ಕರ್ನಾಟಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯದ ಉತ್ತರ ಭಾಗ ಅಕ್ಷರಶಃ ‘ರಾಜಕೀಯ ಶಕ್ತಿ ಕೇಂದ್ರ’ವಾಗಿ ರೂಪುಗೊಂಡಿದೆ! ಇಲ್ಲಿನ ವಿವಿಧ ಪಕ್ಷಗಳ ನಾಯಕರು ಹಿಂದೆ ಮುಖ್ಯಮಂತ್ರಿಗಳು, ಪ್ರತಿಪಕ್ಷದ ನಾಯಕರು, ಸಭಾಧ್ಯಕ್ಷರು, ಸಭಾಪತಿಗಳು, ರಾಷ್ಟ್ರೀಯ ಪಕ್ಷಗಳ ರಾಜ್ಯಾಧ್ಯಕ್ಷರು ಆಗಿ ಕಾರ್ಯನಿರ್ವಹಿಸಿದ ನಿದರ್ಶನಗಳಿವೆ. ಆದರೆ, ಈಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಧೋಳದ ಶಾಸಕ ಗೋವಿಂದ ಕಾರಜೋಳ ಉಪಮುಖ್ಯಮಂತ್ರಿ, ಜತೆಗೆ ಲೋಕೋಪಯೋಗಿ, ಸಮಾಜ ಕಲ್ಯಾಣ ಮಂತ್ರಿ ಕೂಡ.

ಅಥಣಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ, ಸಕ್ಕರೆ ಸಚಿವ. ಶಿಗ್ಗಾಂವಿ ಶಾಸಕ ಬಸವರಾಜ ಬೊಮ್ಮಾಯಿ ಗೃಹ ಸಚಿವ. ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ.

’10 ದಿನದಲ್ಲಿ ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್’

ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವೆ. ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು ಆರೋಗ್ಯ ಸಚಿವ. ಶಿರಸಿ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯ ಅಧ್ಯಕ್ಷ. ಬಾದಾಮಿ ಕ್ಷೇತ್ರದ ಶಾಸಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯ ಪ್ರತಿಪಕ್ಷದ ನಾಯಕ, ಬಾಗಲಕೋಟೆಯ ವಿಧಾನಪರಿಷತ್‌ ಸದಸ್ಯ ಎಸ್‌.ಆರ್‌.ಪಾಟೀಲ್‌ ಮೇಲ್ಮನೆಯ ಪ್ರತಿಪಕ್ಷದ ನಾಯಕ.

ಸತತ ಏಳು ಬಾರಿ ಮೇಲ್ಮನೆ ಸದಸ್ಯರಾಗಿರುವ ಹುಬ್ಬಳ್ಳಿಯ ಬಸವರಾಜ ಹೊರಟ್ಟಿಮೇಲ್ಮನೆಯಲ್ಲಿ ಜೆಡಿಎಸ್‌ ಪಕ್ಷದ ನಾಯಕ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿ ಇರುವ ಈ ಸಂದರ್ಭದಲ್ಲಿ ಉತ್ತರದ ಸಂಸದರಾದ ಹುಬ್ಬಳ್ಳಿಯ ಪ್ರಹ್ಲಾದ್‌ ಜೋಶಿ ಅವರಿಗೆ ಮೂರು ಪ್ರಬಲ ಖಾತೆಗಳ ಹೊಣೆಗಾರಿಕೆ. ಬೆಳಗಾವಿ ಸಂಸದ ಸುರೇಶ್‌ ಅಂಗಡಿ ಅವರಿಗೆ ರೈಲ್ವೆಯ ರಾಜ್ಯ ಸಚಿವ ಸ್ಥಾನ. ಅಧಿಕಾರ, ಅಭಿವೃದ್ಧಿ, ಅನುದಾನ, ಅವಕಾಶಗಳ ಹಂಚಿಕೆ ವಿಷಯದಲ್ಲಿ ಉತ್ತರ ಕರ್ನಾಟಕಕ್ಕೆ ಸದಾ ಅನ್ಯಾಯವಾಗುತ್ತಿದೆ ಎಂಬುದು ಈ ಭಾಗದ ಜನರ ಅಚಲ ನಂಬಿಕೆ. ಉತ್ತರದವರನ್ನು ಮಲತಾಯಿ ಮಕ್ಕಳಂತೆ ಕಾಣಲಾಗುತ್ತಿದೆ.

ಕರ್ನಾಟಕ ಏಕೀಕರಣಗೊಂಡು ಏಳು ದಶಕಗಳೇ ಕಳೆದರೂ ಈ ತಾರತಮ್ಯ ನೀಗುತ್ತಿಲ್ಲ. ಇಡೀ ರಾಜ್ಯ ಸಮಗ್ರವಾಗಿ ಅಭಿವೃದ್ಧಿ ಆಗುತ್ತಿಲ್ಲ ಎನ್ನುವ ಅಸಮಾಧಾನದ ಹೊಗೆ ಆಗಾಗ ಪ್ರತ್ಯೇಕತೆಯ ಕೂಗಿಗೆ ಪ್ರೇರಣೆ ನೀಡಿದ್ದು ಸುಳ್ಳಲ್ಲ. ಆದರೆ ಈಗ ಸರ್ಕಾರದ ಶೇ.65ರಷ್ಟುರಾಜಕೀಯ ಅಧಿಕಾರ ಉತ್ತರ ಕರ್ನಾಟಕಕ್ಕೆ ಒಲಿದು ಬಂದಿದೆ. ಉತ್ತರವೇ ಈಗ ‘ಅಸಲಿ ಪವರ್‌ ಸೆಂಟರ್‌’. ಹಾಗಾಗಿ ಹಳೆಯ ಬೇಡಿಕೆ, ನೆನೆಗುದಿಗೆ ಬಿದ್ದ ಯೋಜನೆಗಳು, ಹೊಸ ಅವಕಾಶಗಳ ನಿರೀಕ್ಷೆಗಳು ಗರಿಗೆದರಿವೆ. ಹೀಗೆ ಈ ಭಾಗ ರಾಜಕೀಯ ಪವರ್‌ ಸೆಂಟರ್‌ ಆಗುತ್ತಿದ್ದಂತೆ ಉತ್ತರದ 14 ಜಿಲ್ಲೆಗಳಿಂದ ಕೇಳಿಬರುತ್ತಿರುವುದು ಒಂದೇ ಒಂದು ಮಾತು. ಅದು, ‘ಈಗಲಾದರೂ ಇಲ್ಲಿನ ಸಮಸ್ಯೆಗಳಿಗೆ ಉತ್ತರ ಸಿಗುತ್ತಾ?’

ತಾರತಮ್ಯದ ಆರೋಪ ಮಾಡುತ್ತಿದ್ದವರ ಕೈಲೇ ಈಗ ಅಧಿಕಾರ!

ಈ ಭಾಗದಿಂದ ವೀರೇಂದ್ರ ಪಾಟೀಲ್‌, ಎಸ್‌.ಆರ್‌.ಕಂಠಿ, ಬಿ.ಡಿ.ಜತ್ತಿ, ಎಸ್‌.ಆರ್‌.ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದಾರೆ. ಇವರೆಲ್ಲ ಉತ್ತರ ಕರ್ನಾಟಕದ ಅಭಿವೃದ್ಧಿಗೆ ತಮ್ಮ ಕೈಲಾದ ಪ್ರಯತ್ನ ಮಾಡಿದ್ದಾರೆ. ಆದರೆ, ಬಿ.ಎಸ್‌.ಯಡಿಯೂರಪ್ಪ ಶಿವಮೊಗ್ಗವನ್ನು ಅಭಿವೃದ್ಧಿಪಡಿಸಿದಂತೆ, ಎಸ್‌.ಎಂ.ಕೃಷ್ಣ ಬೆಂಗಳೂರನ್ನು ಜಗತ್ತಿಗೆ ಮಾದರಿ ಮಾಡಿದಂತೆ, ಎಚ್‌.ಡಿ.ಕುಮಾರಸ್ವಾಮಿ ಹಾಸನ, ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಸಾವಿರಾರು ಕೋಟಿ ಅನುದಾನ ಹರಿಸಿದಂತೆ ಕೈಬಿಚ್ಚಿ ನೆರವು ನೀಡಲಿಲ್ಲ.

ಹೀಗಾಗಿ ದಕ್ಷಿಣ ಭಾಗಕ್ಕಿಂತ ಈ ಪ್ರದೇಶ ಮೂರ್ನಾಲ್ಕು ದಶಕ ಹಿಂದೆ ಉಳಿಯಿತು ಎನ್ನುವುದನ್ನು ಡಾ.ನಂಜುಂಡಪ್ಪ ನೇತೃತ್ವದ ‘ಪ್ರಾದೇಶಿಕ ಅಸಮಾನತೆ ನಿವಾರಣೆ ಆಯೋಗ’ ಹೇಳಿದೆ. ಅಭಿವೃದ್ಧಿಯಲ್ಲಿನ ತಾರತಮ್ಯದ ವಿರುದ್ಧ ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದ ಗೋವಿಂದ ಕಾರಜೋಳ, ಜಗದೀಶ್‌ ಶೆಟ್ಟರ್‌, ಬಸವರಾಜ ಬೊಮ್ಮಾಯಿ ಅವರ ಕೈಯಲ್ಲೇ ಈಗ ಅಧಿಕಾರವಿದೆ. ಅದನ್ನೀಗ ಇವರೆಲ್ಲ ಹೇಗೆ ಪ್ರಯೋಗಿಸುತ್ತಾರೆ? ಎಷ್ಟುಪ್ರಯೋಗಿಸುತ್ತಾರೆ? ಇದರಿಂದ ಎಷ್ಟುಅನುದಾನ, ಅಭಿವೃದ್ಧಿ ಯೋಜನೆಗಳು ಮತ್ತು ಕೈಗಾರಿಕೆಗಳು ಇತ್ತ ಬರುತ್ತವೆ ಎನ್ನುವ ಕುರಿತಂತೆ ಇಲ್ಲಿನ ಜನತೆ ಬಹು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಉತ್ತರ ಕರ್ನಾಟಕದ ನಿರೀಕ್ಷೆಗಳೇನು?

ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣ

ಇತ್ತೀಚೆಗೆ ಆಲಮಟ್ಟಿಅಣೆಕಟ್ಟೆಗೆ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ‘ರಾಜ್ಯದ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಒಂದು ಲಕ್ಷ ಕೋಟಿ ಹಣ’ ವ್ಯಯಿಸುವುದಾಗಿ ಭರವಸೆ ನೀಡಿದ್ದಾರೆ. ಹಿಂದೆ ಕಾಂಗ್ರೆಸ್‌ ಕೂಡ ಹೀಗೆಯೇ ಹೇಳಿತ್ತು. ಕೊನೆಗೆ ಉಲ್ಟಾಹೊಡೆದಿತ್ತು. ಅಂದು ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ್‌ ವಿರುದ್ಧ ಯಡಿಯೂರಪ್ಪ, ಬೊಮ್ಮಾಯಿ ಗುಡುಗಿದ್ದರು. ಸಾವಿರಾರು ಕೋಟಿ ಅನುದಾನ ಅವ್ಯವಹಾರವಾಗಿದೆ ಎಂದು ಗಂಟಲು ಏರಿಸಿದ್ದರು. ಹೀಗೆ ಘೋಷಣೆ, ಆರೋಪ-ಪ್ರತ್ಯಾರೋಪಗಳ ಮಧ್ಯೆಯೇ 5 ದಶಕ ಕಳೆದಿದೆ ಈ ಕೃಷ್ಣಾ ಮೇಲ್ದಂಡೆ ಯೋಜನೆ. ಈಗಲಾದರೂ ಈ ಸಮಸ್ಯೆಗೆ ಉತ್ತರ ಸಿಗಬೇಕಲ್ಲವೇ?

ಬಿಜೆಪಿ ಗೆಲ್ಲಿಸಿದರೆ ಮಹಾರಾಷ್ಟ್ರಕ್ಕೆ ನೀರು; ಬಿಎಸ್ ವೈ ಭರವಸೆ!

ನಂಜುಂಡಪ್ಪ ವರದಿ ‘ಸರಿಯಾಗಿ’ ಜಾರಿ

ಪ್ರಾದೇಶಿಕ ಅಸಮಾನತೆ ನೀಗಿಸಲು ರಚನೆಯಾದ ಡಾ.ನಂಜುಂಡಪ್ಪ ವರದಿ ಎಸ್‌.ಎಂ.ಕೃಷ್ಣ ಸರ್ಕಾರದ ಕೊಡುಗೆಯಾಗಿದ್ದರೂ ಆಯೋಗದ ಶಿಪಾರಸ್ಸಿನಂತೆ ಅದಕ್ಕೆ ಹಣಕಾಸಿನ ನೆರವು ನೀಡುವ ಉದಾರತೆ ತೋರಿದ್ದು ಯಡಿಯೂರಪ್ಪ ಸರ್ಕಾರ. ಅದಕ್ಕೊಂದು ಪ್ರತ್ಯೇಕ ಮಂಡಳಿಯ ಸ್ಥಾನಮಾನ ನೀಡಲಾಯಿತು. ಅದಕ್ಕೊಬ್ಬ ಅಧ್ಯಕ್ಷನನ್ನು ನೇಮಿಸಲಾಯಿತು. ಇಷ್ಟಾಗಿಯೂ ಫಲಿತಾಂಶ ಮಾತ್ರ ಹೇಳಿಕೊಳ್ಳುವಂತಿಲ್ಲ. ಇದಕ್ಕೆ ನಿಗದಿ ಮಾಡಿದ್ದ ಅನುದಾನ ಬೇರೆ ಕಾಮಗಾರಿಗಳಿಗೆ ಬಳಕೆಯಾಯಿತು. ಹೈದ್ರಾಬಾದ್‌ ಕರ್ನಾಟಕಕ್ಕೆ ಜೆ.371 ಅನ್ವಯ ವಿಶೇಷ ಸ್ಥಾನಮಾನ ಲಭಿಸಿದ್ದರಿಂದ ನಂಜುಂಡಪ್ಪ ವರದಿಯ ಅನುಷ್ಠಾನ ವಿಷಯವಾಗಿನ ಹಕ್ಕೊತ್ತಾಯ, ಕೂಗು ತುಸು ದನಿ ಕಳೆದುಕೊಂಡಿದೆ. ಇತ್ತ ಮುಂಬೈ ಕರ್ನಾಟಕದವರೂ ಎಷ್ಟುಒದರಿಕೊಂಡರೂ ನಮ್ಮ ಹಣೆಬರಹ ಇಷ್ಟೇ ಎಂದು ಸುಮ್ಮನಾಗಿದ್ದಾರೆ.

ಮಹದಾಯಿ ಕಾಮಗಾರಿ ಆರಂಭ

ಈ ಭಾಗದ ಇನ್ನೊಂದು ಪ್ರಮುಖ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಯಾದ ಮಹದಾಯಿ ವಿಷಯದಲ್ಲಿ ಇಲ್ಲಿನ ಜನತೆ ಬಿಜೆಪಿ ಸರ್ಕಾರದಿಂದ ಸಬೂಬು ಕೇಳುವ ಸ್ಥಿತಿಯಲ್ಲಿ ಇಲ್ಲ. ಕಾರಣ ವಿಧಾನಸಭೆ ಚುನಾವಣೆ ವೇಳೆ ಸ್ವತಃ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ಯಡಿಯೂರಪ್ಪ ಅವರೆಲ್ಲ ‘ಕೇಂದ್ರದಲ್ಲಿ ನಮ್ಮ ಸರ್ಕಾರ ಇದೆ. ರಾಜ್ಯದಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ, ಮೂರು ತಿಂಗಳಲ್ಲಿ ಮಹದಾಯಿ ಸಮಸ್ಯೆ ಬಗೆಹರಿಸಿ ಕರುನಾಡಿಗೆ ನೀರು ಹರಿಸುತ್ತೇವೆ’ ಎಂದು ಭರವಸೆ ನೀಡಿದ್ದರು. ಈಗ ಎರಡೂ ಕಡೆ ಬಿಜೆಪಿ ಸರ್ಕಾರ ಬಂದಾಗಿದೆ. ಮಹದಾಯಿ ನ್ಯಾಯಾಧಿಕರಣದ ತೀರ್ಪಿನಂತೆ ನೋಟಿಫಿಕೇಶನ್‌ ಹೊರಡಿಸಿ, ಕಾಮಗಾರಿಗೆ ಚಾಲನೆ ನಿಡುವ ಮೂಲಕ ಬಿಜೆಪಿಗೆ ತನ್ನ ಮಾತು ಉಳಿಸಿಕೊಳ್ಳುವ ಅನಿವಾರ್ಯವಿದೆ.

ಸಣ್ಣ, ದೊಡ್ಡ ಕೈಗಾರಿಕೆಗಳ ನಿರ್ಮಾಣ

ಜಗದೀಶ್‌ ಶೆಟ್ಟರ್‌ ಇಂದು ಸಣ್ಣ, ದೊಡ್ಡ ಕೈಗಾರಿಕೆಗಳನ್ನು ಉತ್ತರದತ್ತ ತರುವತ್ತ ತಮ್ಮ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಇಂಥ ಪ್ರಯತ್ನ ನಡೆದಿತ್ತು. ಪೋಸ್ಕೋ ಕಂಪನಿಯ ಹಿಡನ್‌ ಅಜೆಂಡಾದ ವಿರುದ್ಧ ತಿರುಗಿಬಿದ್ದ ಜನತೆ ಅದನ್ನು ಓಡಿಸಿದ್ದರು. ಈಗಲೂ ಅದನ್ನೇ ಹೇಳುತ್ತ ಅದೆಷ್ಟುದಿನ ಕಾಲಹರಣ ಮಾಡುವುದು? ಈ ನೆಲದ ನಿಯಮ ಗೌರವಿಸುವ ಮತ್ತು ಇಲ್ಲಿನ ಕೈಗಳಿಗೆ ಕೆಲಸ ನೀಡುವ ಕೈಗಾರಿಕೆಗಳನ್ನು ಕರೆದು ತರುವ ದೊಡ್ಡ ಹೊಣೆ ಶೆಟ್ಟರ್‌ ಮೇಲಿದೆ.

ಪ್ರಮುಖ ಕಚೇರಿಗಳ ಸ್ಥಳಾಂತರ

ಬೆಳಗಾವಿಯಲ್ಲಿ 450 ಕೋಟಿ ವ್ಯಯಿಸಿ ನಿರ್ಮಿಸಿರುವ ಸುವರ್ಣ ವಿಧಾನಸೌಧ ಸದ್ಬಳಕೆಯಾಗುತ್ತಿಲ್ಲ. ಬೆಳಗಾವಿಯಲ್ಲಿ ಉಭಯ ಸದನಗಳ ಅಧಿವೇಶನ ನಡೆಸುವ ಮೂಲಕ ಈ ಸೌಧದ ನಿರ್ಮಾಣಕ್ಕೆ ಕಾರಣವಾಗಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಅವಧಿಯಲ್ಲಿ ಬೆಂಗಳೂರಿನಲ್ಲಿನ ಆರು ಕಚೇರಿಗಳನ್ನು ಈ ಸೌಧಕ್ಕೆ ಸ್ಥಳಾಂತರಿಸಿ ಆದೇಶ ಹೊರಡಿಸಿದ್ದರು. ಆದರೆ, ಆ ಯಾವುದೇ ಕಚೇರಿಗಳು ಅಲ್ಲಿ ಇನ್ನೂ ಆರಂಭವಾಗಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಅವುಗಳಲ್ಲಿನ ಎರಡು ಕಚೇರಿಗಳನ್ನು ಬೆಂಗಳೂರಿನಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಿದೆ. ಅಚ್ಚರಿಯೆಂದರೆ ಪ್ರವಾಹ ಮತ್ತು ಸಂತ್ರಸ್ತರಿಗೆ ನೆರವಾಗುವ ನೆಪ ಹೇಳಿ ಈ ಬಾರಿಯ ಚಳಿಗಾಲದ ಅಧಿವೇಶನವನ್ನೂ ರದ್ದುಗೊಳಿಸಲಾಗಿದೆ.

ನೆರೆಗೆ ಶಾಶ್ವತ ಪರಿಹಾರ:

ನದಿ ಅತಿಕ್ರಮಣ ತೆರವು

‘ಬರಗಾಲ ಪ್ರದೇಶ’ ಎನ್ನುವ ಹಣೆಪಟ್ಟಿಅಂಟಿಸಿಕೊಂಡಿದ್ದ ಉತ್ತರ ಭಾಗ ಕಳೆದ ಒಂದು ದಶಕದಲ್ಲಿ ‘ನೆರೆಪೀಡಿತ ಪ್ರದೇಶ’ ಎಂದು ಬದಲಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯಾದರೆ ಕೃಷ್ಣೆ, ಭೀಮೆಯರು ಮೈದುಂಬಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಹ ಉಂಟುಮಾಡುತ್ತವೆ. ಪಶ್ಚಿಮಘಟ್ಟದ ಕರ್ನಾಟಕದ ಗಡಿಯಲ್ಲಿ ತುಸುವೇ ಮಳೆಯಾದರೂ ಮಲಪ್ರಭೆ, ಘಟಪ್ರಭೆ ನದಿಗಳು, ಬೆಣ್ಣಿಹಳ್ಳ, ತುಪ್ಪರಿ ಹಳ್ಳ, ದೊಡ್ಡ ಹಳ್ಳಗಳು ಉಕ್ಕೇರಿ ಆ ಪ್ರದೇಶದ ಜನಜೀವನವನ್ನು ಅಸ್ತವ್ಯಸ್ತ ಮಾಡುತ್ತಿವೆ.

ಕೊಪ್ಪಳ, ಬಳ್ಳಾರಿ ಜಿಲ್ಲೆಗಳನ್ನು ಹೊರತುಪಡಿಸಿ 12 ಜಿಲ್ಲೆಗಳು ಈಗ ಅಕ್ಷರಶಃ ತೊಯ್ದು ತೊಪ್ಪೆಯಾಗಿವೆ. ನೆರೆ ಬಂದಾಗ ತಾತ್ಕಾಲಿಕ ಪರಿಹಾರ ನೀಡುವುದು ಅಥವಾ ಗ್ರಾಮಗಳನ್ನು ಸ್ಥಳಾಂತರಿಸುವುದರಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ಏಕೆಂದರೆ ಈ ಹಿಂದೆ ಸರ್ಕಾರ ನಿರ್ಮಿಸಿದ ನವಗ್ರಾಮಗಳು ಹಾಳು ಕೊಂಪೆಗಳಾಗಿವೆ. ಹೀಗಾಗಿ ಈ ನೆರೆ ಸಮಸ್ಯೆಗೆ ಮೂಲದಿಂದ ಪರಿಹಾರ ಕಂಡುಕೊಳ್ಳಬೇಕಿದೆ. ಪ್ರವಾಹಕ್ಕೆ ಪ್ರಮುಖ ಕಾರಣ ಹೊಳೆ-ಹಳ್ಳಗಳು ವಿಪರೀತ ಒತ್ತುವರಿ ಆಗಿರುವುದು. ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಅದಕ್ಕಾಗಿ ಮೊದಲು ಎಲ್ಲ ಹೊಳೆ-ಹಳ್ಳಗಳ ಸಮೀಕ್ಷೆ ಮಾಡಿಸಿ, ನಕ್ಷೆ ತಯಾರಿಸಿ ಗಡಿ ಗುರುತಿಸಬೇಕಿದೆ. ಬಳಿಕ ಅದರಂತೆ ಅತಿಕ್ರಮಣ, ಹೂಳು, ಗಿಡಗಂಟೆಗಳನ್ನು ತೆರವುಗೊಳಿಸಿ ಇಕ್ಕೆಲದಲ್ಲಿ ಸಸಿ ನೆಟ್ಟು ಅರಣ್ಯ ಬೆಳೆಸಿ ಭೂಸವಕಳಿ ತಪ್ಪಿಸಬೇಕಿದೆ.

ಈಗಾಗಲೇ ಇಂಥ ಪ್ರಯೋಗವನ್ನು ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಅಲ್ಲಿನ ಹಿರೇಹಳ್ಳದಲ್ಲಿ ಮಾಡಿ ಯಶಸ್ವಿಯಾಗಿದ್ದಾರೆ. ಕಾವೇರಿ ನದಿ ಇಕ್ಕೆಲದಲ್ಲಿ ಸದ್ಗುರು ಜಗ್ಗಿ ವಾಸುದೇವ ಅವರು ಸಸಿ ನೆಡಲು ದೊಡ್ಡ ಆಂದೋಲನವನ್ನೇ ಹೂಡಿದ್ದಾರೆ. ಆ ಮಾದರಿ ಇಲ್ಲೂ ಪ್ರಯೋಗವಾಗಬೇಕು. ಅಪಾಯಕಾರಿ ಪ್ರವಾಹ ಉಕ್ಕೇರುವ ವಿಜಯಪುರದ ದೋಣಿ ನದಿ, ಧಾರವಾಡ ಜಿಲ್ಲೆಯ ಬೆಣ್ಣಿಹಳ್ಳ, ತುಪ್ಪರಿ ಹಳ್ಳಗಳ ನೀರನ್ನು ನೀರಾವರಿ ಮತ್ತು ಕುಡಿಯುವ ನೀರಿಗೆ ಬಳಸಲು ಜಲತಜ್ಞ ಪರಮಶಿವಯ್ಯ ಅವರು ನೀಡಿರುವ ವರದಿಯ ಅನುಷ್ಠಾನಕ್ಕೆ ಸರ್ಕಾರ ಈಗಲಾದರೂ ಮುಂದಾಗಬೇಕಿದೆ.

- ಮಲ್ಲಿಕಾರ್ಜುನ ಸಿದ್ದಣ್ಣವರ, ಹುಬ್ಬಳ್ಳಿ