Asianet Suvarna News Asianet Suvarna News

ಏಕ ದೇಶ, ಏಕ ಪಡಿತರ ಚೀಟಿ: ಕರ್ನಾಟಕದಲ್ಲಿ ಚಾಲನೆ

ಏಕರೂಪದ ರೇಷನ್‌ ಕಾರ್ಡ್‌ ಇರುವ ಯೋಜನೆಗೆ ಕೇಂದ್ರ ಸರ್ಕಾರ ಹೊಸ ವರ್ಷದ ದಿನವಾದ ಜನವರಿ 1ರಂದು ಕರ್ನಾಟಕ ಸೇರಿ 12 ರಾಜ್ಯಗಳಲ್ಲಿ ಚಾಲನೆ ನೀಡಿದೆ.
 

One Nation One Ration Card Implemented In Karnataka
Author
Bengaluru, First Published Jan 2, 2020, 9:14 AM IST
  • Facebook
  • Twitter
  • Whatsapp

ನವದೆಹಲಿ [ಜ.02]: ದೇಶಾದ್ಯಂತ ಏಕರೂಪದ ರೇಷನ್‌ ಕಾರ್ಡ್‌ ಇರುವ ಯೋಜನೆಗೆ ಕೇಂದ್ರ ಸರ್ಕಾರ ಹೊಸ ವರ್ಷದ ದಿನವಾದ ಜನವರಿ 1ರಂದು ಕರ್ನಾಟಕ ಸೇರಿ 12 ರಾಜ್ಯಗಳಲ್ಲಿ ಚಾಲನೆ ನೀಡಿದೆ.

ಕರ್ನಾಟಕವಷ್ಟೇ ಅಲ್ಲದೆ, ಕೇರಳ, ಮಧ್ಯಪ್ರದೇಶ, ಗೋವಾ, ಜಾರ್ಖಂಡ್‌, ತ್ರಿಪುರಾ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್‌, ಮಹಾರಾಷ್ಟ್ರ, ಹರ್ಯಾಣ, ಮಧ್ಯಪ್ರದೇಶದಲ್ಲೂ ಯೋಜನೆಗೆ ಚಾಲನೆ ದೊರಕಿದೆ. ಜೂನ್‌ 1ರಿಂದ ದೇಶದ ಎಲ್ಲ ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳಿಗೆ ಇದು ವಿಸ್ತರಣೆಗೊಳ್ಳಲಿದೆ.

ಈ ಉಪಕ್ರಮದ ಪ್ರಕಾರ, ಯಾವುದೇ ರೇಷನ್‌ ಕಾರ್ಡುದಾರನಿರಲಿ, ಆತ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ದೇಶದ ಯಾವುದೇ ಪಡಿತರ ಅಂಗಡಿಯಲ್ಲಿ ತನ್ನ ಬಳಿ ಇರುವ ಪಡಿತರ ಕಾರ್ಡ್‌ ಬಳಸಿಕೊಂಡು ರೇಷನ್‌ ಪಡೆಯಬಹುದಾಗಿದೆ.

ಇನ್ನೊಂದು ವಿಶೇಷವೆಂದರೆ ಈಗಾಗಲೇ ಕರ್ನಾಟಕ ಹಾಗೂ ಕೇರಳದ ಪಡಿತರ ಚೀಟಿಗಳನ್ನು ಒಂದಕ್ಕೊಂದು ಸಂಯೋಜಿಸಲಾಗಿದೆ. ಅಂದರೆ ಕರ್ನಾಟಕದ ಕಾರ್ಡುದಾರ ಕೇರಳದಲ್ಲಿ ಕೂಡ ಪಡಿತರ ಪಡೆಯಬಹುದಾಗಿದೆ.

ವಲಸಿಗರಿಗೆ ಅನುಕೂಲ:

ದೇಶದಲ್ಲಿ ಸುಮಾರು 14 ಕೋಟಿ ವಲಸಿಗರು ಇದ್ದು, ಅವರು ಉಪಜೀವನಕ್ಕಾಗಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಲಸೆ ಹೋಗುತ್ತಾರೆ. ಆಗ ಅವರು ಬೇರೆ ರಾಜ್ಯದಲ್ಲಿ ಹೊಸ ರೇಷನ್‌ ಕಾರ್ಡ್‌ ಪಡೆಯಬೇಕಾಗುತ್ತದೆ. ಆದರೆ ‘ಏಕ ದೇಶ-ಏಕ ಪಡಿತರ ಚೀಟಿ’ ಯೋಜನೆಯಿಂದ ಇನ್ನೊಂದು ರಾಜ್ಯಕ್ಕೆ ಹೋದಾಗ ಹೊಸ ಪಡಿತರ ಚೀಟಿ ಪಡೆಯಬೇಕಿಲ್ಲ. ತಮ್ಮ ಮೂಲ ರಾಜ್ಯದ ಪಡಿತರ ಚೀಟಿಯನ್ನೇ ತಾವು ವಲಸೆ ಹೋಗಿರುವ ಅನ್ಯ ರಾಜ್ಯದಲ್ಲೂ ಬಳಸಿ ಪಡಿತರ ಪಡೆಯಬಹುದಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಹಾರ ಭದ್ರತಾ ಕಾಯ್ದೆಯಡಿ 81.35 ಕೋಟಿ ಜನರಿಗೆ ರೇಷನ್‌ ವಿತರಿಸಬೇಕು ಎಂದು ಸರ್ಕಾರ ಗುರಿ ಹೊಂದಿದ್ದು, 75 ಕೋಟಿ ಫಲಾನುಭವಿಗಳು ಈವರೆಗೆ ಆಯ್ಕೆಯಾಗಿದ್ದಾರೆ.

ಹೊಸ ಕಾರ್ಡ್‌ ಹೀಗಿದೆ:  ಈ ರೇಷನ್‌ ಕಾರ್ಡ್‌ಗಳಲ್ಲಿ ಕಾರ್ಡುದಾರನ ಕನಿಷ್ಠ ವಿವರಗಳು ಇರಬೇಕು. ಅಗತ್ಯಕ್ಕೆ ತಕ್ಕಂತೆ ರಾಜ್ಯ ಸರ್ಕಾರಗಳು ಹೆಚ್ಚಿನ ಮಾಹಿತಿ ಸೇರಿಸಲೂ ಅವಕಾಶವಿದೆ. ಬೇರೆ ರಾಜ್ಯಗಳಲ್ಲೂ ಕಾರ್ಡ್‌ ಬಳಕೆ ಮಾಡುವಂತಾಗಲು ದ್ವಿಭಾಷೆಯಲ್ಲಿ ಅದು ಸಿದ್ಧಗೊಳ್ಳಬೇಕು. ಮಾತೃಭಾಷೆಯ ಜತೆಗೆ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಅದು ವಿವರಗಳನ್ನು ಹೊಂದಿರಬೇಕು.

ಕಾರ್ಡ್‌ ಸಂಖ್ಯೆ ಕಡ್ಡಾಯವಾಗಿ 10 ಅಂಕಿಗಳದ್ದಾಗಿರಬೇಕು. ಮೊದಲ ಎರಡು ಡಿಜಿಟ್‌ಗಳು ರಾಜ್ಯದ ಕೋಡ್‌ (ಸಂಕೇತಾಕ್ಷರ) ಹೊಂದಿರಬೇಕು. ನಂತರ ರೇಷನ್‌ ಕಾರ್ಡುದಾರನ ಸಂಖ್ಯೆ ಇರಬೇಕು.

ಈಗಾಗಲೇ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು ಅದೇ ಚೀಟಿಯ ಅಧಾರದಲ್ಲಿ ‘ಏಕ ದೇಶ-ಏಕ ರೇಷನ್‌ ಕಾರ್ಡ್‌’ ಅಡಿ ಹೊಸ ಪಡಿತರ ಚೀಟಿ ಪಡೆಯಬಹುದಾಗಿದೆ. ಇನ್ನು ಹೊಸದಾಗಿ ರೇಷನ್‌ ಕಾರ್ಡ್‌ಗೆ ಅರ್ಜಿ ಹಾಕಿದರೆ ಈ ಹೊಸ ಮಾದರಿಯ ಪಡಿತರ ಚೀಟಿಯನ್ನೇ ಕೊಡಲಾಗುತ್ತದೆ.

Follow Us:
Download App:
  • android
  • ios