ಮತದಾನ ಮಾಡುವಾಗ ನಮ್ಮ ಹಿರಿಯರು ಬೆಂಬಲಿಸುತ್ತಿದ್ದ ಕಾರಣಕ್ಕೆ ಒಂದು ಪಕ್ಷ ಅಥವಾ ವ್ಯಕ್ತಿಗೆ ಮತದಾನ ಮಾಡುವ ಬದಲು ಪ್ರಸ್ತುತ ಸಮಾಜವನ್ನು ನಿಭಾಯಿಸಲು ಯಾವ ಅಭ್ಯರ್ಥಿ ಬಲಿಷ್ಠನೋ, ಯಾರಿಂದ ಜನರಿಗೆ ನೆರವು ಸಿಗುತ್ತದೆ ಎಂಬ ನಂಬಿಕೆ ಬರುತ್ತದೆಯೋ ಅವರನ್ನು ಆಯ್ಕೆ ಮಾಡುವುದು ಉತ್ತಮ: ಬೆಂಗಳೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಪ್ರಭುದೇವ್
ಬೆಂಗಳೂರು(ಮೇ.10): ಅಬ್ರಹಾಂ ಲಿಂಕನ್ ಅವರ ಪ್ರಜಾಪ್ರಭುತ್ವದ ಕಲ್ಪನೆ ಮತ್ತು ತತ್ವಶಾಸ್ತ್ರ ಪ್ರಕಾರ ಪ್ರಜಾಪ್ರಭುತ್ವ ಎಂದರೆ ಜನರ ಸರ್ಕಾರ, ಜನರಿಂದ ಮತ್ತು ಜನರಿಗಾಗಿ. ಮತದಾನದ ಮೂಲಕ ಮಾತ್ರ ಜನರಲ್ಲಿ ಸರ್ಕಾರದ ಮಾಲೀಕತ್ವ’ ಎಂಬ ಭಾವನೆ ಮೂಡುತ್ತದೆ. ಮತದಾನದ ಮೂಲಕ ಜನರು ಬದಲಾವಣೆ ಮತ್ತು ಅಭಿವೃದ್ಧಿಯ ದಿಕ್ಕನ್ನು ನಿರ್ಧರಿಸಬಹುದು. ಮತದಾನ ಜನರು ತಮ್ಮ ಆಲೋಚನೆಗಳನ್ನು ದೇಶ ಅಥವಾ ಅಭ್ಯರ್ಥಿಯ ಬಗ್ಗೆ ಮತಪೆಟ್ಟಿಗೆಯ ಮೂಲಕ ವ್ಯಕ್ತಪಡಿಸಲು ಸಹಾಯ ಮಾಡುತ್ತದೆ.
ಭಾರತದಲ್ಲಿ ಮತದಾನವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದೆ, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯನಿಗೂ ಮತದಾನ ಮಾಡುವ ಹಕ್ಕಿದೆ. ಮತದಾನವೆಂಬುದು ಪವಿತ್ರವಾದ ಕಾರ್ಯ. ದೇಶಕ್ಕೆ ಉತ್ತಮ ನಾಯಕನನ್ನು ಆಯ್ಕೆ ಮಾಡುವ ಅವಕಾಶ. ಒಂದು ದೇಶದ ಅಭಿವೃದ್ಧಿ ಆ ದೇಶದ ನಾಗರಿಕನ ಕೈಯಲ್ಲಿ ಇರುತ್ತದೆ. ಅವನ ಒಂದು ಮತಕ್ಕೆ ದೇಶವನ್ನೇ ಬದಲಿಸುವ ಶಕ್ತಿ ಇರುತ್ತದೆ. ಮತದಾನ ಮಾಡುವಾಗ ನಮ್ಮ ಹಿರಿಯರು ಬೆಂಬಲಿಸುತ್ತಿದ್ದ ಕಾರಣಕ್ಕೆ ಒಂದು ಪಕ್ಷ ಅಥವಾ ವ್ಯಕ್ತಿಗೆ ಮತದಾನ ಮಾಡುವ ಬದಲು ಪ್ರಸ್ತುತ ಸಮಾಜವನ್ನು ನಿಭಾಯಿಸಲು ಯಾವ ಅಭ್ಯರ್ಥಿ ಬಲಿಷ್ಠನೋ, ಯಾರಿಂದ ಜನರಿಗೆ ನೆರವು ಸಿಗುತ್ತದೆ ಎಂಬ ನಂಬಿಕೆ ಬರುತ್ತದೆಯೋ ಅವರನ್ನು ಆಯ್ಕೆ ಮಾಡುವುದು ಉತ್ತಮ.
ಮನೆ ಮನೆಗೆ ತಿರುಗಿ ಮತದಾನ ಜಾಗೃತಿ ಮೂಡಿಸುತ್ತಿರುವ ಮೂರನೇ ತರಗತಿ ಬಾಲಕಿ!
ನಾವು ಮತದಾನದ ಸಂದರ್ಭದಲ್ಲಿ ಯಾವುದೇ ಆಮಿಷಗಳ ಸ್ವತ್ತಾಗದೆ, ಸ್ವಂತ ನಿರ್ಧಾರ ತೆಗೆದುಕೊಂಡು ಭಾರತದ ಅಭಿವೃದ್ಧಿಯ ಪಾಲುದಾರರಾಗಬೇಕು. ಯಾವುದೇ ಆಸೆ ಆಮಿಷಗಳಿಗೆ ಮತವನ್ನು ಮಾರಾಟ ಮಾಡಿದರೆ, ನಮ್ಮತನವನ್ನು ಮಾರಾಟ ಮಾಡಿದಂತೆ. ಉತ್ತಮ ವ್ಯಕ್ತಿ ಆಯ್ಕೆ ಮಾಡುವ ಮೂಲಕ ನಮ್ಮನ್ನು ಕಾಪಾಡುತ್ತಿರುವ ರಾಜ್ಯಕ್ಕೆ ಕೊಡುಗೆ ಕೊಡಬಹುದು. ಒಂದು ಮತದಿಂದ ಏನೂ ಬದಲಾವಣೆ ಆಗುವುದಿಲ್ಲ ಎಂದು ಮತದಾರರು ಯೋಚಿಸಿದರೆ ಅದು ಅವರ ದಡ್ಡತನ. ಪ್ರಜಾಪ್ರಭುತ್ವದಲ್ಲಿ ಒಂದೊಂದು ಮತವು ಅತೀ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.
ಮುಖ್ಯವಾಗಿ ಯುವಜನರು ಚುನಾವಣೆಯ ಸಂದರ್ಭದಲ್ಲಿ ಎಚ್ಚರದಿಂದ ಮತ ಚಲಾಯಿಸಬೇಕು. ಮತ ಚಲಾಯಿಸುವಾಗ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಪಾತ್ರ ವಹಿಸಬೇಕು. ಹಾಗಾಗಿ ಮತದಾರರು ಎಚ್ಚರದಿಂದ ಮತವನ್ನು ಚಲಾಯಿಸಬೇಕು. ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ರಾಷ್ಟ್ರವನ್ನು ಮುನ್ನಡೆಸಲು, ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸಲು, ಬದಲಾವಣೆಯನ್ನು ತರುತ್ತಾರೆ ಎಂದೆನಿಸುವ ನಾಯಕ, ಪಕ್ಷವನ್ನು ಗೆಲ್ಲಿಸುವ ಮೂಲಕ ದೇಶದ ಬದಲಾವಣೆಗೆ ತಮ್ಮ ಅತ್ಯಮೂಲ್ಯ ಮತವನ್ನು ಬಳಸಬಹುದು. ಒಬ್ಬ ಉತ್ತಮ ನಾಯಕನನ್ನು ಆಯ್ಕೆ ಮಾಡಿದರೆ ದೇಶದ ಪ್ರಗತಿ ಇಡೀ ಪ್ರಪಂಚಕ್ಕೆ ಮಾದರಿಯಾಗುತ್ತದೆ. ಹೀಗಾಗಿ ಮತದಾರರು ದೇಶದ ಪ್ರಗತಿಗೆ ತಮ್ಮ ಮತದಾನದ ಹಕ್ಕನ್ನು ಬಳಸಿಕೊಳ್ಳಬೇಕು. ಹಾಗೂ ಸರಿಯಾದ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾವುದೇ ಮತದಾನದಿಂದ ಹಿಂದೆ ಉಳಿಯಬಾರದು.
