ಕೆಎಸ್ಸಾರ್ಟಿಸಿಯಿಂದ ಹಬ್ಬಕ್ಕಿಲ್ಲ ಹೆಚ್ಚು ಬಸ್‌, ಖಾಸಗಿಯತ್ತ ಜನ..!

ಕೆಎಸ್ಸಾರ್ಟಿಸಿ ಹಬ್ಬದ ವಿಶೇಷ ಬಸ್‌ಗಳ ಸಂಖ್ಯೆ 1500 ರಿಂದ 500ಕ್ಕೆ ಇಳಿಕೆ, ವಿಶೇಷ ಬಸ್‌ಗಳು ಬಹುತೇಕ ಐಷಾರಾಮಿ; ಟಿಕೆಟ್‌ ದರ ಶೇ.20 ಹೆಚ್ಚು

No Special Buses from KSSRTC for Festival in Karnataka grg

ಬೆಂಗಳೂರು(ಆ.28):  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ದೊಡ್ಡ ಹಬ್ಬಗಳಲ್ಲಿ ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ತೆರಳಲು ನೀಡುತ್ತಿದ್ದ ವಿಶೇಷ ಬಸ್‌ ಸೌಲಭ್ಯವನ್ನು ಈ ಬಾರಿಯ ಗಣೇಶ ಹಬ್ಬದಲ್ಲಿ ಮೂರನೇ ಒಂದು ಭಾಗಕ್ಕೆ ಇಳಿಸಿದೆ. ಅಚ್ಚರಿ ಎಂದರೆ, ಟಿಕೆಟ್‌ ಬುಕ್ಕಿಂಗ್‌ ವೆಬ್‌ಸೈಟ್‌ನಲ್ಲಿ ಬೆಂಗಳೂರಿನಿಂದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಸಾಮಾನ್ಯ ಸಾರಿಗೆ ಬಸ್‌ಗಳು (ಕೆಂಪು ಬಸ್ಸುಗಳು) ಒಂದೂ ಲಭ್ಯವಿಲ್ಲ! ಅಲ್ಲದೆ, ಹಬ್ಬಕ್ಕೆ ಬಿಟ್ಟಿರುವ ವಿಶೇಷ ಬಸ್‌ಗಳು ಬಹುತೇಕ ಐಷಾರಾಮಿಯಾಗಿದ್ದು, ಇವುಗಳ ಟಿಕೆಟ್‌ ದರ ಶೇ.20ರಷ್ಟುಹೆಚ್ಚಿಸಲಾಗಿದೆ. ಹುಬ್ಬಳ್ಳಿ, ಮಂಗಳೂರು, ಬೆಳಗಾವಿ ಸೇರಿದಂತೆ ಹಲವೆಡೆ ತೆರಳುವ ಪ್ರಯಾಣಿಕರು 150 ರಿಂದ 200 ರು. ಹೆಚ್ಚುವರಿ ದರ ನೀಡಬೇಕಿದೆ. ಕೆಎಸ್‌ಆರ್‌ಟಿಸಿಯ ಈ ನಡೆಯು ಖಾಸಗಿ ಸಾರಿಗೆ ಸಂಸ್ಥೆಗಳ ಸುಲಿಗೆಗೆ ದಾರಿ ಮಾಡಿಕೊಡುತ್ತಿವೆ ಎಂದು ಪ್ರಯಾಣಿಕ ವಲಯದಿಂದ ಆರೋಪ ಕೇಳಿಬಂದಿದೆ.

ಕೆಎಸ್‌ಆರ್‌ಟಿಸಿ ಸಾಮಾನ್ಯವಾಗಿ ಯುಗಾದಿ, ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಹಬ್ಬಗಳ ಹಿಂದಿನ ದಿನಗಳಲ್ಲಿ ಬೆಂಗಳೂರಿನಿಂದ ರಾಜ್ಯದ ವಿವಿಧೆಡೆಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕೆ 1,500 ವಿಶೇಷ ಬಸ್‌ಗಳನ್ನು ನಿಗದಿಪಡಿಸುತ್ತಿತ್ತು. ಆದರೂ, ಪ್ರಯಾಣಿಕರು ಬಸ್‌ ಕೊರತೆ ಎದುರಿಸುತ್ತಿದ್ದರು. ಕೊರೋನಾ ಕಾರಣ 2020, 2021ರ ಹಬ್ಬಗಳಲ್ಲಿ ವಿಶೇಷ ಬಸ್‌ ಸಂಖ್ಯೆ 1,000ಕ್ಕೆ ಇಳಿಕೆ ಮಾಡಿತ್ತು.

ಸಾರಿಗೆ ನಿಗಮಗಳಿಗೆ ಸರ್ಕಾರ 1,050 ಕೋಟಿ ರು. ಬಿಡುಗಡೆ: ನಿಟ್ಟುಸಿರು ಬಿಟ್ಟ ಸಿಬ್ಬಂದಿ

ಆದರೆ, ಸದ್ಯ ಗಣೇಶ ಹಬ್ಬಕ್ಕೆ 500ಕ್ಕೆ ಸೀಮಿತಗೊಳಿಸಿದೆ. ಈ ಮೂಲಕ ವಿಶೇಷ ಬಸ್‌ ವ್ಯವಸ್ಥೆ ಮೂರನೇ ಒಂದು ಭಾಗ ತಗ್ಗಿದೆ. ಸರ್ಕಾರದ ನಿರ್ಬಂಧ ಇಲ್ಲದೆ ಕಾರಣ ಈ ಬಾರಿ ಹಬ್ಬ ಕಳೆದ ಎರಡು ವರ್ಷಕ್ಕಿಂತಲೂ ಅದ್ಧೂರಿಯಾಗಿ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಊರಿಗೆ ತೆರಳುತ್ತಿದ್ದಾರೆ. ಆದರೂ, ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳನ್ನು ಕೊರೋನಾ ಕಾಲಕ್ಕಿಂತ ಇಳಿಸಿದ್ದು, ಪ್ರಯಾಣಿಕರು ಖಾಸಗಿ ಬಸ್‌ಗಳನ್ನು ಅವಲಂಭಿಸುವ ಅನಿವಾರ್ಯತೆಯನ್ನು ಸೃಷ್ಟಿಸಿದೆ.

ಉ. ಕರ್ನಾಟಕಕ್ಕೆ ಸಾಮಾನ್ಯ ಬಸ್‌ಗಳೇ ಇಲ್ಲ!:

ಕೆಎಸ್‌ಆರ್‌ಟಿಸಿ ಟಿಕೆಟ್‌ ಬುಕ್ಕಿಂಗ್‌ ವೆಬ್‌ಸೈಟ್‌ನಲ್ಲಿ ಸೋಮವಾರ ಮತ್ತು ಮಂಗಳವಾರ ಬೀದರ್‌, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳಿಗೆ ಒಂದೇ ಒಂದು ಸಾಮಾನ್ಯ ಸಾರಿಗೆ ಬಸ್‌ ಲಭ್ಯವಿಲ್ಲ, ಒಂದು ಅಥವಾ ಎರಡು ಐಷಾರಾಮಿ ಬಸ್‌ಗಳಿವೆ. ವಿಜಯಪುರ, ಗದಗ ಒಂದು ಸಾಮಾನ್ಯ ಬಸ್‌, ರಾಯಚೂರಿಗೆ ಮೂರು, ಕಲಬುರಗಿಗೆ ಐದು ಸಾಮಾನ್ಯ ಬಸ್‌ಗಳಿವೆ. ಹೀಗಾಗಿ, ಉತ್ತರ ಕರ್ನಾಟಕ ಜಿಲ್ಲೆಗಳ ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ಬಸ್‌ ಕಡೆ ಮುಖಮಾಡಬೇಕಿದೆ.

ವಿಶೇಷ ಬಸ್‌ಗಳ ಪ್ರಮಾಣ ಇಳಿಕೆ ಮತ್ತು ಉತ್ತರ ಕರ್ನಾಟಕ ಬಸ್‌ ಕೊರತೆ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ಹಬ್ಬದ ಹಿಂದಿನ ದಿನ ಪ್ರಯಾಣಿಕರ ದಟ್ಟಣೆ ಆಧರಿಸಿ ಸ್ಥಳದಲ್ಲಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತದೆ. ವಾಯವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ಬಸ್‌ಗಳ ಆನ್‌ಲೈನ್‌ ಬುಕ್ಕಿಂಗ್‌ ಲಭ್ಯವಿಲ್ಲ’ ಎನ್ನುತ್ತಾರೆ.

KSRTC Transfer Scam; ಶ್ರೀರಾಮುಲು ವಿರುದ್ಧ ಬಹುದೊಡ್ಡ ಭ್ರಷ್ಟಾಚಾರ ಆರೋಪ!

ವಿಶೇಷ ಬಸ್‌ ದರ ಶೇ.20 ರಷ್ಟು ಹೆಚ್ಚಳ:

ಹಬ್ಬದ ವಿಶೇಷ ಬಸ್‌ಗಳು ಬಹುತೇಕ ರಾಜಹಂಸ, ವೋಲ್ವೊ, ಸ್ವೀಪರ್‌ ನಾನ್‌ ಎಸಿ, ಸ್ಲೀಪರ್‌ ಎಸಿ ಬಸ್‌ಗಳಾಗಿವೆ. ಇವುಗಳ ದರವು ಶೇ.20 ರಷ್ಟುಹೆಚ್ಚಿಸಲಾಗಿದೆ. ಮಂಗಳೂರಿಗೆ ಐರಾವತ ಬಸ್‌ ದರ 809 ರು.ಇದ್ದು, ವಿಶೇಷ ಐರಾವತ ಬಸ್‌ ದರ 959 ರು. ಇದೆ. ಹುಬ್ಬಳ್ಳಿಗೆ ಎಸಿ ಸ್ಲೀಪರ್‌ ವಿಶೇಷ ಬಸ್‌ ದರ 880 ರು.ನಿಂದ 1045 ರು., ನಾನ್‌ ಎಸಿ ಸ್ಲೀಪರ್‌ 726 ರು.ರಿಂದ 900 ರು.ಗೆ ಐರಾವತ 760 ರು.ನಿಂದ 859 ರು.ಗೆ ಹೆಚ್ಚಳವಾಗಿದೆ. ಇದೇ ರೀತಿ ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ಸಂಚರಿಸುವ ವಿಶೇಷ ಬಸ್‌ ದರ ಹೆಚ್ಚಳವಾಗಿದೆ.

ಹಬ್ಬದ ಹಿಂದಿನ ದಿನ ಬಾಗಲಕೋಟೆಗೆ ಒಂದೇ ಒಂದು ಸ್ಲೀಪರ್‌ ಬಸ್‌ ಬಿಟ್ಟರೆ ಸಾಮಾನ್ಯ, ರಾಜಹಂಸ, ಐರಾವತ ಬಸ್‌ಗಳು ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ. ಕುಟುಂಬ ಜತೆ ಹೊರಟಿದ್ದು, ಅಂದು ಜನ ದಟ್ಟಣೆಯಲ್ಲಿ ಬಸ್‌ ಸಿಗುತ್ತದೆಯೋ ಇಲ್ಲವೋ ತಿಳಿಯದೇ ಅನಿವಾರ್ಯವಾಗಿ ಖಾಸಗಿ ಬಸ್‌ ಬುಕ್‌ ಮಾಡಬೇಕಾಯಿತು. ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ಸೇರಿ ಕೆಲ ಜಿಲ್ಲೆಗಳಿಗೆ ಮಾತ್ರ ಸಾರಿಗೆ ಬಸ್‌ ಬುಕ್ಕಿಂಗ್‌ ಸೀಮಿತವಾಗಿದೆ ಅಂತ ಉತ್ತರ ಕರ್ನಾಟಕ ಮೂಲದ ಬೆಂಗಳೂರು ಟೆಕ್ಕಿ ಆನಂದ್‌ ಹಳ್ಳೂರು ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios