ಬೆಂಗಳೂರು (ಫೆ. 04):  ಕನ್ನಡದಲ್ಲಿ ಮಾತಾಡಿದ್ದಕ್ಕೆ ದಂಡ ವಿಧಿಸುತ್ತಿದ್ದ ಎಸ್‌ಎಲ್‌ಎಸ್‌ ಇಂಟರ್‌ನ್ಯಾಷನಲ್‌ ಗುರುಕುಲ ಶಾಲೆ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಎಚ್ಚರಿಕೆ ನೀಡಿದ್ದಾರೆ.

ಹೊರಮಾವಿನ ಚನ್ನಸಂದ್ರದಲ್ಲಿರುವ ಎಸ್‌ಎಲ್‌ಎಸ್‌ ಇಂಟರ್‌ನ್ಯಾಷನಲ್‌ ಗುರುಕುಲ ಶಾಲೆಯಲ್ಲಿ ಕನ್ನಡದಲ್ಲಿ ಮಾತನಾಡುವ ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗುತ್ತಿದೆ ಎಂಬ ದೂರಿನನ್ವಯ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸೋಮವಾರ ಶಾಲೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಶಿಕ್ಷಣ ಹಕ್ಕು ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಶಾಲೆ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ ನೀಡಿದರು.

ವಿಶೇಷ ಅಭಿಮಾನಿ ಭೇಟಿ ಮಾಡಿದ ನಿರ್ದೇಶಕ ರಿಷಬ್ ಶೆಟ್ಟಿ

ಶಾಲಾ ಆಡಳಿತ ಮಂಡಳಿಯು ಯುಎನ್‌ಸಿಆರ್‌ಸಿ ನಿಯಮ ಹಾಗೂ ಭಾರತ ಸಂವಿಧಾನದ 39ನೇ ವಿಧಿಯನ್ನು ಹಾಗೂ ಶಿಕ್ಷಣ ಹಕ್ಕು ಕಾಯ್ದೆಯ ನಿಯಮ 17ಅನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಪರಿಶೀಲನಾ ಸಮಯದಲ್ಲಿ ಕಂಡು ಬಂದಿದೆ. ವೆಬ್‌ಸೈಟ್‌ನಲ್ಲಿ ಪ್ರಧಾನವಾಗಿ ಕನ್ನಡ ಬಳಸಬೇಕೆಂಬ ನಿಯಮವಿದ್ದರೂ ವೆಬ್‌ಸೈಟ್‌ ಸಂಪೂರ್ನ ಆಂಗ್ಲಮಯವಾಗಿದೆ.

ಅಲ್ಲದೇ ಶಾಲಾ ಆವರಣದಲ್ಲಿ ಕನ್ನಡದಲ್ಲಿ ಮಾತಾಡಿದ ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ 50 ರು. ಹಾಗೂ 2ನೇ ಬಾರಿಗೆ ಕನ್ನಡದಲ್ಲಿ ಮಾತಾಡಿದರೆ 100 ರು. ದಂಡ ವಿಧಿಸುತ್ತಿರುವುದು ಖಂಡನಾರ್ಹ. ವಿವಿಧ ವಿಷಯಗಳನ್ನು ಬೋಧನೆ ಮಾಡುವ ಶಿಕ್ಷಕರನ್ನು ಮತ್ತು ಶಾಲೆಯ ಮುಖ್ಯಶಿಕ್ಷಕರನ್ನು ನಿಯಮ ಉಲ್ಲಂಘಿಸಿ ಅನರ್ಹರನ್ನು ನೇಮಕ ಮಾಡಿಕೊಂಡಿರುವ ಆಡಳಿತ ಮಂಡಳಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಶಾಲೆಯಲ್ಲಿ ಕನ್ನಡ ಮಾತನಾಡುವ ವಿದ್ಯಾರ್ಥಿಗಳಿಗೆ ದಂಡ ವಿಧಿಸುವುದನ್ನು ಮತ್ತು ಅನರ್ಹ ಶಿಕ್ಷಕರ ನೇಮಕಾತಿ ಬಗ್ಗೆ ತಪ್ಪೊಪ್ಪಿಕೊಂಡ ಶಾಲೆಯ ಆಡಳಿತ ಮಂಡಳಿ, ಇನ್ನು ಮುಂದೆ ಇಂತಹ ತಪ್ಪುಗಳಾಗದಂತೆ ಎಚ್ಚರ ವಹಿಸುವುದಾಗಿ ತಿಳಿಸಿತು.

ಪರಿಶೀಲನಾ ತಂಡದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಸಿ ಡಾ.ಕೆ.ಮುರಳೀಧರ, ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಿ.ಹನುಮಂತರಾಯ, ಶಿವಪ್ರಕಾಶ್‌ ಸೇರಿದಂತೆ ಮತ್ತಿತರರು ಇದ್ದರು.

ಕನ್ನಡ ಮಾತಾಡುವ ವಿದ್ಯಾರ್ಥಿಗಳಿಗೆ ದಂಡ ವಿಧಿಸುತ್ತಿರುವುದು ಸರಿಯಲ್ಲ. ಈ ನಡುವೆ ಶಾಲೆ ಆವರಣದಲ್ಲಿ ಕನ್ನಡ ಮಾತನಾಡಿದರೆ ದಂಡ ವಿಧಿಸುವ ನಿಯಮ ಜಾರಿಗೆ ತಂದಿರುವ ಶಾಲೆಯ ಆಡಳಿತ ಮಂಡಳಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ. ಜತೆಗೆ ರಾಜ್ಯ ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಶಾಲೆಯಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ಆರ್‌ಟಿಇ ಕಾಯ್ದೆ ಉಲ್ಲಂಘನೆ ಮಾಡಲಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.