ಸಿದ್ದರಾಮಯ್ಯ ಸರ್ಕಾರಕ್ಕೆ ಯಶಸ್ವಿ 100 ದಿನ ಸಂಭ್ರಮ: ನುಡಿದಂತೆ ನಡೆದಿದ್ದೇವೆಂದ ಸಿಎಂ

ಎರಡನೇ ಅವಧಿಗೆ ಮುಖ್ಯಮಂತ್ರಿ ಗಾದಿಯೇರಿರುವ ಸಿದ್ದರಾಮಯ್ಯ ಅವರ ಸರ್ಕಾರ ಭಾನುವಾರಕ್ಕೆ ಶತ ದಿನ ಪೂರೈಸಿದೆ. ಕಳೆದ ಮೇ 20ರಂದು ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಹೊರೆ ಹೊತ್ತು ಮುನ್ನಡೆದಿದೆ. 

A successful 100 day celebration for the Siddaramaiah government gvd

ಬೆಂಗಳೂರು (ಆ.28): ಎರಡನೇ ಅವಧಿಗೆ ಮುಖ್ಯಮಂತ್ರಿ ಗಾದಿಯೇರಿರುವ ಸಿದ್ದರಾಮಯ್ಯ ಅವರ ಸರ್ಕಾರ ಭಾನುವಾರಕ್ಕೆ ಶತ ದಿನ ಪೂರೈಸಿದೆ. ಕಳೆದ ಮೇ 20ರಂದು ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಹೊರೆ ಹೊತ್ತು ಮುನ್ನಡೆದಿದೆ. ತಮ್ಮ ಈ 100 ದಿನಗಳ ಆಡಳಿತದ ಬಗ್ಗೆ ‘ನುಡಿದಂತೆ ನಡೆಯುತ್ತಿದ್ದೇವೆ, ಗ್ಯಾರಂಟಿ ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಜತೆಗೆ ದಾರ್ಶನಿಕರು ತೋರಿದ ಹಾದಿಯಲ್ಲಿ ಅಭಿವೃದ್ಧಿ ರಥ ಮುನ್ನಡೆಸುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, ‘ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿ ನಮ್ಮ ಸರ್ಕಾರ ಸೆಂಚುರಿ ಬಾರಿಸಿ ಮುನ್ನುಗುತ್ತಿದೆ. ನಮ್ಮ ಸರ್ಕಾರದ ಕೆಲಸಗಳು ಜನರ ಕಣ್ಣಿಗೆ ಕಾಣುತ್ತಿವೆ. ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ದೇಶದ ಯಾವ ರಾಜ್ಯ ಸರ್ಕಾರ ಇಷ್ಟುಕೆಲಸ ಮಾಡಿದೆ ಹೇಳಿ?’ ಎಂದು ಪ್ರಶ್ನಿಸುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೂ ಸರ್ಕಾರದ ಶತದಿನಗಳ ಸಾಧನೆಯನ್ನು ಸಮರ್ಥಿಸಿಕೊಂಡಿದ್ದಾರೆ.

40% ಕಮಿಷನ್‌ ತನಿಖೆ ಹಿಂದೆ ರಾಜಕೀಯ ಸೇಡು: ಬೊಮ್ಮಾಯಿ ಕಿಡಿ

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮೊದಲ ನೂರು ದಿನಗಳ ಆಡಳಿತದಲ್ಲಿ ನುಡಿದಂತೆ ನಡೆಯುತ್ತಿದ್ದೇವೆ. ಗ್ಯಾರಂಟಿ ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಜತೆಗೆ ಬುದ್ಧ, ಬಸವ, ಅಂಬೇಡ್ಕರ್‌, ಕುವೆಂಪು, ಕನಕದಾಸ ಹಾಗೂ ನಾರಾಯಣ ಗುರುಗಳಂತಹ ದಾರ್ಶನಿಕರು ತೋರಿದ ಸಮಾನತೆಯ ಹಾದಿಯಲ್ಲಿ ನಾಡನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಅಭಿವೃದ್ಧಿ ರಥ ಮುನ್ನಡೆಸುವ ನಮ್ಮೊಂದಿಗೆ ನಿಮ್ಮೆಲ್ಲರ ಸಹಕಾರವಿರಲಿ’ ಎಂದು ಮನವಿ ಮಾಡಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಜನರು ನಮ್ಮ ಮೇಲೆ ನಂಬಿಕೆಯಿಟ್ಟು 135 ಸ್ಥಾನ ನೀಡಿದ್ದಾರೆ. ಜನರು ನೀಡಿರುವ ಸುಭದ್ರ ಸರ್ಕಾರದ ಅವಕಾಶ ಬಳಸಿಕೊಂಡು ಅವರ ನಿರೀಕ್ಷೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಸರ್ಕಾರದ ಕಾರ್ಯಕ್ರಮಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪಬೇಕೆಂಬ ಆಶಯದೊಂದಿಗೆ ಆರಂಭಿಸಿರುವ ನಮ್ಮ ಪಯಣಕ್ಕಿಂದು ಶತಕದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ನಮ್ಮ ಬೆಂಬಲವಾಗಿ ನಿಂತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

1,000 ಕೋಟಿ ಮೌಲ್ಯದ ಉಚಿತ ಪ್ರಯಾಣ: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಶಕ್ತಿ ಯೋಜನೆ ರೂಪಿಸಲಾಯಿತು. ಇದೀಗ ನಿತ್ಯ 50 ಲಕ್ಷಕ್ಕೂ ಹೆಚ್ಚು ಮಹಿಳೆಯರು, ವಿದ್ಯಾರ್ಥಿನಿಯರು ಉಚಿತವಾಗಿ ಸಂಚರಿಸುತ್ತಿದ್ದು, ಈವರೆಗೆ 43 ಕೋಟಿ ಬಾರಿ ಮಹಿಳೆಯರು ಪ್ರಯಾಣಿಸಿದ್ದಾರೆ. ಒಟ್ಟು 1000 ಕೋಟಿ ರು. ಮೌಲ್ಯದ ಉಚಿತ ಪ್ರಯಾಣ ಮಾಡಿದ್ದಾರೆ. ನಾಡಿನ ಮಹಿಳೆಯರ ಪ್ರಶಂಸೆ ಮಾತುಗಳು ನಮ್ಮ ಸಫಲತೆಗೆ ಹಿಡಿದ ಕನ್ನಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬೆಲೆಯೇರಿಕೆ ಕತ್ತಲು ಸರಿಸಲು ಗೃಹಜ್ಯೋತಿ: ಬೆಲೆಯೇರಿಕೆಯ ಕತ್ತಲು ಸರಿಸಿ ಭರವಸೆಯ ಬೆಳಕು ಹರಿಸುವ ಆಶಯದೊಂದಿಗೆ ಜಾರಿಗೆ ತಂದಿರುವ ಗೃಹಜ್ಯೋತಿ ಯೋಜನೆಯಡಿ 1.48 ಕೋಟಿ ಕುಟುಂಬಗಳು 200 ಯುನಿಟ್‌ವರೆಗಿನ ಉಚಿತ ವಿದ್ಯುತ್ತನ್ನು ಯಶಸ್ವಿಯಾಗಿ ಪಡೆಯುತ್ತಿವೆ. ಹಸಿವುಮುಕ್ತ ಕರ್ನಾಟಕ ನಿರ್ಮಾಣದ ಸಂಕಲ್ಪದೊಂದಿಗೆ ನಾವು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಡಿ ನಾಡಿನ 1.28 ಕೋಟಿ ಬಡ ಕುಟುಂಬಗಳ ಪ್ರತಿ ವ್ಯಕ್ತಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲು ಉದ್ದೇಶಿಸಲಾಗಿದೆ. ಸದ್ಯ ತಲಾ 5 ಕೆ.ಜಿ. ಅಕ್ಕಿ ಹಾಗೂ ಇನ್ನುಳಿದ 5 ಕೆ.ಜಿ. ಅಕ್ಕಿಯ ಬದಲಿಗೆ 170 ರು.ಗಳನ್ನು ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಸೆಂಚುರಿ ಬಾರಿಸಿ ಮುನ್ನುಗ್ಗುತ್ತಿದ್ದೇವೆ-ಡಿಕೆಶಿ: ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ‘ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಸೆಂಚುರಿ ಬಾರಿಸಿ ಮುನ್ನುಗುತ್ತಿದೆ. ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ದೇಶದ ಯಾವ ರಾಜ್ಯ ಸರ್ಕಾರ ಇಷ್ಟುಕೆಲಸ ಮಾಡಿದೆ ಹೇಳಿ?’ ಎಂದು ಪ್ರಶ್ನಿಸಿದ್ದಾರೆ. ನಾವು ಕೊಟ್ಟಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇವೆ. ಇದು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಕಾರ್ಯವೈಖರಿ ಎಂದೂ ಹೇಳಿದ್ದಾರೆ.

ಆ.30ರ ಬಳಿಕ ಖಾಸಗಿ ಸಾರಿಗೆ ಸಂಸ್ಥೆಗಳಿಂದ ಬಂದ್‌?: ಸಿಎಂ ಸಿದ್ದುಗೆ 3 ದಿನಗಳ ಗಡುವು

ನಮ್ಮ ಸರ್ಕಾರ ನೂರು ದಿನಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರು ರಾಜ್ಯದೆಲ್ಲೆಡೆ ಉಚಿತವಾಗಿ ಬಸ್‌ ಪ್ರಯಾಣ ಮಾಡುವಂತೆ ನೋಡಿಕೊಂಡಿದೆ. ಗೃಹಲಕ್ಷ್ಮೇ ಯೋಜನೆಯಡಿ 1.10 ಕೋಟಿ ಮನೆ ಯಜಮಾನಿಯರಿಗೆ ಆ.30ರಿಂದ ಪ್ರತಿ ತಿಂಗಳು 2 ಸಾವಿರ ರು. ಹಣ ತಲುಪಲಿದೆ. 1.36 ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ತಲುಪುತ್ತಿದೆ. 1.41 ಕೋಟಿ ಗ್ರಾಹಕರಿಗೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್‌ ಸಿಗುತ್ತಿದೆ. ಡಿಸೆಂಬರ್‌ ವೇಳೆಗೆ ನಿರುದ್ಯೋಗಿ ಯುವಕರಿಗೆ ಭತ್ಯೆ ಯೋಜನೆ ಜಾರಿ ಮಾಡುತ್ತೇವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios