ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಲಾ ವಸ್ತ್ರಸಂಹಿತೆ ಕುರಿತು ಸ್ಪಷ್ಟನೆ ನೀಡಿದ್ದು, ಸಾಂಪ್ರದಾಯಿಕ ಉಡುಗೆಗಳಾದ ಹಿಜಾಬ್, ಜನಿವಾರಕ್ಕೆ ಅವಕಾಶವಿದೆ ಆದರೆ ಹೊಸದಾಗಿ ಕೇಸರಿ ಶಾಲು ಧರಿಸಲು ಅನುಮತಿ ಇಲ್ಲ ಎಂದಿದ್ದಾರೆ. ಇದೇ ವೇಳೆ, ನೀಟ್ ಪರೀಕ್ಷೆ ವೈಫಲ್ಯಕ್ಕೆ ಕೇಂದ್ರವನ್ನು ದೂಷಿಸಿದ್ದಾರೆ.

ಮೈಸೂರು (ಮೇ 14): ರಾಜ್ಯದ ಶಿಕ್ಷಣ ಇಲಾಖೆ ಆದೇಶದ ಅನುಸಾರ ಶಾಲೆಗಳಿಗೆ ಕೇಸರಿ ಶಾಲು ಹಾಕಿಕೊಂಡು ಬರುವಂತಿಲ್ಲ, ಆದರೆ ಸಾಂಪ್ರದಾಯಿಕವಾಗಿ ಧರಿಸುವ ಜನಿವಾರ, ಶಿವದಾರ ಅಥವಾ ಹಿಜಾಬ್‌ಗೆ ಯಾವುದೇ ತಡೆಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ರಾಜ್ಯದ ಶಾಲೆಗಳಲ್ಲಿ ವಸ್ತ್ರಸಂಹಿತೆ ಮತ್ತು ಧಾರ್ಮಿಕ ಆಚರಣೆಗಳ ಕುರಿತು ನಡೆಯುತ್ತಿರುವ ಚರ್ಚೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಕುರಿತು ಪ್ರತಿಕ್ರಿಯಿಸಿದ ಸಿಎಂ, 'ಯಾವ ಯಾವ ನಂಬಿಕೆ ಮತ್ತು ಆಚರಣೆಗಳು ಮೊದಲಿನಿಂದಲೂ ಚಾಲ್ತಿಯಲ್ಲಿವೆಯೋ ಅವುಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಜನಿವಾರ, ರುದ್ರಾಕ್ಷಿ, ಶಿವದಾರ, ಹಿಜಾಬ್ ಅಥವಾ ಟರ್ಬನ್ (ಪೇಟ) ಧರಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಹೊಸದಾಗಿ ಕೇಸರಿ ಶಾಲು ಹಾಕಿಕೊಂಡು ಬರುವುದಾಗಲಿ ಅಥವಾ ಹೊಸ ರೂಪದ ಬಣ್ಣದ ಪೇಟಗಳನ್ನು ಧರಿಸುವುದಕ್ಕಾಗಲಿ ಅವಕಾಶ ನೀಡುವುದಿಲ್ಲ' ಎಂದರು. ಶಾಲೆಗಳಲ್ಲಿ ಶೈಕ್ಷಣಿಕ ವಾತಾವರಣ ಕೆಡದಂತೆ ಹಳೆಯ ಸಂಪ್ರದಾಯಗಳನ್ನು ಗೌರವಿಸಲಾಗುವುದು ಎಂದು ಅವರು ಆಶ್ವಾಸನೆ ನೀಡಿದರು.

ನೀಟ್ ಪರೀಕ್ಷೆ ಕೇಂದ್ರದ ವೈಫಲ್ಯ:

ದೇಶಾದ್ಯಂತ ಸಂಚಲನ ಮೂಡಿಸಿರುವ 'ನೀಟ್' (NEET) ಪರೀಕ್ಷೆ ಅಕ್ರಮ ಮತ್ತು ರದ್ದು ವಿಚಾರದ ಬಗ್ಗೆಯೂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 'ನಾವು ರಾಜ್ಯದಲ್ಲಿ ಸಿಇಟಿ (CET) ಪರೀಕ್ಷೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಿದ್ದೇವೆ. ಆದರೆ ಕೇಂದ್ರ ಸರ್ಕಾರ ನೀಟ್ ಪರೀಕ್ಷೆಯನ್ನು ಸರಿಯಾಗಿ ನಡೆಸದೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದೆ. ಇದು ವಿದ್ಯಾರ್ಥಿಗಳಿಗೆ ಮಾಡುತ್ತಿರುವ ದೊಡ್ಡ ಅನ್ಯಾಯ. ಮಾಧ್ಯಮಗಳು ಈ ಬಗ್ಗೆ ಕೇಂದ್ರ ಸರ್ಕಾರವನ್ನು ಮೊದಲು ಟೀಕಿಸಬೇಕು' ಎಂದು ಅವರು ಕಿಡಿಕಾರಿದರು.

ಮೋದಿ ಬೆಂಗಾವಲು ವಾಹನ ಕಡಿತ:

ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ವಾಹನಗಳ ಸಂಖ್ಯೆ ಕಡಿತಗೊಳಿಸಿರುವ ಕೇಂದ್ರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಇದು ಕೇವಲ ತಾತ್ಕಾಲಿಕ ಪರಿಹಾರವಷ್ಟೇ. ಈ ಕ್ರಮವನ್ನು ಬೇರೆ ರಾಜ್ಯಗಳು ಹೇಗೆ ಪಾಲಿಸುತ್ತಿವೆ ಎಂಬುದನ್ನು ನಾನು ಗಮನಿಸುತ್ತೇನೆ. ನಂತರ ನಮ್ಮ ರಾಜ್ಯದಲ್ಲಿ ಈ ಬಗ್ಗೆ ತೀರ್ಮಾನ ಮಾಡುತ್ತೇನೆ. ಆದರೆ, ಇದು ಶಾಶ್ವತ ಪರಿಹಾರವಲ್ಲ. ಕೇಂದ್ರ ಸರ್ಕಾರವು ಮೂಲಭೂತ ಸಮಸ್ಯೆಗಳ ಬಗ್ಗೆ ಇತರ ದೇಶಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಆಸಕ್ತಿ ತೋರಿಸಲಿ' ಎಂದು ಸಲಹೆ ನೀಡಿದರು.

ದೆಹಲಿ ಭೇಟಿ ಮತ್ತು ಸಂಪುಟ ಪುನಾರಚನೆ:

ಇನ್ನು ರಾಜ್ಯ ರಾಜಕಾರಣದ ಕುರಿತು ಮಾತನಾಡಿದ ಸಿಎಂ, 'ನನ್ನನ್ನು ಹೈಕಮಾಂಡ್ ಇನ್ನೂ ದೆಹಲಿಗೆ ಕರೆದಿಲ್ಲ. ಅವರು ಕರೆದಾಗ ಮಾತ್ರ ನಾನು ಹೋಗುತ್ತೇನೆ. 15ನೇ ತಾರೀಖು ಹೋಗುತ್ತೇನೆ ಎಂದು ದಿನಾಂಕ ನಿಗದಿ ಮಾಡಿದವರು ಯಾರು? ಸಂಪುಟ ಪುನಾರಚನೆಯ ವಿಚಾರ ಚರ್ಚೆಯಲ್ಲಿದೆ, ಹೈಕಮಾಂಡ್ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಸ್ಪಷ್ಟಪಡಿಸಿದರು.