Asianet Suvarna News Asianet Suvarna News

371 ಜೆ ಅಡಿ ಖಾಲಿ ಹುದ್ದೆಗಳ ಮುಂಬಡ್ತಿ ಪ್ರಕ್ರಿಯೆ ಆರಂಭಿಸಲು ಪ್ರಿಯಾಂಕ್ ಖರ್ಗೆ ಸೂಚನೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ 371ಜೆ ಅಡಿಯಲ್ಲಿ ನೇಮಕಾತಿ ಮತ್ತು ಬಡ್ತಿ ಪ್ರಕ್ರಿಯೆಯನ್ನು ಸರ್ಕಾರದ ವಿವಿಧ ಇಲಾಖೆಗಳು ತಕ್ಷಣ ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿ ನಿರ್ದೇಶನ ನೀಡಿದೆ. 

Notice to Priyank Kharge to initiate promotion process for vacancies under 371 j gvd
Author
First Published Jan 6, 2024, 6:47 PM IST

ಬೆಂಗಳೂರು (ಜ.06): ಕಲ್ಯಾಣ ಕರ್ನಾಟಕ ಭಾಗದಲ್ಲಿ 371ಜೆ ಅಡಿಯಲ್ಲಿ ನೇಮಕಾತಿ ಮತ್ತು ಬಡ್ತಿ ಪ್ರಕ್ರಿಯೆಯನ್ನು ಸರ್ಕಾರದ ವಿವಿಧ ಇಲಾಖೆಗಳು ತಕ್ಷಣ ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿ ನಿರ್ದೇಶನ ನೀಡಿದೆ. ವಿಧಾನಸೌಧದಲ್ಲಿ 371ಜೆ ಅಡಿಯಲ್ಲಿ ಖಾಲಿ ಹುದ್ದೆಗಳ ಭರ್ತಿ ಸಂಬಂಧ ರಚಿಸಲಾಗಿರುವ ಸಚಿವ ಸಂಪುಟ ಉಪಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಸರ್ಕಾರದ 46 ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸದಿರುವ ಕಾರಣ 14,771 ಹುದ್ದೆಗಳ ನೇಮಕಾತಿ ಬಾಕಿ ಇದೆ. ಅಲ್ಲದೇ, ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಹುದ್ದೆಗಳಲ್ಲಿ ಶೇ.8ರ ಮೀಸಲಾತಿಯಂತೆ 8,278 ಹುದ್ದೆಗಳನ್ನು ಬಡ್ತಿ ಮೂಲಕ ಭರ್ತಿ ಮಾಡಬೇಕಿದೆ. ಈ ಸಂಬಂಧ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಪ್ರಕ್ರಿಯೆ ಆರಂಭಿಸಬೇಕು ಎಂದು ಉಪಸಮಿತಿ ಸೂಚನೆ ನೀಡಿತು.

ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ 371ಜೆ ಪ್ರಕಾರ ರಾಜ್ಯ ವೃಂದದಲ್ಲಿ ಶೇ.8ರಷ್ಟು ಹುದ್ದೆಗಳನ್ನು ನೀಡುವ ಬಗ್ಗೆ ಜ್ಯೇಷ್ಠತಾ ಪಟ್ಟಿಗಳನ್ನು ಪ್ರತ್ಯೇಕವಾಗಿ ಪ್ರಕಟಿಸುವ ಬದಲು ಒಂದೇ ಪಟ್ಟಿ ಪ್ರಕಟಿಸಿ ಜ್ಯೇಷ್ಠತಾ ಪಟ್ಟಿಯಲ್ಲಿ ಅಧಿಕಾರಿ/ನೌಕರರ ಹೆಸರಿನ ಮುಂದೆ ಎಸ್‌ಸಿ ಮತ್ತು ಎಸ್‌ಟಿ ಎಂದು ನಮೂದಿಸುವ ಮಾದರಿಯಲ್ಲಿಯೇ 371ಜೆ ಎಸ್ಸಿ, 371ಜೆ ಎಸ್ಟಿ, 371ಜೆ ಸಾಮಾನ್ಯ, 371ಜೆ ಮಹಿಳೆ ಎಂದು ನಮೂದಿಸಲು ಸೂಕ್ತ ಆದೇಶ ಹೊರಡಿಸಬೇಕು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಕರ ಖಾಲಿ ಹುದ್ದೆಗಳು, ಭರ್ತಿ ಮಾಡಬೇಕಾದ ಹುದ್ದೆಗಳ ಬಗ್ಗೆ ನಿಖರ ಮಾಹಿತಿ ಇಲ್ಲದಿರುವುದರಿಂದ ಕ್ರೂಢೀಕೃತ ಮಾಹಿತಿ ಸಲ್ಲಿಸಲು ಹಾಗೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನೇರ ನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕು ಎಂದು ತಿಳಿಸಲಾಯಿತು.

28 ಸೀಟು ಗೆಲ್ಲಲು 3-4 ದಿನದಲ್ಲಿ ರಾಜ್ಯ ಪ್ರವಾಸ ಶುರು: ಬಿ.ಎಸ್‌.ಯಡಿಯೂರಪ್ಪ

ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಪರಿಶೀಲಿಸಲು ಪ್ರತ್ಯೇಕ ಸಭೆ ಕರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು. ಬಳ್ಳಾರಿ ಜಿಲ್ಲೆ ಎಂದು ಇರುವುದನ್ನು ವಿಜಯನಗರ ಜಿಲ್ಲೆ ಎಂದು ಬದಲಿಸಿ ಆದೇಶ ಹೊರಡಿಸುವಂತೆ ಸೂಚಿಸಲಾಯಿತು. ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸಚಿವಾಲಯಗಳಲ್ಲಿ 371ಜೆ ಮೀಸಲಾತಿ ಅಳವಡಿಸಿರುವ ಬಗ್ಗೆ ಪೂರ್ಣ ವಿವರ ಪಡೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅಡುಗೆಯವರಿಗೆ ಮುಂಬಡ್ತಿ ನೀಡುವಾಗ ಶೇ.8ರಷ್ಟು ಮೀಸಲಾತಿ ಕಡ್ಡಾಯವಾಗಿ ಪಾಲಿಸಬೇಕು. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ನಲ್ಲಿ 371ಜೆ ನಿಯಮಗಳಂತೆ ಸ್ಥಳೀಯ ವೃಂದದ ಅಧಿಕಾರಿ ಮತ್ತು ನೌಕರರಿಗೆ ಮುಂಬಡ್ತಿ ಮತ್ತು ಸೇವಾ ಜ್ಯೇಷ್ಠತೆ ಪರಿಗಣಿಸಬೇಕು ಎಂದು ನಿರ್ದೇಶನ ನೀಡಲಾಯಿತು.

ಹುಬ್ಬಳ್ಳಿ ವ್ಯಕ್ತಿ ವಿಷಯದಲ್ಲಿ ಬಿಜೆಪಿ ರಾಜಕೀಯ ಸ್ಟಂಟ್‌: ಡಿ.ಕೆ.ಶಿವಕುಮಾರ್‌

ಅಧಿಕಾರಿಗಳ ವಿರುದ್ಧ ಗರಂ: ಸಚಿವ ಸಂಪುಟದ ಉಪಸಮಿತಿಯಲ್ಲಿ ಇಲಾಖೆಗಳ ಮುಖ್ಯಸ್ಥರು ಭಾಗವಹಿಸದೆ ಕಿರಿಯ ಅಧಿಕಾರಿಗಳನ್ನು ಕಳುಹಿಸಿರುವುದಕ್ಕೆ ಉಪಸಮಿತಿ ತರಾಟೆಗೆ ತೆಗೆದುಕೊಂಡಿತು. ಸರ್ಕಾರದ ಆದೇಶದಂತೆ ಸಭೆಯಲ್ಲಿ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಬೇಕಾಗಿದ್ದು, ಕೆಲವು ಇಲಾಖೆಗಳ ಕಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಮಿತಿ ಅಧಿಕಾರಿಗಳ ವಿರುದ್ಧ ಗರಂ ಆಯಿತು. ಸಹಕಾರ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಇ-ಆಡಳಿತ ಮುಂತಾದ ಇಲಾಖೆಯ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲು ಸೂಚಿಸಲಾಯಿತು.

Follow Us:
Download App:
  • android
  • ios