ಶೆಡ್‌ಗಳ ತೆರವು ಕಾರ್ಯಾಚರಣೆ ನಡೆಸಿದ ನಗರದ ಕೋಗಿಲು ಕ್ರಾಸ್‌ ಬಳಿಯ ಫಕೀರ್‌ ಕಾಲೋನಿ, ವಸೀಂ ಲೇಔಟ್‌ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿ ಪರಿಶೀಲಿಸಿದ್ದು, ಹೊಸದಾಗಿ ಕೊಳಗೇರಿ ನಿರ್ಮಾಣಕ್ಕೆ ಮತ್ತು ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡುವುದಿಲ್ಲ ಎಂದರು

 ಬೆಂಗಳೂರು : ಸರ್ಕಾರಿ ಭೂಮಿಯಲ್ಲಿ ನಿರ್ಮಾಣಗೊಂಡಿದ್ದ ಶೆಡ್‌ಗಳ ತೆರವು ಕಾರ್ಯಾಚರಣೆ ನಡೆಸಿದ ನಗರದ ಕೋಗಿಲು ಕ್ರಾಸ್‌ ಬಳಿಯ ಫಕೀರ್‌ ಕಾಲೋನಿ, ವಸೀಂ ಲೇಔಟ್‌ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿ ಪರಿಶೀಲಿಸಿದ್ದು, ಹೊಸದಾಗಿ ಕೊಳಗೇರಿ ನಿರ್ಮಾಣಕ್ಕೆ ಮತ್ತು ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಫಕೀರ್‌ ಕಾಲೋನಿ, ವಸೀಂ ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಶೆಡ್‌ ಮತ್ತು ಮನೆಗಳ ತೆರವು ಪ್ರಕರಣ ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಒತ್ತುವರಿ ತೆರವು ಕಾರ್ಯಾಚರಣೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಧರ್ಮದ ಬಣ್ಣ ಬಳಿದ ನಂತರ ರಾಜ್ಯ ಸರ್ಕಾರ ಮತ್ತು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕ್ರಮದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಕಳೆದೆರಡು ದಿನಗಳಿಂದ ಕರ್ನಾಟಕ ಮತ್ತು ಕೇರಳದ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಮನೆ ಕಳೆದುಕೊಂಡವರ ಜತೆ ಮಾತುಕತೆ ನಡೆಸಿದ್ದರು.

ಅದರಂತೆ ಸೋಮವಾರ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೋಗಿಲು ಕ್ರಾಸ್‌ ಬಳಿಯ ಫಕೀರ್‌ ಕಾಲೋನಿ, ವಸೀಂ ಲೇಔಟ್‌ಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳೊಂದಿಗೆ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಅಕ್ರಮ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳನ್ನು ಡಿ.ಕೆ.ಶಿವಕುಮಾರ್‌ ತರಾಟೆಗೂ ತೆಗೆದುಕೊಂಡರು.

ದಾಖಲೆ ಪರಿಶೀಲಿಸಿದ ಡಿಸಿಎಂ:

ಫಕೀರ್‌ ಕಾಲೋನಿ, ವಸೀಂ ಲೇಔಟ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಅವರು, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಗೆ ಸೇರಿದ್ದ ಜಾಗವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದರು. ಈ ವೇಳೆ ಶೆಡ್‌ ಮತ್ತು ಮನೆ ಕಳೆದುಕೊಂಡಿರುವವರ ಅಹವಾಲು ಆಲಿಸಿದರು. ಅದರಲ್ಲಿ ಬಹುತೇಕರು, ತಾವು 10 ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಇಲ್ಲಿ ವಾಸಿಸುತ್ತಿದ್ದು, ಇಲ್ಲಿಂದ ಒಕ್ಕಲೆಬ್ಬಿಸಿದರೆ ನಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.

ಅದಕ್ಕೆ ಡಿ.ಕೆ.ಶಿವಕುಮಾರ್‌ ಅವರು, ಈ ಬಗ್ಗೆ ಚರ್ಚೆ ಮಾಡುತ್ತೇವೆ. ಯಾರೆಲ್ಲ ಅರ್ಹರಿದ್ದಾರೋ, ವಸತಿ ಮತ್ತು ನಿವೇಶನ ವಂಚಿತರಾಗಿದ್ದಾರೋ ಅವರಿಗೆ ಬೇರೆ ವ್ಯವಸ್ಥೆ ಮಾಡುವ ಚಿಂತನೆಯಿಂದೆ ಎಂದು ಭರವಸೆ ನೀಡಿದರು. ಜತೆಗೆ ನಿವಾಸಿಗಳ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿಗಳನ್ನು ಪಡೆದು ಪರಿಶೀಲನೆ ನಡೆಸಿದರು.

188 ಮನೆಗಳ ತೆರವು:

ಕಳೆದ ಕೆಲ ದಿನಗಳ ಹಿಂದೆ ಜಿಬಿಎ ಅಧಿಕಾರಿಗಳು ಫಕೀರ್‌ ಕಾಲೋನಿ, ವಸೀಂ ಲೇಔಟ್‌ನಲ್ಲಿನ 188 ಮನೆಗಳನ್ನು ತೆರವು ಮಾಡಿದ್ದಾರೆ. ಸದ್ಯಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ತೆರವು ಕಾರ್ಯಾಚರಣೆ ನಂತರವೂ ಶೆಡ್‌ ಮತ್ತು ಮನೆ ಕಳೆದುಕೊಂಡವರು ಅಲ್ಲಿಯೇ ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿ ವಾಸವಾಗಿದ್ದಾರೆ.

ನಿರಾಶ್ರಿತರ ಮಾಹಿತಿ ಪಡೆದ ವಸತಿ ನಿಗಮ

ಭಾನುವಾರವಷ್ಟೇ ವಸತಿ ಸಚಿವ ಜಮೀರ್‌ ಅಹಮದ್ ಖಾನ್‌ ಸ್ಥಳಕ್ಕೆ ಭೇಟಿ ನೀಡಿ ಅರ್ಹರಿಗೆ ಮನೆ ಕೊಡುತ್ತೇವೆ ಎಂದು ಘೋಷಿಸಿದ್ದರು. ಅದರ ಬೆನ್ನಲ್ಲೇ ಸೋಮವಾರ ರಾಜೀವ್‌ಗಾಂಧಿ ವಸತಿ ನಿಗಮದ ಅಧಿಕಾರಿಗಳು, ಫಕೀರ್‌ ಕಾಲೋನಿ, ವಸೀಂ ಲೇಔಟ್‌ಗೆ ಭೇಟಿ ನೀಡಿ ಶೆಡ್‌ ಮತ್ತು ಮನೆ ಕಳೆದುಕೊಂಡವರ ಮಾಹಿತಿ ಪಡೆದರು. ಪ್ರತಿಯೊಬ್ಬರನ್ನೂ ಭೇಟಿಯಾಗಿ ಅವರ ಮಾಹಿತಿ ದಾಖಲಿಸಿಕೊಂಡರು.

ಸೋಲುವ ಭೀತಿಯಿಂದ ಕೇರಳ ಸಿಎಂ ಕುತಂತ್ರ ರಾಜಕೀಯ: ಡಿಕೆಶಿ

ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದಾಗಿ ಕೋಗಿಲು ಬಡಾವಣೆ ಅಕ್ರಮ ಒತ್ತುವರಿ ತೆರವು ವಿಚಾರದಲ್ಲಿ ಕೇರಳ ಸಿಎಂ ಕುತಂತ್ರ ರಾಜಕೀಯ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರ ಸಿಂಪತಿ ಪಡೆಯುವ ಕೆಲಸಕ್ಕಿಳಿದಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕುಟುಕಿದ್ದಾರೆ.

ಕೋಗಿಲು ಬಳಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ ಸ್ಥಳ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಘನತ್ಯಾಜ್ಯ ವಿಲೇವಾರಿಗಾಗಿ ನಿಗದಿ ಮಾಡಲಾಗಿದ್ದ ಜಾಗವನ್ನು ಒತ್ತುವರಿ ಮಾಡಿ ಶೆಡ್‌, ಮನೆಗಳನ್ನು ನಿರ್ಮಿಸಲಾಗಿತ್ತು. ಸರ್ಕಾರಿ ಜಾಗವಾಗಿರುವ ಕಾರಣ ನಿವಾಸಿಗಳಿಗೆ ಆ ವಿಳಾಸಕ್ಕೆ ಮತದಾರರ ಗುರುತಿನ ಚೀಟಿ ನೀಡಿಲ್ಲ. ಅಕ್ಕಪಕ್ಕದ ಪ್ರದೇಶದ ವಿಳಾಸಕ್ಕೆ ಮತದಾರರ ಗುರುತಿನ ಚೀಟಿ ನೀಡಲಾಗಿದೆ. ಅಲ್ಲದೆ, ಒತ್ತುವರಿ ತೆರವು ಮಾಡುವುದಕ್ಕೂ ಮುನ್ನ ಅಧಿಕಾರಿಗಳು ನಿವಾಸಿಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಒತ್ತುವರಿ ಜಾಗವು ತ್ಯಾಜ್ಯ ವಿಲೇವಾರಿ ಮಾಡುವ ಸ್ಥಳವಾಗಿದ್ದು, ವಾಸಕ್ಕೆ ಯೋಗ್ಯವಾಗಿಲ್ಲ. ಹೀಗಾಗಿ ಜನರ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು, ಸರ್ಕಾರಿ ಭೂಮಿ ಉಳಿಸಲು ತೆರವು ಮಾಡಲಾಗಿದೆ ಎಂದರು.

ಇದೆಲ್ಲ ತಿಳಿಯದ ಕೆಲವರು ರಾಜಕೀಯ ಬೆರೆಸುತ್ತಿದ್ದಾರೆ. ಕಮ್ಯುನಿಸ್ಟ್‌ ಪಕ್ಷದವರು ಕೇರಳದಲ್ಲಿ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಈ ವಿಚಾರವನ್ನು ದೊಡ್ಡದು ಮಾಡಿ ಅಲ್ಪಸಂಖ್ಯಾತರ ಸಿಂಪತಿ ಪಡೆಯಲು ಮುಂದಾಗಿದ್ದಾರೆ. ಕೇರಳ ಸಿಎಂ ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಪಡೆಯಬೇಕು. ಇದು ನಮ್ಮರಾಜ್ಯದ ಸ್ಥಳೀಯ ವಿಚಾರ. ನಾನು ಇಲ್ಲಿಗೆ ಬಂದಾಗ ಅಲ್ಪಸಂಖ್ಯಾತ ಸಮುದಾಯದವರು ನಮಗೆ ಜೈಕಾರ ಹಾಕುತ್ತಿದ್ದರು. ನಾವು ತಪ್ಪು ಮಾಡಿದ್ದರೆ ಧಿಕ್ಕಾರ ಕೂಗುತ್ತಿದ್ದರು ಎಂದು ಹೇಳಿದರು.

ಹಣ ಪಡೆದು ಶೆಡ್‌ ನಿರ್ಮಾಣಕ್ಕೆ ಅವಕಾಶ:

ಕೆಲವರು ನಿವಾಸಿಗಳಿಂದ ಒಂದು-ಒಂದೂವರೆ ಲಕ್ಷ ಹಣ ಪಡೆದು ಅಕ್ರಮವಾಗಿ ಗುಡಿಸಲು ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಕುರಿತು ಮಾಹಿತಿ ಪಡೆಯಲು ಸೂಚಿಸಿದ್ದೇನೆ. ತನಿಖಾ ತಂಡ ಆ ಬಗ್ಗೆ ಪರಿಶೀಲನೆ ಮಾಡಲಿದೆ. ಸರ್ಕಾರಿ ಜಾಗವನ್ನು ಅಕ್ರಮವಾಗಿ ಹಂಚಿರುವ ಭೂಗಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೆಲವರು ರಾತ್ರೋರಾತ್ರಿ ಶೆಡ್‌, ಮನೆ ನಿರ್ಮಿಸಿಕೊಂಡಿದ್ದಾರೆ. ಈ ಎಲ್ಲದರ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.