Asianet Suvarna News Asianet Suvarna News

ಕ್ವಾರಿಗಳಿಂದ ದಂಡ ವಸೂಲಿಗೆ ಒಂದು ಬಾರಿ ಪರಿಹಾರ ಸ್ಕೀಂ: ಸಚಿವ ಎಚ್‌.ಕೆ.ಪಾಟೀಲ್‌

ಒತ್ತುವರಿ ಮಾಡಿ ಅಕ್ರಮ ಗಣಿಗಾರಿಕೆ ನಡೆಸಿದವರ ದಂಡ ವಸೂಲಿಗೆ ಕಸರತ್ತು, 6105 ಕೋಟಿ ದಂಡ ಸಂಗ್ರಹಕ್ಕೆ ಒನ್‌ ಟೈಂ ಸೆಟಲ್‌ಮೆಂಟ್‌: ಸಚಿವ ಎಚ್‌.ಕೆ.ಪಾಟೀಲ್‌

One Time Compensation Scheme for Recovery of Fine from Quarries Says HK Patil grg
Author
First Published Jul 28, 2023, 8:29 AM IST

ಬೆಂಗಳೂರು(ಜು.28):  ಕಲ್ಲು ಗಣಿ ಗುತ್ತಿಗೆಗೆ ಅನುಮತಿ ಪಡೆದಿದ್ದ ಪ್ರದೇಶಕ್ಕಿಂತ ಹೆಚ್ಚು ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ಮಾಡಿರುವ ಕ್ವಾರಿ ಮಾಲೀಕರಿಗೆ ವಿಧಿಸಿರುವ 6105 ಕೋಟಿ ರು. ದಂಡವನ್ನು ಒಂದು ಬಾರಿ ಪರಿಹಾರದಡಿ (ಒನ್‌ ಟೈಂ ಸೆಟ್ಲ್ಮೆಂಟ್‌) ವಸೂಲಿ ಮಾಡಲು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಸಮ್ಮತಿಸಿದೆ. ಅಲ್ಲದೆ, ಈ ಸಂದರ್ಭದಲ್ಲಿ ಕ್ವಾರಿ ಮಾಲೀಕರಿಗೆ ಏನೇನು ಷರತ್ತು, ನಿಬಂಧನೆಗಳನ್ನು ಹಾಕಬೇಕು ಎಂಬ ಬಗ್ಗೆ ತೀರ್ಮಾನಿಸಲು ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲು ಸಭೆ ತೀರ್ಮಾನಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ಅವರು, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಕ್ವಾರಿಗಳ ಮಾಲೀಕರು ತಾವು ಗುತ್ತಿಗೆ ಪಡೆದಿರುವ ಪ್ರದೇಶಕ್ಕಿಂತ ಹೆಚ್ಚಿನ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಗಣಿಗಾರಿಕೆ ಮಾಡಿ ಸರ್ಕಾರಕ್ಕೆ ರಾಜಧನವನ್ನೂ ಪಾವತಿಸದೆ ಭಾರೀ ಪ್ರಮಾಣದ ಉಪ ಖನಿಜವನ್ನು ಮಾರಾಟ ಮಾಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ರಾಜಧನ ವಂಚನೆಯಾಗಿದೆ. ಹಾಗಾಗಿ ಇಂತಹ ಅಕ್ರಮ ಗಣಿಗಾರಿಕೆ ನಡೆಸಿರುವ ಕ್ವಾರಿ ಮಾಲೀಕರಿಗೆ ಸರ್ಕಾರ ಕಾಲಕಾಲಕ್ಕೆ ದಂಡ ವಿಧಿಸುತ್ತಾ ಬಂದಿದ್ದು, ಇದರ ಒಟ್ಟು ಮೊತ್ತ 6105 ಕೋಟಿ ರು.ಗಳಷ್ಟಾಗಿದೆ. ಈ ಮೊತ್ತ ವಸೂಲಿ ಪ್ರಕ್ರಿಯೆ ಮುಂದೂಡಿಕೆಯಾಗುತ್ತಲೇ ಬಂದಿದೆ. ಇದೀಗ ಆ ಮೊತ್ತವನ್ನು ಒಂದು ಬಾರಿ ಪರಿಹಾರದ ರೂಪದಲ್ಲಿ ವಸೂಲಿ ಮಾಡಲು ಸಚಿವ ಸಂಪುಟ ಸಭೆ ಒಪ್ಪಿದೆ ಎಂದು ತಿಳಿಸಿದರು.

ಕರ್ನಾಟಕವನ್ನು ಪ್ರವಾಸೋದ್ಯಮ ಸ್ನೇಹಿ ರಾಜ್ಯವಾಗಿಸಲು ಬದ್ಧ: ಸಚಿವ ಎಚ್‌.ಕೆ.ಪಾಟೀಲ್‌

ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಬಹಳ ವರ್ಷಗಳಿಂದ ಬಾಕಿ ಇರುವ ಸಾಲ ತೀರುವಳಿಗೆ ಬ್ಯಾಂಕುಗಳಲ್ಲಿ ನೀಡುವ ಒಂದು ಬಾರಿ ಪರಿಹಾರದ ರೂಪದಲ್ಲಿ ಕ್ವಾರಿ ಮಾಲೀಕರಿಗೂ ತಮ್ಮ ದಂಡ ಪಾವತಿಗೆ ಅವಕಾಶ ಸಿಗಲಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಮಧ್ಯಸ್ಥಿತಿಯಲ್ಲಿ ಕ್ವಾರಿ ಮಾಲೀಕರು ತಾವು ಪಾವತಿಸಬೇಕಿರುವ ದಂಡದ ಮೊತ್ತದ ಬಗ್ಗೆ ಮಾತುಕತೆ ಮೂಲಕ ಒಂದಷ್ಟುರಿಯಾಯಿತಿ ಪಡೆಯಬಹುದಾಗಿದೆ.

ಸರ್ಕಾರ ವಿಧಿಸಿರುವ ದಂಡಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದ ಕ್ವಾರಿ ಮಾಲೀಕರು ಪ್ರತಿಭಟನೆ ಕೂಡ ನಡೆಸಿ ಇಷ್ಟುದೊಡ್ಡ ಮೊತ್ತದ ದಂಡ ಪಾವತಿಸಲು ನಮ್ಮಿಂದ ಸಾಧ್ಯವಿಲ್ಲ. ನಾವು ಕ್ವಾರಿಗಳನ್ನು ಬಂದ್‌ ಮಾಡಬೇಕಾಗುತ್ತದೆ. ಹಾಗಾಗಿ ದಂಡ ಮೊತ್ತ ಕೈಬಿಡಬೇಕೆಂದು ಆಗ್ರಹಿಸಿದ್ದನ್ನು ಸ್ಮರಿಸಬಹುದು.

Follow Us:
Download App:
  • android
  • ios