ಬಿಜೆಪಿ ಗೆಲ್ಲಿಸಿದರೆ ಮಹಾರಾಷ್ಟ್ರಕ್ಕೆ ನೀರು: ಬಿಎಸ್‌ವೈ ಭರವಸೆ| ಬಿಎಸ್‌ವೈ ಹೇಳಿಕೆಗೆ ಕಾಂಗ್ರೆಸ್‌, ಕುಮಾರಸ್ವಾಮಿ ಆಕ್ರೋಶ| ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಯಡಿಯೂರಪ್ಪ| ನನ್ನ ಹೇಳಿಕೆಗೆ ಅಪಾರ್ಥ ಬೇಡ| ಅಲ್ಲಿಂದ 4 ಟಿಎಂಸಿ ನೀರು ಕೇಳಿದ್ದೇನೆ, ಗಡಿಗ್ರಾಮಕ್ಕೆ ನೀರು ಹರಿಸುತ್ತೇನೆ ಎಂದಿದ್ದೇನೆ: ಸಿಎಂ

ಬೆಂಗಳೂರು[ಅ.18]: ಬಿಜೆಪಿ ಗೆಲ್ಲಿಸಿದರೆ ಮಹಾರಾಷ್ಟ್ರದ ಗಡಿಗ್ರಾಮಗಳಿಗೆ ತುಬಚಿ ಮತ್ತು ಬಬಲೇಶ್ವರ ಏತ ನೀರಾವರಿ ಯೋಜನೆ ನೀರು ಹರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರ ವೇಳೆ ಭರವಸೆ ನೀಡಿದ್ದು, ಇದು ಕರ್ನಾಟಕದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌, ತಮ್ಮ ಹೇಳಿಕೆಗಾಗಿ ಮುಖ್ಯಮಂತ್ರಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ. ಏತನ್ಮಧ್ಯೆ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೂಡ ಯಡಿಯೂರಪ್ಪ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರ ಸಮ​ಸ್ಯೆ​ಗಿಂತ ಮಹದಾಯಿ ಸಮಸ್ಯೆ ದೊಡ್ಡದಾ ಎಂದ ಯತ್ನಾಳ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಂಗ್ಲಿ ಜಿಲ್ಲೆಯ ಜತ್‌ ಗ್ರಾಮದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಜತ್‌ ಗ್ರಾಮದಲ್ಲಿ ಸಾಕಷ್ಟುಪ್ರಮಾಣದಲ್ಲಿ ಕನ್ನಡ ಭಾಷಿಕರಿದ್ದಾರೆ. ಈಗ ಕರ್ನಾಟಕದ ತುಬಚಿ ಮತ್ತು ಬಬಲೇಶ್ವರ ಏತ ನೀರಾವರಿ ಯೋಜನೆ ಅಥಣಿಯ ಕೊಟ್ಟಗಲ್ಲಿ ಗ್ರಾಮಕ್ಕೆ ತಲುಪಿದ್ದು, ಅಲ್ಲಿಂದ ಜತ್‌ ಗ್ರಾಮ 8ರಿಂದ 10 ಕಿ.ಮೀ. ಅಷ್ಟೇ ದೂರದಲ್ಲಿದೆ. ಈ ಯೋಜನೆ ನೀರನ್ನು ಮಹಾರಾಷ್ಟ್ರದ ಗಡಿಯಲ್ಲಿರುವ ಬೋರಾ ನದಿಗೆ ಹರಿಸಿದರೆ ಗಡಿ ಭಾಗದ 30ರಿಂದ 40 ಗ್ರಾಮಗಳ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಅನುಕೂಲ ಆಗಲಿದೆ ಎಂದು ತಿಳಿದುಕೊಂಡಿದ್ದೇನೆ. ಈ ಕುರಿತು ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ, ಈ ಸಂಬಂಧ ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವೀಸ್‌ ಅವರ ಜತೆಗೂ ಮಾತುಕತೆ ನಡೆಸುತ್ತೇನೆ ಎಂದರು.

ನೀರಿನ ವಿಚಾರದಲ್ಲಿ ಭೇದಭಾವಮಾಡಲ್ಲ. ನೀರಿಲ್ಲದೆ ಬದುಕುವುದು ಸಾಧ್ಯವೂ ಇಲ್ಲ. ರೈತನ ಹೊಲಕ್ಕೆ ನೀರು ಸಿಗಬೇಕು, ರೈತನ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರಕಬೇಕು ಹಾಗೂ ರೈತರ ಉತ್ಪಾದನೆ ದುಪ್ಪಟ್ಟಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸುತ್ತೇನೆ. ಗಡಿಭಾಗದ ಈ ಗ್ರಾಮಗಳಿಗೆ ನೀರಿನ ವಿಚಾರದಲ್ಲಿ ಸಾಧ್ಯವಾದ ಅನುಕೂಲ ಮಾಡಿಕೊಡುತ್ತೇನೆ ಎಂದರು.

ನಮಗೆ ಯಾರಿಂದಲೂ ದೇಶಭಕ್ತಿಯ ಪ್ರಮಾಣ ಪತ್ರ ಬೇಕಿಲ್ಲ: ಮೋದಿಗೆ ಸಿಂಗ್ ತಿರುಗೇಟು!

ಅಪಾರ್ಥ ಬೇಡ?:

ತಮ್ಮ ಹೇಳಿಕೆ ಕುರಿತು ಕಾಂಗ್ರೆಸ್‌, ಜೆಡಿಎಸ್‌ನಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ನಂತರ ಕಲಬುರಗಿಯಲ್ಲಿ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಮಹಾರಾಷ್ಟ್ರ ಚುನಾವಣಾ ಪ್ರಚಾರದ ವೇಳೆ ನೀಡಿದ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ. ಬೇಸಿಗೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿಗೆ ಮಹಾರಾಷ್ಟ್ರದಿಂದ 4 ಟಿಎಂಸಿ ನೀರು ಬಿಡುವಂತೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅದಕ್ಕೆ ಬದಲಿಯಾಗಿ ನಮ್ಮಲ್ಲಿನ ಹೆಚ್ಚುವರಿ ನೀರು ಬಿಡುಗಡೆ ಮಾಡುವ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದೇನೆæ ಎಂದರು. ಇದೇ ವೇಳೆ, ನೀರಿನ ವಿಚಾರದಲ್ಲಿ ಜತೆಗೆ ಕೂತು ಚರ್ಚೆ ಮಾಡುವುದಾಗಿ ಹೇಳಿದ್ದೇನೆ ಅಷ್ಟೆಎಂದರು.

ಕಾಂಗ್ರೆಸ್‌ ಕಿಡಿ:

ಮಹಾರಾಷ್ಟ್ರದ ಗಡಿ ಜಿಲ್ಲೆಗಳಿಗೆ ನೀರು ಹರಿಸುವ ಯಡಿಯೂರಪ್ಪ ಅವರ ಭರವಸೆಗೆ ಕಾಂಗ್ರೆಸ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ರಾಜ್ಯದ ಹಿತ ಮರೆತು ಮತಗಳಿಗಾಗಿ ಮಹಾರಾಷ್ಟ್ರಕ್ಕೆ ನೀರು ಕೊಡುತ್ತೇವೆಂದು ಮುಖ್ಯಮಂತ್ರಿಗಳೇ ಹೇಳಿರುವುದು ರಾಜ್ಯಕ್ಕೆ ಮಾಡಿದ ದ್ರೋಹ. ಹೇಳಿಕೆ ವಾಪಸು ಪಡೆದು ಕೂಡಲೇ ಜನರ ಕ್ಷಮೆ ಯಾಚಿಸಬೇಕು ಆಗ್ರಹಿಸಿದೆ.