ಕಾವೇರಿ 6ನೇ ಹಂತದ ಕುಡಿಯುವ ನೀರು ಯೋಜನೆಗೆ ಸೂಚನೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರಿನ ಜನರಿಗೆ ಕುಡಿಯುವ ನೀರು ಒದಗಿಸುವ ಕಾವೇರಿ 5ನೇ ಹಂತದ ಯೋಜನೆಗೆ ಚಾಲನೆ ದೊರೆತಿದೆ. 6ನೇ ಹಂತ ಯೋಜನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹಲಗೂರು (ಅ.17): ಬೆಂಗಳೂರಿನ ಜನರಿಗೆ ಕುಡಿಯುವ ನೀರು ಒದಗಿಸುವ ಕಾವೇರಿ 5ನೇ ಹಂತದ ಯೋಜನೆಗೆ ಚಾಲನೆ ದೊರೆತಿದೆ. 6ನೇ ಹಂತ ಯೋಜನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ರೊಂದಿಗೆ ಬೆಂಗಳೂರು ಜಲಮಂಡಳಿ ಜಲಶುದ್ಧೀಕರಣ ಘಟಕದ ಬಟನ್ ಪ್ರೆಸ್ ಮಾಡುವ ಮೂಲಕ ಬುಧವಾರ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಾವೇರಿ 5ನೇ ಹಂತದ ಯೋಜನೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಬೆಂಗಳೂರಿಗೆ ಸಂಪೂರ್ಣ ನೀರು ಪೂರೈಸುವುದು ನಮ್ಮ ಉದ್ದೇಶ. ಇದಕ್ಕಾಗಿ 6ನೇ ಹಂತ ಕೂಡ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಈ ಯೋಜನೆಗೆ ಸುಮಾರು 7,200 ಕೋಟಿ ರು. ಅನುದಾನದ ಅವಶ್ಯಕತೆ ಇದೆ. ಆ ಹಣಕಾಸಿನ ನೆರವು ಪಡೆದು ಯೋಜನೆ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದರು. 2014ರಲ್ಲಿ ಯೋಜನೆಗೆ ಮಂಜೂರಾತಿ ಸಿಕ್ಕಿತು. ನಾನು ಈ ಹಿಂದೆ ಸಿಎಂ ಆಗಿದ್ದಾಗ ಜಪಾನ್‌ನ ಜೈಕಾ ಅವರಿಂದ ಆರ್ಥಿಕ ಸಹಾಯ ಪಡೆದು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದೆ. ಇದು ಪೂರ್ಣಗೊಳ್ಳಲು ಸುಮಾರು 4,336 ಕೋಟಿ ರು. ಖರ್ಚಾಗಿದೆ.
ಈಗ ಮತ್ತೆ ಸಿಎಂ ಆಗಿ ಯೋಜನೆ ಲೋಕಾರ್ಪಣೆ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಈ 110 ಹಳ್ಳಿಗಳನ್ನು ಬೆಂಗಳೂರು ನಗರಕ್ಕೆ ಸೇರಿಸಿದರು. ಆಗ ಅವರು ಹಳ್ಳಿಗಳಿಗೆ ಯಾವುದೇ ಮೂಲ ಸೌಕರ್ಯ ಕಲ್ಪಿಸಲಿಲ್ಲ. ಆ ನಂತರ ಬಂದ ಬಿಜೆಪಿ ಕೂಡ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಈ ಯೋಜನೆ ವಿಳಂಬಕ್ಕೆ ಕಾರಣವಾಯಿತು ಎಂದು ದೂರಿದರು. ಈ ಯೋಜನೆಗಾಗಿ 80 ಪರ್ಸೆಂಟ್ ಮಾತ್ರ ಜೈಕಾ ಅನುದಾನ ಕೊಟ್ಟಿತು.
3 ಹಗರಣ: ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ರಾಜ್ಯಪಾಲರಿಗೆ ದೂರು
ಉಳಿದ ಅನುದಾನವನ್ನು ರಾಜ್ಯ ಸರ್ಕಾರ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನೀಡಿದೆ ಎಂದರು. ಈ ಹಿಂದೆ ಬೆಂಗಳೂರಿನ ಜನರಿಗೆ ಕೆರೆಗಳಿಂದ ನೀರು ಕೊಡಲಾಗ್ತಿತ್ತು. ಆಗ ಬೆಂಗಳೂರು ಇಷ್ಟು ದೊಡ್ಡದಾಗಿ ಬೆಳೆದಿರಲಿಲ್ಲ. ತದನಂತರ 1974ರಿಂದ ಕಾವೇರಿಯಿಂದ ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ತುಂಬಿದ ಕೊಡಗಳ ನೀರನ್ನು ಕಾವೇರಿ ಮಾತೆಗೆ ಸಮರ್ಪಿಸಿ, ಪುಷ್ಪಾರ್ಚನೆ ನೆರವೇರಿಸಿದರು.