ರಾಜ್ಯದಲ್ಲಿ ಸರಕಾರಿ A ಗ್ರೇಡ್ ಕಾಲೇಜುಗಳು ಕೇವಲ ಹತ್ತು!
ರಾಜ್ಯದಲ್ಲಿವೆ ಕೇವಲ 10 ಎ ಗ್ರೇಡ್ ಸರ್ಕಾರಿ ಕಾಲೇಜು!| ರಾಜ್ಯಪಾಲರ ಮಾತು ಪಾಲಿಸಿದರೆ 220 ಕಾಲೇಜು ಮುಚ್ಚಬೇಕು | ಬಿ, ಸಿ ಶ್ರೇಣಿ ಪಡೆದ ಕಾಲೇಜು ಮುಚ್ಚಿ ಎಂದಿದ್ದ ವಿ.ಆರ್.ವಾಲಾ
ಎಸ್. ಎಲ್. ಶಿವಮಾದು
ಬೆಂಗಳೂರು[ಜ.12]: ಗುಣಾತ್ಮಕ ಶಿಕ್ಷಣ ನೀಡುವುದಕ್ಕಾಗಿ ನ್ಯಾಕ್‌ನಿಂದ ‘ಎ’ ಶ್ರೇಣಿ ಪಡೆಯದ ಸರ್ಕಾರಿ ಕಾಲೇಜುಗಳನ್ನು ಮುಚ್ಚುವುದೇ ಲೇಸು ಎಂದಿದ್ದ ರಾಜ್ಯಪಾಲ ವಿ.ಆರ್. ವಾಲಾ ಹೇಳಿಕೆಯನ್ನು ಅನುಷ್ಠಾನ ಮಾಡುವುದಾದರೆ ರಾಜ್ಯದಲ್ಲಿ ಕೇವಲ ಹತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಾಲೇಜುಗಳನ್ನು ಮುಚ್ಚಬೇಕಾಗುತ್ತದೆ!
ಹೌದು, ಇತ್ತೀಚೆಗೆ ರಾಜಭವನದ ಕಾರ್ಯಕ್ರಮವೊಂದರಲ್ಲಿ ವಿಶ್ವವಿದ್ಯಾಲಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ವಿ.ಆರ್. ವಾಲಾ ಅವರು ಯುವಜನತೆಗೆ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ‘ಎ’ ಶ್ರೇಣಿ ಹೊರತುಪಡಿಸಿ ‘ಬಿ’ ಮತ್ತು ‘ಸಿ’ ಶ್ರೇಣಿ ಪಡೆದಿರುವ ಕಾಲೇಜುಗಳನ್ನು ಮುಚ್ಚುವಂತೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಪಾಲಿಸುವುದಾದರೆ ರಾಜ್ಯದಲ್ಲಿ ಕೇವಲ ಹತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಮಾತ್ರ ನಡೆಸಬೇಕಾಗುತ್ತದೆ.
ರಾಜ್ಯದ ಪ್ರಸ್ತುತ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ನಡೆಯುತ್ತಿದ್ದು, 230 ಕಾಲೇಜುಗಳು ನ್ಯಾಕ್‌ನ ಪರಿಶೀಲನೆಗೆ ಒಳಪಡುತ್ತವೆ. ಈ ಪೈಕಿ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜು ಮಾತ್ರ ನ್ಯಾಕ್ ‘ಎ ಪ್ಲಸ್’ ಹಾಗೂ ಕೇವಲ ಒಂಭತ್ತು ಕಾಲೇಜುಗಳು ‘ಎ’ ಶ್ರೇಣಿಯ ರ‌್ಯಾಂಕ್ ಪಡೆದಿವೆ. 171‘ಬಿ’ ಶ್ರೇಣಿ ಹಾಗೂ ‘ಸಿ’ ಶ್ರೇಣಿಯಲ್ಲಿ 38 ಕಾಲೇಜುಗಳಿವೆ. ಅರ್ಹತೆಗಾಗಿ ಬಿ ಶ್ರೇಣಿ ಎಂಟು ಹಾಗೂ ಸಿ ಶ್ರೇಣಿಗೆ ಮೂರು ಕಾಲೇಜುಗಳು ನೋಂದಣಿ ಮಾಡಿದ್ದು, ಅರ್ಹತೆ ಪಡೆಯುವ ಹಂತದಲ್ಲಿವೆ.
ಬಿ, ಸಿ ದರ್ಜೆಯ ಕಾಲೇಜು, ವಿವಿ ಮುಚ್ಚಿ: ರಾಜ್ಯಪಾಲ ವಿ.ಆರ್. ವಾಲಾ!
ಈ ವರ್ಷ 69 ಕಾಲೇಜು ನೋಂದಣಿ:
412 ಕಾಲೇಜುಗಳಲ್ಲಿ ಸದ್ಯ 122 ಕಾಲೇಜುಗಳು ನ್ಯಾಕ್ ನೋಂದಣಿಗೆ ಸಿದ್ಧವಾಗಿವೆ. ಈ ವರ್ಷ ೬೯ ಕಾಲೇಜುಗಳನ್ನು ನೋಂದಣಿ ಮಾಡಲಾಗುತ್ತಿದ್ದು, ಉಳಿದ ಕಾಲೇಜುಗಳನ್ನು ಮುಂದಿನ ವರ್ಷ ನೋಂದಣಿ ಮಾಡಲು ಇಲಾಖೆ ನಿರ್ಧರಿಸಿದೆ. ನ್ಯಾಕ್ ನೋಂದಣಿಗೆ ಕನಿಷ್ಠ ಆರು ಶೈಕ್ಷಣಿಕ ವರ್ಷಗಳವರೆಗೆ ಕಾಲೇಜು ನಡೆಸಿರಬೇಕು. ಆರು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಆರಂಭವಾಗಿರುವ 60 ಕಾಲೇಜುಗಳಿವೆ ಎಂದು ಮೂಲಗಳು ತಿಳಿಸಿವೆ
ನ್ಯಾಕ್ ಮಾನದಂಡಗಳೇನು:
ಉನ್ನತ ಶಿಕ್ಷಣದಲ್ಲಿ ಗುಣಾತ್ಮಕತೆ ಕಾಯ್ದುಕೊಳ್ಳುವುದಕ್ಕಾಗಿ ರಾಷ್ಟ್ರೀಯ ಮೌಲ್ಯಾಂಕ ಮತ್ತು ಮಾನ್ಯತಾ ಸಂಸ್ಥೆ (ನ್ಯಾಕ್) ರ‌್ಯಾಂಕ್ ನೀಡುತ್ತದೆ. ಉನ್ನತ ಶಿಕ್ಷಣ ನೀಡುವ ಪ್ರತಿಯೊಂದು ಕಾಲೇಜುಗಳು ನೋಂದಣಿ ಮಾಡಿಕೊಳ್ಳು ವಂತೆ 2014ರಲ್ಲಿಯೇ ಆದೇಶ ಹೊರಡಿಸಲಾಗಿದೆ.
ಪಠ್ಯಕ್ರಮ, ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನ, ಸಂಶೋಧನೆ, ಆವಿಷ್ಕಾರ ಮತ್ತು ವಿಸ್ತರಣೆ, ಮೂಲ ಸೌಕರ್ಯ ಮತ್ತು ಕಲಿಕಾ ಸಂಪನ್ಮೂಲಗಳು, ವಿದ್ಯಾರ್ಥಿ ಪ್ರಗತಿ, ಆಡಳಿತ, ನಾಯಕತ್ವ ಮತ್ತು ನಿರ್ವಹಣೆ, ಶಿಕ್ಷಣ ಸಂಸ್ಥೆಗಳ ಮೌಲ್ಯಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಮುಖ ಅಂಶ ಗಳನ್ನು ಮಾನದಂಡಗಳಾಗಿ ಪರಿಗಣಿಸಲಾಗುತ್ತದೆ.
‘ಎ’ ಶ್ರೇಣಿ ಪಡೆದಿರುವ ಕಾಲೇಜು
* ಸರ್ಕಾರಿ ವಿಜ್ಞಾನ ಕಾಲೇಜು ಬೆಂಗಳೂರು
* ಬಾಲಕರ ಕಾಲೇಜು ಮಂಡ್ಯ
* ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಕಾಲೇಜು ಬಳ್ಳಾರಿ
* ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಬೆಂಗಳೂರು
* ಗೃಹ ವಿಜ್ಞಾನ ಕಾಲೇಜು ಬೆಂಗಳೂರು
* ಕಲಾ ಮತ್ತು ವಿಜ್ಞಾನ ಕಾಲೇಜು ಕಾರವಾರ
* ಸರ್ಕಾರಿ ವಿಜ್ಞಾನ ಕಾಲೇಜು ಚಿತ್ರದುರ್ಗ
* ಮಹಾರಾಣಿ ವಿಜ್ಞಾನ ಕಾಲೇಜು ಮೈಸೂರು
* ನೌಬಾದ್ ಕಾಲೇಜು ಬೀದರ್
* ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಲಬುರಗಿ
ಇವು ಮಾತ್ರ ರಾಜ್ಯದಲ್ಲಿ ‘ಎ’ ಶ್ರೇಣಿ ಪಡೆದಿರುವ ಕಾಲೇಜುಗಳಾಗಿವೆ.
ಜನವರಿ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ