ಕೌಟುಂಬಿಕ ವಿಚಾರವಾಗಿ ಸತಿ-ಪತಿ ಮಧ್ಯೆ ಜಗಳ| ಇದರಿಂದ ಅಳಿಯ ಮೇಲೆ ಕೋಪಗೊಂಡಿದ್ದ ಅತ್ತೆ| ಎರಡೂವರೆ ವರ್ಷದ ಕಂದಮ್ಮನ ಮೇಲೆ ಕೋಪಾಟೋಪ| ಮಗುವಿನ ದೊಡ್ಡಪ್ಪನದಿಂದ ಅಜ್ಜಿ ಕ್ರೌರ್ಯ ಬೆಳಕಿಗೆ| ಅಳಿಯ ಕೊಟ್ಟದೂರಿನ ಮೇರೆಗೆ ಅತ್ತೆಯ ಬಂಧನ| 

ಬೆಂಗಳೂರು(ಆ.30): ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೋಪಗೊಂಡು ಅಜ್ಜಿಯೇ ಮೇಣದ ಬತ್ತಿಯಿಂದ ಎರಡೂವರೆ ವರ್ಷದ ಮೊಮ್ಮಗನನ್ನು ಸುಟ್ಟು ಹಿಂಸೆ ನೀಡಿರುವ ಅಮಾನವೀಯ ಘಟನೆ ಸದ್ದುಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನ್ಯೂ ಗುರುಪ್ಪನಪಾಳ್ಯದ ಇಮ್ರಾನ್‌ ಪಾಷ ಪುತ್ರ ಅರ್ಮಾನ್‌ ಷರೀಫ್‌ ಹಲ್ಲೆಗೊಳಗಾಗಿದ್ದು, ಘಟನೆ ಸಂಬಂಧ ಮಗುವಿನ ಅಜ್ಜಿ ಮುಬೀನಾಳನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ದಿನಗಳ ಹಿಂದೆ ಮನೆಯಲ್ಲಿ ಮಗುವಿನ ಮೇಲೆ ಹಲ್ಲೆ ನಡೆದಿದೆ. ಘಟನೆ ಬಗ್ಗೆ ಮಗುವಿನ ದೊಡ್ಡಪ್ಪ ಕಳುಹಿಸಿದ್ದ ವಿಡಿಯೋದಿಂದ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿಡ್ನ್ಯಾಪ್‌ ಕೇಸ್‌: ಪೊಲೀಸರ ಗ್ರೇಟ್‌ ಚೇಸ್‌, 24 ತಾಸಲ್ಲೇ ಅಪಹೃತ ಬಾಲಕ ಬಚಾವ್‌!

ಒಂಭತ್ತು ವರ್ಷಗಳ ಹಿಂದೆ ಇಮ್ರಾನ್‌ ಪಾಷ ಹಾಗೂ ಹಾಜೀನಾ ವಿವಾಹವಾಗಿದ್ದು, ದಂಪತಿಗೆ ಐವರು ಮಕ್ಕಳಿದ್ದಾರೆ. ಕೌಟುಂಬಿಕ ವಿಚಾರವಾಗಿ ಸತಿ-ಪತಿ ಮಧ್ಯೆ ಜಗಳವಾಗಿತ್ತು. ಇದರಿಂದ ಅಳಿಯನ ಮೇಲೆ ಕೋಪಗೊಂಡಿದ್ದ ಪಾಷ ಅವರ ಅತ್ತೆ ಮುಬೀನಾ, ಮಗುವಿನ ಮೇಲೆ ತಮ್ಮ ಸಿಟ್ಟು ತೀರಿಸಿಕೊಂಡಿದ್ದಾರೆ.

ಆ.26ರಂದು ಮಗನ ಮುಖದ ಮೇಲೆ ಸುಟ್ಟಗಾಯವಾಗಿತ್ತು. ಕಣ್ಣುಗಳು ಊದಿಕೊಂಡಿದ್ದವು. ಈ ಬಗ್ಗೆ ಪತ್ನಿಯನ್ನು ವಿಚಾರಿಸಿದಾಗ ಮನೆ ಮೇಲೆ ಹೋಗಿದ್ದಾಗ ಮಗನಿಗೆ ಜೇನು ಹುಳ ಕಚ್ಚಿ ಗಾಯವಾಗಿವೆ ಎಂದಿದ್ದಳು. ಆದರೆ ಎರಡು ದಿನಗಳ ನಂತರ ನನ್ನ ಅಣ್ಣ ಯೂಸಫ್‌ ಒಂದು ವಿಡಿಯೋ ಕಳುಹಿಸಿದ್ದ. ಅದರಲ್ಲಿ ಮಗನಿಗೆ ಅತ್ತೆ ಮುಬೀನಾ ಮೇಣದ ಬತ್ತಿಯಿಂದ ಸುಟ್ಟು ಹಲ್ಲೆ ನಡೆಸಿ ತೀವ್ರ ಗಾಯ ಮಾಡಿರುವುದು ಗೊತ್ತಾಯಿತು ಎಂದು ಇಮ್ರಾನ್‌ ತಿಳಿಸಿದ್ದಾರೆ. ಈ ದೂರಿನ ಮೇರೆಗೆ ಮುಬೀನಾಳನ್ನು ಪೊಲೀಸರು ಬಂಧಿಸಿದ್ದಾರೆ. ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಸುರಕ್ಷಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.