ಬೆಂಗಳೂರು :  ಮೇಲ್ಮೈ ಸುಳಿಗಾಳಿ ಪ್ರಭಾವದಿಂದ ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಬುಧವಾರ ಚಿಕ್ಕಮಗಳೂರು ತಾಲೂಕಿನಲ್ಲಿ ಸುಮಾರು 45 ಮಿ.ಮೀ.ಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಕೊಡಗು, ಉಡುಪಿ, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾದ ವರದಿಯಾಗಿದೆ. 

ಮುಂದಿನ ಎರಡು ದಿನ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ. ಮೋಡ ಕವಿದ ವಾತಾವರಣ ಇರಲಿದ್ದು, 20ರಿಂದ 25 ಮಿ.ಮೀ.ನಷ್ಟುಮಳೆಯಾಗುವ ಸಾಧ್ಯತೆ ಇದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನೀಲ್‌ ಗವಾಸ್ಕರ್‌ ತಿಳಿಸಿದ್ದಾರೆ.

ಬೆಳಗಾವಿ, ಹಾಸನ, ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ ಸೇರಿದಂತೆ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾದ ವರದಿಯಾಗಿದೆ. ಗುರವಾರವೂ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.

ಕಾಫಿ ಬೆಳೆಗೆ ಹಾನಿ: ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಮೂರ್ನಾಡು ಸೇರಿದಂತೆ ವಿವಿಧೆಡೆ ಸಂಜೆ ವೇಳೆ ಸಾಧಾರಣ ಮಳೆ ಸುರಿಯಿತು. ಚಿಕ್ಕಮಗಳೂರು ಜಿಲ್ಲೆಯ ಮತ್ತು ಮೂಡಿಗೆರೆ ತಾಲೂಕುಗಳಲ್ಲೂ ಸಂದಜೆ ವೇಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಮಳೆಯಾಯಿತು.

ಈ ಎರಡೂ ಜಿಲ್ಲೆಗಳಲ್ಲಿ ಇದೀಗ ಕಾಫಿ ಕೊಯ್ಲಾಗುತ್ತಿದ್ದು, ಫಸಲು ಕಣದಲ್ಲಿ ಒಣಗುತ್ತಿದೆ. ಆದರೆ ಮಳೆ ಬಂದಿರುವುದರಿಂದ ಮಳೆಗೆ ಒದ್ದೆಯಾದ ಕಾಫಿ ಬೀಜಗಳನ್ನು ಮತ್ತೆ ಒಣಗಿಸಬೇಕಾದ ಪರಿಸ್ಥಿತಿ ರೈತರರಿಗೆ ಎದುರಾಗಿದೆ. ಅಲ್ಲದೆ ಮಳೆಯಿಂದ ಒಂದು ವಾರದಲ್ಲಿ ಕಾಫಿ ಹೂವು ಅಕಾಲಿಕವಾಗಿ ಅರಳುವ ಸಾಧ್ಯತೆಗಳಿವೆ.