ಹುಬ್ಬಳ್ಳಿ ವ್ಯಕ್ತಿ ವಿಷಯದಲ್ಲಿ ಬಿಜೆಪಿ ರಾಜಕೀಯ ಸ್ಟಂಟ್: ಡಿ.ಕೆ.ಶಿವಕುಮಾರ್
ಹುಬ್ಬಳ್ಳಿ ವ್ಯಕ್ತಿಯ ಬಂಧನ ವಿಚಾರದಲ್ಲಿ ಬಿಜೆಪಿಯು ರಾಜಕೀಯ ಸ್ಟಂಟ್ ಮಾಡುತ್ತಿದೆ. ನಾವು ಯಾವುದೇ ದ್ವೇಷ ರಾಜಕಾರಣ ಮಾಡುತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡುತ್ತಿದ್ದೇವೆ ಅಷ್ಟೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಜ.06): ಹುಬ್ಬಳ್ಳಿ ವ್ಯಕ್ತಿಯ ಬಂಧನ ವಿಚಾರದಲ್ಲಿ ಬಿಜೆಪಿಯು ರಾಜಕೀಯ ಸ್ಟಂಟ್ ಮಾಡುತ್ತಿದೆ. ನಾವು ಯಾವುದೇ ದ್ವೇಷ ರಾಜಕಾರಣ ಮಾಡುತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡುತ್ತಿದ್ದೇವೆ ಅಷ್ಟೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಸದಾಶಿವನಗರ ನಿವಾಸದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಶಾಂತಿಪ್ರಿಯ ರಾಜ್ಯ. ಇಲ್ಲಿ ದುಷ್ಕೃತ್ಯಕ್ಕೆ ಅವಕಾಶವಿಲ್ಲ.
ಬಾಕಿ ಪ್ರಕರಣಗಳ ವಿಲೇವಾರಿ ವೇಳೆ ಹುಬ್ಬಳ್ಳಿಯಲ್ಲಿ ಕಾನೂನು ಉಲ್ಲಂಘಿಸಿದ್ದ ವ್ಯಕ್ತಿಯನ್ನೂ ಬಂಧಿಸಲಾಗಿದೆ. ಈ ಬಗ್ಗೆ ಗೃಹ ಸಚಿವರೂ ಸ್ಪಷ್ಟನೆ ನೀಡಿದ್ದರೂ ಬಿಜೆಪಿ ಅನಗತ್ಯ ಸ್ಟಂಟ್ ಮಾಡುತ್ತಿದೆ ಎಂದು ಕಿಡಿ ಕಾರಿದರು. ಬಿಜೆಪಿ ಅವರಿಗೆ 7 ತಿಂಗಳ ಕಾಲ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ತಾವು ರಾಜಕೀಯವಾಗಿ ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಹೀಗೆ ಮಾತನಾಡುತ್ತಿದ್ದಾರೆ. ಅವರು ಏನಾದರೂ ಮಾಡಿಕೊಳ್ಳಲಿ.
ಬೆಂ.ವಿವಿ ಕ್ಯಾಂಪಸ್‌ನ 34.4 ಎಕರೆ ಒತ್ತುವರಿ ಹಿಂಪಡೆಯಿರಿ: ಸಚಿವ ಎಂ.ಸಿ.ಸುಧಾಕರ್ ಸೂಚನೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಹಾಗೂ ಜನ ಇದಕ್ಕೆ ಉತ್ತರ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು. ನಾವು ಬಿಜೆಪಿಯವರತೆ ಅಧಿಕಾರ ದುರ್ಬಳಕೆ ಮಾಡಿಕೊಂಡು, ಅನ್ಯ ಪಕ್ಷದ ಕಾರ್ಯಕರ್ತರ ಮೇಲೆ ಕೇಸು ಹಾಕುತ್ತಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಹುಬ್ಬಳ್ಳಿ, ಬೆಂಗಳೂರಿನಲ್ಲಿ ಎಷ್ಟು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿದೆ ಎಂಬುದನ್ನು ನೋಡಿ. ನಾವು ಇದುವರೆಗೂ ಆ ರೀತಿ ಮಾಡಿಲ್ಲ. ಮುಂದೆಯೂ ಮಾಡಲ್ಲ ಎಂದು ಹೇಳಿದರು.
ಸಚಿವರಿಗೆ ಸ್ಪರ್ಧಿಸಲು ಹೇಳೇ ಇಲ್ಲ: ‘ಲೋಕಸಭೆಗೆ ಸಚಿವರು ಸ್ಪರ್ಧೆ ಮಾಡುವ ಬಗ್ಗೆ ನಾನು ಶಿಫಾರಸು ಮಾಡಿದ್ದೇನೆ ಎಂಬುದು ಸುಳ್ಳು. ಈ ಬಗ್ಗೆ ನಾವಿನ್ನೂ ವರದಿಯನ್ನೇ ಕೊಟ್ಟಿಲ್ಲ. ಆದರೆ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಕೆಲವು ಸಚಿವರು ಸ್ಪರ್ಧೆ ಮಾಡುವ ಸಂದರ್ಭವೂ ಬರಬಹುದು. ಆದರೆ ಹೈಕಮಾಂಡ್ ನಿರ್ಧಾರವೇ ಅಂತಿಮ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಕುರಿತು ನಾವು ಸಚಿವರಿಗೆ ಸ್ಪರ್ಧೆ ಮಾಡಿ ಎಂದು ಹೇಳೇ ಇಲ್ಲ. ಜ.4ರಂದು ಹೈಕಮಾಂಡ್ ಜತೆ ಸಭೆ ನಡೆಯಲಿದ್ದು, ಸಿದ್ದರಾಮಯ್ಯ ಹಾಗೂ ನನಗೆ ಆಹ್ವಾನ ನೀಡಿದ್ದಾರೆ. ಈ ವೇಳೆ ಸಚಿವರು ನೀಡಿರುವ ವರದಿ ಆಧರಿಸಿ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಬಗ್ಗೆ ಪ್ರಾಥಮಿಕವಾಗಿ ಚರ್ಚಿಸುವ ಸಾಧ್ಯತೆಯಿದೆ. ಯಾವ ಮಾನದಂಡ ನಿಗದಿ ಮಾಡುತ್ತಾರೋ ಅದರ ಪ್ರಕಾರ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಸಿದ್ದರಾಮಯ್ಯ ದೇಶಭಕ್ತರ ಪರವೋ, ಭಯೋತ್ಪಾದಕರ ಪರವೋ ಸ್ಪಷ್ಟಪಡಿಸಲಿ: ರೇಣುಕಾಚಾರ್ಯ
ಸಚಿವರ ಸ್ಪರ್ಧೆ ವರದಿ ನೀಡಿಲ್ಲ: ಸಚಿವರ ಸ್ಪರ್ಧೆ ಬಗ್ಗೆ ಶಿಫಾರಸು ವರದಿಯನ್ನೇ ಕೊಟ್ಟಿಲ್ಲ. ಹೀಗಿದ್ದಾಗ ಅದನ್ನು ಹೈಕಮಾಂಡ್ ನಾಯಕರು ತಿರಸ್ಕರಿಸಿದ್ದಾರೆ ಎಂಬುದು ಸುಳ್ಳು ಸುದ್ದಿ. ಪಕ್ಷ ಹೇಳಿದಂತೆ ಎಲ್ಲರೂ ಕೇಳುತ್ತಾರೆ. ಜ.10ರಂದು ಮತ್ತೊಂದು ಸಭೆ ಕರೆದಿದ್ದು, ಬೆಳಗ್ಗೆ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳ ಜೊತೆ ಹಾಗೂ ಮಧ್ಯಾಹ್ನ ಬ್ಲಾಕ್ ಅಧ್ಯಕ್ಷರ ಜೊತೆ ಸಭೆ ಮಾಡುತ್ತೇವೆ. ಈ ಸಭೆಯಲ್ಲಿ ಮುಖ್ಯಮಂತ್ರಿಗಳು ಸಹ ಭಾಗವಹಿಸಬೇಕು ಎಂದು ಆಹ್ವಾನ ನೀಡಲಾಗಿದೆ ಎಂದು ಹೇಳಿದರು.