ಸಂತೋಷ್ ಪಾಟೀಲ್ ಆತ್ಮಹತ್ಯೆ ಬಳಿಕ ಎಚ್ಚೆತ್ತ, ಸರ್ಕಾರ, ಅಧಿಕಾರಿಗಳಿಗೆ ಮಹತ್ವದ ಸೂಚನೆ ಕೊಟ್ಟ ಸಿಎಂ
* ಸಂತೋಷ್ ಪಾಟೀಲ್ ಆತ್ಮಹತ್ಯೆ ಬಳಿಕ ಎಚ್ಚೆತ್ತ, ಸರ್ಕಾರ
* ಮೌಖಿಕ ಆದೇಶದ ಮೇರೆಗೆ ಕಾಮಗಾರಿ ಮಾಡಬಾರದು
* ಅಧಿಕಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ
ವರದಿ: ರಾಜೇಶ್ ಕಾಮತ್
ಶಿವಮೊಗ್ಗ, (ಏ.20): ಯಾವುದೇ ವರ್ಕ್ ಆರ್ಡರ್ ಇಲ್ಲದೇ ಬೆಳಗಾವಿ ಸಂತೋಷ್ ಪಾಟೀಲ್ ಕಾಮಗಾರಿ ಮಾಡಿ ಕೊನೆಗೆ ಬಿಲ್ ಆಗದೆ ಆತ್ಮಹತ್ಯೆ ಮಾಡಿಕೊಂಡಿರುವುದು ಭಾರೀ ಸಂಚಲನ ಮೂಡಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರ, ಯಾವುದೇ ಮೌಖಿಕ ಆದೇಶದ ಮೇರೆಗೆ ಕಾಮಗಾರಿ ಮಾಡಬಾರದು. ಮೌಖಿಕ ಆದೇಶದ ಮೇರೆಗೆ ಟೆಂಡರ್ ಆರಂಭಿಸಿದ್ರೆ ಅದಕ್ಕೆ ಅಧಿಕಾರಿಗಳೇ ಹೊಣೆ ಆಗಿರುತ್ತಾರೆ ಎಂದು ಸಿಎಂ ಬೊಮ್ಮಾಯಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಇಂದು(ಬುಧವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, 50 ಕೋಟಿ ಮೇಲ್ಪಟ್ಟದ ಮೇಲ್ಪಟ್ಟ ಟೆಂಡರ್ ಪ್ರಕ್ರಿಯೆಗೆ ಆಯೋಗ ರಚಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಎಸ್ಟಿಮೇಟ್ ನಿಂದ ಸಮಸ್ಯೆ ಆಗುತ್ತಿದೆ ಎಂಬುದು ಮನವರಿಕೆ ಆಗಿದೆ. ಉನ್ನತಮಟ್ಟದ ರಿಟೈರ್ಡ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶ,ಇಲಾಖೆಯ ಫೈನಾಷಿಯಲ್ ತಜ್ಞರು ಮತ್ತು ಇಲಾಖೆಯ ತಂತ್ರಿಕಸಲಹೆಗಾರ ಈ ಆಯೋಗದಲ್ಲಿ ಇರುತ್ತಾರೆ. ಟೆಂಡರ್ ಕಂಡಿಷನ್ ಕೆಟಿಟಿಪಿ ಆಕ್ಟ್ ಪ್ರಕಾರ ಇದೆಯೋ ಇಲ್ಲವೋ ಅದನ್ನ ಈ ಆಯೋಗ ಪರಿಶೀಲಿಸಿ ಅನುಮೋದನೆ ನೀಡುತ್ತದೆ ಎಂದು ಹೇಳಿದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರಿಡಲು ತೀರ್ಮಾನ, ಕೇಂದ್ರಕ್ಕೆ ಶಿಫಾರಸ್ಸು
ಆಯೋಗದ ಒಂದು ವಾರದೊಳಗೆ ಅಸ್ತಿತ್ವಕ್ಕೆ ಬರುತ್ತದೆ. 50 ಕೋಟಿ ಮೇಲಿನ ಕಮಿಟಿ ಮುಂದೆ ಬರಲಿದೆ. ಸ್ಥಳೀಯ ಸಂಸ್ಥೆಗಳಿಗೆ ಮೌಖಿಕ ಆದೇಶದಲ್ಲಿ ಕಾಮಗಾರಿ ನಡೆಯುತ್ತಿದೆ ಎಂಬ ದೂರುಗಳಿವೆ. ಮೌಖಿಕ ಆದೇಶದಲ್ಲಿ ಕೆಲಸಕ್ಕೆ ಆದ್ಯತೆ ಇಲ್ಲ.ಸೆಕ್ಷನ್ ಆಫಿಸರ್, ಪಿಡಿಒ ಇದಕ್ಕೆ ಜವಬ್ದಾರಿಯಾಗುತ್ತಾರೆ. ಇದನ್ನ ಶಿವಮೊಗ್ಗ ಡಿಸಿ ಮತ್ತು ಜಿಪಂ ಸಿಇಒಗೆ ಸೂಚಿಸಿದ್ದೇನೆ. ಈ ಕಮಿಟಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನ ನೋಡಿ ಜಿಲ್ಲಾಮಟ್ಟದ ಕಮಿಟಿ ರಚನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಅರಣ್ಯ ಭೂಮಿಯ ಬಗ್ಗೆ ಕಾನೂನು ಕ್ರಮ
ಅರಣ್ಯ ಭೂಮಿಯ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುಲು ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ವಿಶೇಷ ಸಭೆಯನ್ನ ಮೇ ಮೊದಲನೇ ವಾರ ಕರೆಯಲಾಗಿದ್ದು ಅಧಿಕಾರಿಗಳ, ಜನಪ್ರತಿ ನಿಧಿಗಳ ಸಭೆ ನಡೆಸಲಾಗುತ್ತಿದೆ ಎಂದರು.
ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶದ ಅರಣ್ಯ ಭೂಮಿಯ ಒತ್ತುವರಿಯನ್ನ ಬಗೆ ಹರಿಸಲು ಮತ್ತು ಅರಣ್ಯ ಒತ್ತುವರಿ ಕುರಿತು ಸ್ಪಷ್ಟನೆ, ಕಾನೂನು ಬದಲಾವಣೆ, ಕೇಂದ್ರ ಸರ್ಕಾರ ಕ್ರಮ ಜರುಗಿಸಲು ನಾಲ್ಕೈದು ಜಿಲ್ಲೆಯ ಎಲ್ಲಾ ಜನಪ್ರತಿನಿಧಿ, ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದು ಪರಿಹಾರ ಕಂಡುಕೊಳ್ಳಲಾಗುವುದು. ಕೆಲವುದಕ್ಕೆ ತಕ್ಷಣ ಪರಿಹಾರ. ಶೀಘ್ರ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಲ್ಯಾಂಡ್ ಗ್ರಾಬಿಂಗ್ ಮಾಡುವಾಗ ಬೆಂಗಳೂರನ್ನಕೇಂದ್ರಿಕರಿಸಿ ಕಾನೂನು ಮಾಡಲಾಗಿತ್ತು. ಅದು ಇಡೀ ರಾಜ್ಯಕ್ಕೆ ಅನ್ವಯಿಸಿದೆ. ಹೀಗಾಗಿ ಬೆಂಗಳೂರಿನ ಭೂ ಕಬಳಿಕೆಯನ್ನ ಇತರೆ ಭಾಗದಲ್ಲಿ ಹೋಲಿಕೆ ಮಾಡುವುದು ಸರಿಯಲ್ಲ. ಇಲ್ಲಿನವರು ನ್ಯಾಯಾಲಯಕ್ಕಾಗಿ ಬೆಂಗಳೂರಿಗೆ ಬರಬೇಕಿದೆ. ಗ್ರಾಮೀಣ ಮತ್ತು ಸಣ್ಣ ನಗರವನ್ನ ಹೊರತು ಪಡಿಸಿ ಭೂಕಬಳಿ ನೀತಿಯನ್ನ ಪ್ರತ್ಯೇಕವಾಗಿ ತರಲಾಗುತ್ತಿದೆ ಎಂದು ಮಾಹಿತಿ ನೀಡಿದರು.