Asianet Suvarna News Asianet Suvarna News

ಮನೆಮನೆ ಪ್ರಚಾರಕ್ಕೆ ಐವರಷ್ಟೇ ಹೋಗಬೇಕು: ಉಪಚುನಾವಣೆಗೆ ಸರ್ಕಾರದಿಂದ ಮಾರ್ಗಸೂಚಿ!

ಮನೆಮನೆ ಪ್ರಚಾರಕ್ಕೆ ಐವರಷ್ಟೇ ಹೋಗಬೇಕು!| ನಾಮಪತ್ರ ಸಲ್ಲಿಕೆ ವೇಳೆ ಮೂವರಿಗಷ್ಟೇ ಅವಕಾಶ| ಚುನಾವಣಾ ಸಮಾವೇಶಗಳಲ್ಲೂ ಸಾಮಾಜಿಕ ಅಂತರ ಪಾಲಿಸಬೇಕು| ಉಪಚುನಾವಣೆಗೆ ಸರ್ಕಾರದಿಂದ ಕೊರೋನಾ ಮಾರ್ಗಸೂಚಿ| ಕೋವಿಡ್‌ಪೀಡಿತರಿಗೆ ಕಡೆಯ 1 ಗಂಟೆ ಅವಕಾಶ

only 5 are allowed to door to door campaign in by eleection campaign karnataka govt pod
Author
Bangalore, First Published Mar 27, 2021, 7:19 AM IST

 ಬೆಂಗಳೂರು(ಮಾ.27): ಮನೆ ಮನೆ ಭೇಟಿಯ ತಂಡದಲ್ಲಿ ಐವರ ಮಿತಿ, ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಸೇರಿದಂತೆ ಮೂವರಿಗೆ ಮಾತ್ರ ಅನುಮತಿ, ಚುನಾವಣಾ ಪ್ರಚಾರ ಸಭೆಗಳಲ್ಲಿ ತೆರೆದ ಪ್ರದೇಶದಲ್ಲಿ 1 ಗುಂಟೆ ಜಾಗದಲ್ಲಿ ಗರಿಷ್ಠ 15 ಜನರಿಗೆ ಹಾಗೂ ಮುಚ್ಚಿದ ಪ್ರದೇಶದಲ್ಲಿ 200 ಜನರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡುವುದು, ಕೊರೋನಾ ಸೋಂಕಿತರಿಗೂ ಮತದಾನದ ಅವಕಾಶ ಸೇರಿದಂತೆ ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆ ವೇಳೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಏಪ್ರಿಲ್‌ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆ ನಿಗದಿಯಾಗಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದೊಂದಿಗೆ ಚರ್ಚಿಸಿ ಆರೋಗ್ಯ ಇಲಾಖೆಯು ಕೋವಿಡ್‌ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಏನೇನು ಮಾರ್ಗಸೂಚಿ?:

ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಪ್ರತಿಯೊಬ್ಬರೂ ಮುಖಗವಸು ಧಾರಣೆ, ಸಾಮಾಜಿಕ ಅಂತರದ ಪಾಲನೆ ಮಾಡಬೇಕು. ಸಿಬ್ಬಂದಿ ಮತ್ತು ಮತದಾರರ ಥರ್ಮಲ್‌ ಸ್ಕಾ್ಯನಿಂಗ್‌ ನಡೆಸಬೇಕು ಎಂದು ಸೂಚಿಸಲಾಗಿದೆ.

ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿ ಸೇರಿದಂತೆ ಮೂವರು ಇರಬೇಕು ಮತ್ತು ಎರಡು ವಾಹನಗಳಿಗೆ ಅನುಮತಿ ನೀಡಲಾಗಿದೆ. ಉಳಿದಂತೆ ನಾಮಪತ್ರದ ಫಾರಂ ಡೌನ್‌ಲೋಡ್‌, ಅಫಿಡವಿಟ್‌, ಭದ್ರತಾ ಠೇವಣಿ ಮುಂತಾದವನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬಹುದಾಗಿದೆ.

ಕೋವಿಡ್‌ಪೀಡಿತರು, ಲಕ್ಷಣ ಇದ್ದವರು, ಕಂಟೈನ್‌ಮೆಂಟ್‌ ವಲಯದವರು, ಹೋಮ್‌ ಐಸೋಲೇಷನ್‌ನಲ್ಲಿದ್ದವರಿಗೆ ಮತದಾನದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಮತದಾನಕ್ಕೆ ಅವಕಾಶ ನೀಡಬೇಕು. ಕೋವಿಡ್‌ ರೋಗಿಗಳು ಪಿಪಿಇ ಕಿಟ್‌ ಧರಿಸಿ ನಿಗದಿತ ಅಂಬ್ಯುಲೆನ್ಸ್‌ ನಲ್ಲಿ ಬಂದು ಮತದಾನ ಮಾಡಬೇಕು. ಈ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿಯೊಬ್ಬರ ಮೇಲುಸ್ತುವಾರಿಯಲ್ಲಿ ಈ ಪ್ರಕ್ರಿಯೆ ನಡೆಯಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಚುನಾವಣೆ ಸಭೆ, ಸಾರ್ವಜನಿಕ ಸಮಾರಂಭಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳು ನಿಗದಿಪಡಿಸಿದ ಜಾಗದಲ್ಲೇ ಮಾಡಬೇಕು. ಅಲ್ಲಿ ಸಾಮಾಜಿಕ ಅಂತರ ಕಾಪಾಡಲು ವ್ಯವಸ್ಥೆ ಮಾಡಿರಬೇಕು. ಈ ಚಟುವಟಿಕೆ ಸಂದರ್ಭದಲ್ಲಿ ಕೋವಿಡ್‌ ಮುಂಜಾಗ್ರತಾ ಕ್ರಮಗಳ ಪಾಲನೆಯನ್ನು ಅಭ್ಯರ್ಥಿ ಮತ್ತು ರಾಜಕೀಯ ಪಕ್ಷಗಳು ಖಾತರಿ ಮಾಡಬೇಕು ಎಂದು ಸೂಚಿಸಲಾಗಿದೆ.

Follow Us:
Download App:
  • android
  • ios