ಉತ್ತರ ಭಾರತಕ್ಕೀಗ ಹೊಸ ಅಡಕೆಯೇ ಬೇಕು!: ಮಾರುಕಟ್ಟೆಯಲ್ಲೀಗ ಹೊಸ ಟ್ರೆಂಡ್ ಶುರು
ಉತ್ತರ ಭಾರತದ ಅಡಕೆ ಮಾರುಕಟ್ಟೆಯಲ್ಲಿ ಈ ಬಾರಿ ಏಕಾಏಕಿ ಬದಲಾವಣೆಯ ಗಾಳಿ ಬೀಸತೊಡಗಿದೆ. ಅಡಕೆ ಖರೀದಿಯಲ್ಲಿ ಈಗ ಕಡಿಮೆ ದರಕ್ಕೆ ಖರೀದಿಸುವ ಖಯಾಲಿ ಶುರುವಾಗಿದೆ. ಉತ್ತರ ಭಾರತದ ಅಡಕೆ ಖರೀದಿದಾರರು ಅಡಕೆಯ ದರ ನೋಡಿ ಖರೀದಿಸುತ್ತಿದ್ದಾರೆ.
ಆತ್ಮಭೂಷಣ್
ಮಂಗಳೂರು (ಆ.28): ಉತ್ತರ ಭಾರತದ ಅಡಕೆ ಮಾರುಕಟ್ಟೆಯಲ್ಲಿ ಈ ಬಾರಿ ಏಕಾಏಕಿ ಬದಲಾವಣೆಯ ಗಾಳಿ ಬೀಸತೊಡಗಿದೆ. ಅಡಕೆ ಖರೀದಿಯಲ್ಲಿ ಈಗ ಕಡಿಮೆ ದರಕ್ಕೆ ಖರೀದಿಸುವ ಖಯಾಲಿ ಶುರುವಾಗಿದೆ. ಉತ್ತರ ಭಾರತದ ಅಡಕೆ ಖರೀದಿದಾರರು ಅಡಕೆಯ ದರ ನೋಡಿ ಖರೀದಿಸುತ್ತಿದ್ದಾರೆ. ಅಡಕೆ ಮಾರುಕಟ್ಟೆಯಲ್ಲಿ ಇಂಥದ್ದೊಂದು ಹೊಸ ಟ್ರೆಂಡ್ ಈಗ ಕಾಣಿಸಿಕೊಂಡಿದೆ. ಹಳೆ ಅಡಕೆ ಬದಲು ಹೊಸ ಅಡಕೆ ಖರೀದಿಯತ್ತ ಉತ್ತರ ಭಾರತದ ವ್ಯಾಪಾರಸ್ಥರು ಮುಖಮಾಡಿದ್ದಾರೆ.
ಅಡಕೆ ಮಾರುಕಟ್ಟೆಇತಿಹಾಸದಲ್ಲಿ ಇದುವರೆಗೆ ಇಂತಹ ಟ್ರೆಂಡ್ ಕಂಡಿಲ್ಲ. ಇದೇ ಮೊದಲ ಬಾರಿಗೆ ರಖಂ ವ್ಯಾಪಾರಸ್ಥರು ಕೂಡ ಗುಣಮಟ್ಟದ ಅಡಕೆ ಬದಲು ಕಡಿಮೆ ಕ್ರಯಕ್ಕೆ ಅಡಕೆ ಖರೀದಿಸುತ್ತಿದ್ದಾರೆ. ಈ ಬೆಳವಣಿಗೆ ಅಡಕೆ ಮಾರುಕಟ್ಟೆಮೇಲೆ ಯಾವ ರೀತಿಯ ಪರಿಣಾಮ ಬೀಳುತ್ತದೆ ಎಂದು ಈಗಲೇ ಹೇಳಲಾಗದು. ಆದರೂ ಭವಿಷ್ಯದಲ್ಲಿ ಗುಣಮಟ್ಟಕ್ಕೆ ಒತ್ತು ನೀಡುವ ಬದಲು ದರದ ಮುಖ ನೋಡಿ ಅಡಕೆ ಖರೀದಿಸುವ ನಿರ್ಧಾರಗಳು, ಬೆಳೆಗಾರರು, ಬೆಳೆಗಾರರ ಸಂಸ್ಥೆ ಹಾಗೂ ಮಾರುಕಟ್ಟೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಪಿಎಸ್‌ಐ ಮರು ಪರೀಕ್ಷೆ: ಸಿದ್ದರಾಮಯ್ಯ ಸರ್ಕಾರಕ್ಕೆ ಅಗ್ನಿಪರೀಕ್ಷೆ
ಗುಣಮಟ್ಟಬದಲು ಕಡಿಮೆ ಕ್ರಯ: ಕಳೆದ ಆರು ತಿಂಗಳಿಂದ ಕಡಿಮೆ ಕ್ರಯಕ್ಕೆ ಅಡಕೆ ಖರೀದಿಸುವ ಜಾಯಮಾನವನ್ನು ಉತ್ತರ ಭಾರತದ ಖರೀದಿದಾರರು ಬೆಳೆಸಿಕೊಂಡಿದ್ದಾರೆ. ಕಳೆದ ವರ್ಷ ದ.ಕ, ಕಾಸರಗೋಡು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಚಾಲಿ ಅಡಕೆ ದರಗಳ ಕಿಲೋ ನಡುವಿನ ವ್ಯತ್ಯಾಸ ಬರೋಬ್ಬರಿ 80 ರು. ವರೆಗೆ ಇತ್ತು. ಹೀಗಾಗಿ ಕಡಿಮೆ ಕ್ರಯಕ್ಕೆ ಅಡಕೆಯನ್ನು ರಖಂ ಆಗಿ ಖರೀದಿಸಿ ಪಾನ್ ವಹಿವಾಟಿಗೆ ಮಾರಾಟ ಮಾಡುತ್ತಿದ್ದರು. ಹೇಗೂ ಪಾನ್‌ಗೆ ಅಡಕೆ ಮಿಶ್ರಣ ಮಾಡುತ್ತಾರೆ. ಹಾಗಿರುವಾಗ ಯಾವ ಅಡಕೆಯಾದರೂ ತೊಂದರೆ ಇಲ್ಲ, ಕಡಿಮೆ ಕ್ರಯದ ಅಡಕೆಯಾದರೆ, ಇಲ್ಲಿಂದ ಖರೀದಿಸಿ, ಅಲ್ಲಿ ಅಧಿಕ ಮೊತ್ತಕ್ಕೆ ಮಾರಾಟ ಮಾಡಲು ಸುಲಭ. ಈ ದೂರಾಲೋಚನೆಯಿಂದ ಉತ್ತರಭಾರತದ ವ್ಯಾಪಾರಿಗಳು ಇಲ್ಲಿಂದ ಕಡಿಮೆ ಕ್ರಯಕ್ಕೆ ಅಡಕೆ ಖರೀದಿಸುತ್ತಿದ್ದಾರೆ.
ಅಡಕೆ ದಾಸ್ತಾನು ಇಲ್ಲ: ಉತ್ತರ ಭಾರತದ ರಖಂ ವ್ಯಾಪಾರಿಗಳು ಅಡಕೆಯನ್ನು ಈಗ ಹಿಂದಿನಂತೆ ದಾಸ್ತಾನು ಇರಿಸುವುದಿಲ್ಲ. ಆಗಿಂದಾಗೆ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಾರೆ. ಈ ವ್ಯಾಪಾರಸ್ಥರ ಬದಲಾದ ಮಾರುಕಟ್ಟೆಧೋರಣೆಯಿಂದಾಗಿ ಅಡಕೆ ಬೆಳೆಗಾರರ ಸಹಕಾರ ಸಂಸ್ಥೆ ಕ್ಯಾಂಪ್ಕೋದಲ್ಲಿ ಕೂಡ ಅಡಕೆ ದಾಸ್ತಾನು ಇಲ್ಲ. ಮಾರುಕಟ್ಟೆಗೆ ಬರುವ ಅಡಕೆ ಬೆಳೆಗಾರರಿಂದ ಖರೀದಿಸಿದ ಕೂಡಲೇ ರಖಂ ಮಾರಾಟವಾಗುತ್ತದೆ. ಕ್ಯಾಂಪ್ಕೋದ ಅಡಕೆ ಮುಖ್ಯವಾಗಿ ಗುಜರಾತ್ ಮಾರುಕಟ್ಟೆಹೊಂದಿದೆ. ಅಲ್ಲದೆ ಬಿಹಾರ, ಉತ್ತರ ಪ್ರದೇಶದಲ್ಲೂ ಇಲ್ಲಿನ ಅಡಕೆಗೆ ಉತ್ತಮ ದರ ಇದೆ. ಆದರೆ ಇವರೆಲ್ಲರು ಈಗ ಗುಣಮಟ್ಟಬದಲು ಕಡಿಮೆ ದರವನ್ನೇ ಖರೀದಿಗೆ ಮಾನದಂಡ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಮಾರುಕಟ್ಟೆಅಧಿಕಾರಿಗಳು.
ಹೊಸ ಅಡಕೆಗೆ ಬೇಡಿಕೆ: ಕರಾವಳಿ, ಬಯಲುಸೀಮೆ, ಉತ್ತರ ಕರ್ನಾಟಕಗಳಲ್ಲಿ ಅಡಕೆ ಹಳತು ಎಂದು ಪರಿಗಣಿಸಲ್ಪಡುವುದು ಅಕ್ಟೋಬರ್ ವೇಳೆಗೆ. ಈಗ ಹಳತು ಅಡಕೆಗಿಂತ ಹೊಸ ಅಡಕೆಗೆ ಬೇಡಿಕೆ ಜಾಸ್ತಿ. ಆದರೆ ಬೆಳೆಗಾರರು ಹೊಸ ಅಡಕೆಯನ್ನು ಮಾರುಕಟ್ಟೆಗೆ ಬಿಡುತ್ತಿಲ್ಲ. ಧಾರಣೆ ಏರಿಕೆಯನ್ನು ಗಮನಿಸುತ್ತಿದ್ದಾರೆ. ಆದರೆ ಉತ್ತರ ಭಾರತದ ವ್ಯಾಪಾರಿಗಳಿಗೆ ಈಗ ಹೊಸ ಅಡಕೆ ಬೇಕು. ಹಾಗಾಗಿ ಮುಂದಿನ ದಿನಗಳಲ್ಲಿ ಹೊಸ ಅಡಕೆ ಧಾರಣೆ ಇನ್ನಷ್ಟುಏರಿಕೆಯಾಗುವ ನಿರೀಕ್ಷೆ ಹೇಳಲಾಗುತ್ತಿದೆ. ಪ್ರಸಕ್ತ ಕ್ಯಾಂಪ್ಕೋದಲ್ಲಿ ಹೊಸ ಅಡಕೆ ಕಿಲೋಗೆ 450 ರು. ಇದ್ದು, ಹಳೆ ಅಡಕೆಗೆ ಕೇಜಿಗೆ 480 ರು. ಇದೆ. ಅಕ್ಟೋಬರ್ ವೇಳೆಗೆ ಹೊಸ ಅಡಕೆ ಕಿಲೋಗೆ 470 ರು. ವರೆಗೆ ಬರಬಹುದು ಎಂಬುದು ಮಾರುಕಟ್ಟೆತಜ್ಞರ ಲೆಕ್ಕಾಚಾರ. ಆದರೆ ಉತ್ತರ ಭಾರತದ ಮಾರುಕಟ್ಟೆಯ ಬದಲಾದ ಪರಿಸ್ಥಿತಿಯನ್ನು ಗಮನಿಸಿದರೆ ಭವಿಷ್ಯದಲ್ಲಿ ಹಳೆ ಅಡಕೆಗೆ ಇನ್ನಷ್ಟುಧಾರಣೆ ಏರಿಕೆಯಾಗುವ ಸಂಭವ ಕಡಿಮೆ ಎನ್ನುತ್ತಾರೆ ತಜ್ಞರು.
ಸಿದ್ದರಾಮಯ್ಯ ಸರ್ಕಾರಕ್ಕೆ ಯಶಸ್ವಿ 100 ದಿನ ಸಂಭ್ರಮ: ನುಡಿದಂತೆ ನಡೆದಿದ್ದೇವೆಂದ ಸಿಎಂ
ಹೊಸ ಅಡಕೆಗೆ ಉತ್ತರ ಭಾರತದ ವ್ಯಾಪಾರಸ್ಥರಿಂದ ಬಹುಬೇಡಿಕೆಯ ಹೊಸ ಟ್ರೆಂಡ್ ಶುರುವಾದ್ದು ನಿಜ. ಇದು ಸ್ವಲ್ಪ ದಿನ ವರೆಗೆ ಮುಂದುವರಿಯಬಹುದು. ಈ ಧೋರಣೆ ಮುಂದೆ ಸರಿಯಾಗಲೇ ಬೇಕು. ಕೇಂದ್ರ ವಿದೇಶಾಂಗ ಇಲಾಖೆಯ ಬಿಗು ನೀತಿಯಿಂದಾಗಿ ಪ್ರಸಕ್ತ ವಿದೇಶದಿಂದ ಅಡಕೆ ಆಮದು ನಿರ್ಬಂಧವಾಗಿದೆ. ಭವಿಷ್ಯದಲ್ಲಿ ಅಡಕೆಗೆ ಇನ್ನಷ್ಟುದರ ಏರಿಕೆಯ ನಿರೀಕ್ಷೆ ಇದೆ.
-ಕಿಶೋರ್ ಕುಮಾರ್ ಕೊಡ್ಗಿ, ಅಧ್ಯಕ್ಷರು, ಕ್ಯಾಂಪ್ಕೋ ಮಂಗಳೂರು