Asianet Suvarna News Asianet Suvarna News

90 ದಿನದಲ್ಲಿ ಉದ್ದಿಮೆದಾರರ ಮನೆ ಬಾಗಿಲಿಗೆ ಎನ್‍ಒಸಿ ಸೌಲಭ್ಯ ಜಾರಿ

90 ದಿನದಲ್ಲಿ ಉದ್ದಿಮೆದಾರರ ಮನೆ ಬಾಗಿಲಿಗೆ ಎನ್‍ಒಸಿ ಸೌಲಭ್ಯ ಜಾರಿ ಮಾಡಲಾಗುವುದು ಎಂದು  ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಘೋಷಣೆ ಮಾಡಿದ್ದಾರೆ.

NOC Coming to businessman Home Door In 90 Days Says Minister Nirani rbj
Author
Bengaluru, First Published Mar 17, 2021, 6:07 PM IST

ಬೆಂಗಳೂರು, (ಮಾ.17): ಕಂದಾಯ, ಸಾರಿಗೆ, ಅರಣ್ಯ ಮತ್ತು ಪರಿಸರ ಇಲಾಖೆ ಒಳಗೊಂಡ ಏಕಗವಾಕ್ಷಿ ಪದ್ಧತಿಯನ್ನು ಜಾರಿಗೆ ತಂದು ಉದ್ಯಮಿಗಳ ಮನೆ ಬಾಗಿಲಿಗೆ 90 ದಿನಗಳಲ್ಲಿ ಎನ್‍ಒಸಿ  (ನಿರಪೇಕ್ಷಣ ಪತ್ರ) ತಲುಪಿಸುವ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ  ಸಚಿವ ಮುರುಗೇಶ್ ಆರ್.ನಿರಾಣಿ ಅವರು ಘೋಷಣೆ ಮಾಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ಸ್ ಉದ್ಯಮಿಗಳಿಗೆ ಹಮ್ಮಿಕೊಂಡಿದ್ದ ಸುರಕ್ಷತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಕಲ್ಲುಕ್ವಾರಿ ಮತ್ತು ಗಣಿಗಾರಿಕೆ ನಡೆಸುವ ಉದ್ಯಮಿಗಳಿಗೆ ಅನುಕೂಲವಾಗುವಂತೆ ನಾಲ್ಕು ಇಲಾಖೆಗಳನ್ನು ಒಳಗೊಂಡ  ಏಕಗವಾಕ್ಷಿ ಪದ್ಧತಿಯನ್ನು ಜಾರಿ ಮಾಡಿ ಅರ್ಜಿ ಸಲ್ಲಿಸಿದ 90 ದಿನದೊಳಗೆ ಉದ್ಯಮಿದಾರರ ಮನೆ ಬಾಗಿಲಿಗೆ ಇಲಾಖೆ ವತಿಯಿಂದಲೇ ಎನ್‍ಒಸಿ ಪತ್ರಗಳನ್ನು ತಲುಪಿಸುವ ವ್ಯವಸ್ಥೆ ಜಾರಿ ಮಾಡಲಿದ್ದೇವೆ ಎಂದು ಪ್ರಕಟಿಸಿದರು.

ರಾಜ್ಯದಲ್ಲಿ ಶೀಘ್ರ ಹೊಸ ಮೈನಿಂಗ್‌ ಯೋಜನೆ: ಸಚಿವ ಮುರುಗೇಶ ನಿರಾಣಿ

ಉದ್ಯಮೆದಾರರಿ ಇಲಾಖೆಯಿಂದ ಇಲಾಖೆಗೆ ಅಲೆಯುವುದನ್ನು ತಪ್ಪಿಸಲು  ಕರಾವಳಿ ಭಾಗದಲ್ಲಿ ಪ್ರತ್ಯೇಕವಾಗಿ ಮಂಗಳೂರಿನಲ್ಲಿ ಹಾಗೂ ರಾಜ್ಯದ ನಾಲ್ಕು ಕಂದಾಯ ಭಾಗಗಳಲ್ಲಿ ಗಣಿ ಅದಾಲ್ ನಡೆಸಲಾಗುವುದು. ಇದರಿಂದ ಸ್ಥಳದಲ್ಲಿ ಉದ್ಯಮಿದಾರರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜನಸ್ನೇಹಿ ಹಾಗೂ ಜನಪರವಾಗಿ ಇರಬೇಕೆಂಬ ಗುರಿ ಇಟ್ಟುಕೊಂಡಿದೆ. 24/7 ಕೆಲಸ ಮಾಡಬೇಕು. ಉದ್ಯಮಿದಾರರಿಗೆ ಯಾವುದೇ ರೀತಿಯ ಕಾನೂನಿನ ತೊಡಕು ಉಂಟಾಗದಂತೆ ಸರಳೀಕರಣವಾಗಿ ಉದ್ದಿಮೆ ನಡೆಸಲು ವೇದಿಕೆ ಕಲ್ಪಿಸಿಕೊಡುವುದು ನಮ್ಮ ಮುಖ್ಯ ಗುರಿ ಎಂದರು.

 ಏಕಕಂತು ತಿರುವಳಿ ಯೋಜನೆ 
ಉದ್ದಿಮೆದಾರರಿಗೆ ಪ್ರಸ್ತುತ ಐದುಪಟ್ಟು ದಂಡ ವಿಧಿಸುವ ನಿಯಮ ಇಲಾಖೆಯಲ್ಲಿದೆ. ಸುಮಾರು ₹ 6700ಕೋಟಿ ರಾಜಸ್ವ ಸರ್ಕಾರಕ್ಕೆ ಬರಬೇಕಾಗಿದೆ. ಇನ್ನು ಮುಂದೆ ಏಕಕಂತು ತಿರುವಳಿ ಯೋಜನೆ (ಒನ್ ಟೈಮ್ ಸಟ್ಲುಮೆಂಟ್ ಸ್ಕೀಮ್) ಪ್ರಾರಂಭಿಸಲಾಗುವುದು. 

ಬಹುದಿನಗಳ ಬೇಡಿಕೆಯಂತೆ ಜಿಲ್ಲಾ ಗಣಿ ನಿಧಿ (ಡಿಎಂಎಫ್) ಪ್ರಸ್ತುತ ಶೇ.30ರಷ್ಟಿದೆ. ಇದನ್ನು ಶೇ.10ಕ್ಕೆ ಇಳಿಕೆ ಮಾಡಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಡುವುದಾಗಿ ತಿಳಿಸಿದರು.

ಉದ್ದಿಮೆದಾರರು ರಾಜಸ್ವ ಹಾಗೂ ಜಿಎಸ್‍ಟಿ ಕಟ್ಟುತ್ತಾರೆ. ಇದರಿಂದಲೇ ಕೋಟ್ಯಂತರ ರೂ. ತೆರಿಗೆ ಸರ್ಕಾರಕ್ಕೆ ಪಾವತಿಯಾಗುತ್ತದೆ. ನಿಮಗೆ ಅನುಕೂಲ ಕಲ್ಪಿಸಿಕೊಟ್ಟರೆ ಉದ್ದಿಮೆ ಸುಲಭವಾಗಿ ನಡೆಯಲಿದೆ ಎಂದು ಹೇಳಿದರು.

 ಜನಸ್ನೇಹಿ ನೀತಿ 
 ಶೀಘ್ರದಲ್ಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆವತಿಯಿಂದ ಜನಪರವಾದ ಹಾಗೂ ಜನ ಸ್ನೇಹಿ ಗಣಿ ನೀತಿಯನ್ನು ಜಾರಿ ಮಾಡಲಿದ್ದೇವೆ. ಇದರಲ್ಲಿ ನಿಮ್ಮ ಪ್ರತಿನಿಧಿಗಳನ್ನು ಸೇರ್ಪಡೆ ಮಾಡಿಕೊಳ್ಳುವುದಾಗಿ ತಿಳಿಸಿದರು.

ದೇಶಕ್ಕೆ ಮಾದರಿಯಾದ ಗಣಿ ನೀತಿಯನ್ನು ಜಾರಿ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಕರ್ನಾಟಕದ ನೀತಿಯನ್ನು ಬೇರೆ ರಾಜ್ಯಗಳು ಮಾದರಿಯಾಗಿಟ್ಟುಕೊಳ್ಳಬೇಕು. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತರುವುದಾಗಿ ಆಶ್ವಾಸನೆ ನೀಡಿದರು.
ನಾನೂ ಕೂಡ ಮೂಲತಃ ಉದ್ಯಮಿಯಾಗಿದ್ದು, ಉದ್ಯಮಿದಾರರ ಸಮಸ್ಯೆಗಳು ಏನೆಂಬುದರ ಬಗ್ಗೆ ಅರಿವಿದೆ. ನೀವು ಮುಂದಿಟ್ಟಿರುವ ಬೇಡಿಕೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಗೌರವಯುತವಾಗಿ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವಾಗ್ದಾನ ಮಾಡಿದರು.

ನಾನು 20-25ವರ್ಷಗಳ ಹಿಂದೆ ಸಣ್ಣ ಉದ್ಯಮಿಯಾಗಿದ್ದೆ. ಅಂದು ನನ್ನ ಬಳಿ ಹೆಚ್ಚಿನ ಹಣಕಾಸು ಇರಲಿಲ್ಲ. ಇಂದು ಏಷ್ಯಾದಲ್ಲೇ ಅತಿ ದೊಡ್ಡ ಸಕ್ಕರೆ ಕಾರ್ಖಾನೆಯನ್ನು ನಾನು ನಡೆಸುತ್ತಿದ್ದೇನೆ. ಇದಕ್ಕೆ ನನ್ನ ಪರಿಶ್ರಮ ಹಾಗೂ ಸಾಧಿಸಬೇಕೆಂಬ ಗುರಿ ಇದ್ದುದ್ದರಿಂದಲೇ ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

ಸಕ್ಕರೆ ಕಾರ್ಖಾನೆ ಜತೆಗೆ 300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ. ಅಲ್ಲದೆ ಸಹಕಾರ ಕ್ಷೇತ್ರದಲ್ಲೂ ಬ್ಯಾಂಕಿಂಗ್ ಸೇವೆ ಒದಗಿಸುತ್ತಿದ್ದೇವೆ. ಎಥಿನಾಲ್, ಸಿಮೆಂಟ್‍ಉತ್ಪಾದನೆ ಸೇರಿದಂತೆ ವಾರ್ಷಿಕ 5ಸಾವಿರ  ಕೋಟಿ ವಹಿವಾಟು ನಡೆಸುತ್ತಿದ್ದೇವೆ  ಎಂದು ನಿರಾಣಿ ಹೇಳಿದರು.

ಇತ್ತೀಚೆಗೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ನಮ್ಮ ಕಾರ್ಖಾನೆ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದರು. ನಮ್ಮ ಫೌಂಡೇಶನ್ ಬೆಳದು ಬಂದ ಹಾದಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು ಎಂದರು.

 ಕಟ್ಟುನಿಟ್ಡಿನ ಬಿಗಿ ಕ್ರಮ 
ಇಲಾಖೆಯಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನುತೆಗೆದುಕೊಂಡಿದ್ದೇವೆ. ಶಿವಮೊಗ್ಗದ ಹುಣಸೋಡು, ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಬಳಿ ನಡೆದ ಘಟನೆಯ ನಂತರ ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ವಿವರಿಸಿದರು.

ಈ ಎರಡು ಘಟನೆ ನಡೆದ ನಂತರ ವಿರೋಧ ಪಕ್ಷದವರು ನನಗೆ ಮಾಲೀಕರನ್ನು ಬಂಧಿಸುವಂತೆ ಒತ್ತಡ ಹಾಕಿದರು. ಇದು ಮಾಲೀಕರಿಂದ ಪ್ರಮಾದವಾಗಿಲ್ಲ ಎಂದು ನಾನು ಮನವರಿಕೆ ಮಾಡಿಕೊಟ್ಟೆ. ಸ್ಪೋಟಕಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವಾಗ ಉಂಟಾದ ಅತಾಚುರ್ಯದಿಂದ ಇದು ಸಂಭವಿಸಿತು. ಮುಂದೆ ಈ ರೀತಿ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಹೇಳಿದರು.

ಮಾಲೀಕರು ಬಂಡವಾಳ ಹೂಡಿ ಉದ್ದಿಮೆ ಆರಂಭಿಸುತ್ತಾರೆ. ಅವರ ಮೇಲೆ ಕ್ರಮ ಜರುಗಿಸಿದರೆ ಪರಿಣಾಮ ಕ್ರಷರ್‍ಗಳು ನಿಂತು ಹೋಗುತ್ತವೆ. ಬ್ಯಾಂಕ್‍ನಲ್ಲಿ ಪಡೆದ ಸಾಲದ ಮೇಲಿನ ಬಡ್ಡಿ ಹೆಚ್ಚಾಗುತ್ತದೆ. ಕಾರ್ಮಿಕರಿಗೆ ಕೆಲಸ ಇಲ್ಲದಂತಾಗುತ್ತದೆ. ಇದರಿಂದ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಉಪಾಧ್ಯಕ್ಷರಾದ ಎಸ್‌ ದತ್ತಾತ್ರೀ, ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಅಸೋಸಿಯೇಷನ್ಸ್  ಅಧ್ಯಕ್ಷರಾದ ಎಸ್‌ ಸಂಜೀವ ಹಟ್ಟಿಹೊಳಿ, ಗಣಿ ಸುರಕ್ಷತಾ ಮಹಾನಿದೇರ್ಶಕರಾದ  ಮುರಳಿಧರ್,( ಬೆಂಗಳೂರು ವಲಯ),ಶ್ಯಾಮ್ ಸುಂದರ್ ಸೋನಿ ( ಗೋವಾ ವಲಯ) ಹಾಗೂ ಉಮೇಶ್ ಎಂ.ಸಾವರ್ಕರ್ (ಬಳ್ಳಾರಿ ವಲಯ) ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Follow Us:
Download App:
  • android
  • ios