಪದಲ್ಲಿ ರಾಜ್ಯಪಾಲರ ಭಾಷಣ ಹಾಗೂ ಬಜೆಟ್‌ ಮಂಡನೆ ದಿನ ಹೊರತುಪಡಿಸಿ ಉಳಿದ ಎಂಟು ದಿನಗಳ ಕಾಲ ಪ್ರಶ್ನೋತ್ತರ ಕಲಾಪ ನಡೆಯಲಿದೆ. ಜತೆಗೆ ಗಮನ ಸೆಳೆಯುವ ಸೂಚನೆ, ಶೂನ್ಯ ವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆ ಸೇರಿದಂತೆ ಎಲ್ಲಾ ಕಾರ್ಯಕಲಾಪಗಳು ನಡೆಯಲಿವೆ ಎಂದು ವಿಧಾನಸಭೆ ಸಚಿವಾಲಯದ ಮೂಲಗಳು ತಿಳಿಸಿವೆ.

ಅತಿ ಹೆಚ್ಚು ಅಸೆಂಬ್ಲಿ ಕಲಾಪ: ಕರ್ನಾಟಕ ದೇಶದಲ್ಲೇ ನಂ.1..!

ಏನೇನು ಕಲಾಪ?

- ಇಂದಿನಿಂದ 14ರವರೆಗೆ 10 ದಿನಗಳ ಕಾಲ ನಡೆಯಲಿದೆ ವಿಧಾನಮಂಡಲ ಕಲಾಪ

- ಸೋಮವಾರ ಮಧ್ಯಾಹ್ನ 12ಕ್ಕೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಭಾಷಣ

- ಮಂಗಳವಾರದಿಂದ 3 ದಿನ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಚರ್ಚೆ

- ಜು.7ರಂದು ಬಜೆಟ್‌. ಅತಿ ಹೆಚ್ಚು ಬಜೆಟ್‌ ಮಂಡನೆ ದಾಖಲೆ ಬರೆಯಲಿರುವ ಸಿದ್ದು

- 13 ಬಜೆಟ್‌ ಮಂಡಿಸಿದ ರಾಮಕೃಷ್ಣ ಹೆಗಡೆ ದಾಖಲೆ ಈಗಾಗಲೇ ಸರಿಗಟ್ಟಿರುವ ಸಿದ್ದು

ಕಾಂಗ್ರೆಸ್‌ ಅಸ್ತ್ರಗಳು

- ಬಿಜೆಪಿಯಲ್ಲಿನ ಬಹಿರಂಗ ಕಿತ್ತಾಟ. ವಿಪಕ್ಷ ನಾಯಕರ ಆಯ್ಕೆ ಪ್ರಹಸನ

- ಹಿಂದಿನ ಸರ್ಕಾರದ ಹಗರಣ, ಗ್ಯಾರಂಟಿ ವಿರುದ್ಧ ಮಾಡುತ್ತಿರುವ ಟೀಕೆ

- ಹಣ ಕೊಟ್ಟರೂ ಅಕ್ಕಿ ನೀಡಲು ಒಪ್ಪದ ಕೇಂದ್ರ ಸರ್ಕಾರ ಧೋರಣೆ

ಬಿಜೆಪಿ ಅಸ್ತ್ರಗಳು

- ಗೃಹಜ್ಯೋತಿ, ಗೃಹ ಲಕ್ಷ್ಮಿ ಯೋಜನೆಗೆ ಷರತ್ತುಗಳನ್ನು ವಿಧಿಸಿರುವುದು

- ಅನ್ನಭಾಗ್ಯ ಯೋಜನೆಗೆ ಅಕ್ಕಿ ಬದಲು ಹಣ ನೀಡಲು ಮುಂದಾಗಿರುವುದು

- ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂಬ ಆರೋಪ ಇಟ್ಟು ದಾಳಿ